ಸಚಿವರಾಗಲು ವಿಶ್ವನಾಥ್ ಅನರ್ಹರು
ಮೈಸೂರು

ಸಚಿವರಾಗಲು ವಿಶ್ವನಾಥ್ ಅನರ್ಹರು

December 1, 2020

ಬೆಂಗಳೂರು, ನ.30- ಸಚಿವ ಸ್ಥಾನದ ಕನಸು ಕಾಣುತ್ತಿದ್ದ ವಿಧಾನ ಪರಿಷತ್ ಸದಸ್ಯ ಹಳ್ಳಿಹಕ್ಕಿ ಅಡಗೂರು ಹೆಚ್.ವಿಶ್ವನಾಥ್ ಅವರಿಗೆ ಹೈಕೋರ್ಟ್ ಆದೇಶ ಬಿಗ್ ಶಾಕ್ ನೀಡಿದೆ. ಚುನಾವಣೆಯಲ್ಲಿ ಸೋತು, ವಿಧಾನಪರಿಷತ್‍ಗೆ ನಾಮ ನಿರ್ದೇಶನಗೊಂಡು ಸಚಿವರಾಗಲು ಸಾಧ್ಯವಿಲ್ಲ  ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಅಲ್ಲದೇ ವಿಧಾನ ಪರಿಷತ್ ಸದಸ್ಯರಾಗಿರುವ ಆರ್.ಶಂಕರ್, ಎಂಟಿಬಿ ನಾಗರಾಜ್ ಅವರು ಸಚಿವರಾಗಲು ಯಾವುದೇ ಅಡ್ಡಿ ಇಲ್ಲ. ಅವರಿಗೆ ಸಚಿವ ಸ್ಥಾನ ನೀಡಬಹುದು ಎಂದು ಹೈಕೋರ್ಟ್ ಹಸಿರು ನಿಶಾನೆ ತೋರಿದೆ.

ಅಡಗೂರು ಹೆಚ್.ವಿಶ್ವನಾಥ, ಆರ್. ಶಂಕರ್ ಹಾಗೂ ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠವು, ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹರಾಗಿದ್ದಾರೆ. ಈ ಮೊದಲು ಅವರು ಅನರ್ಹರಾಗಿ ಚುನಾವಣೇಯಲ್ಲಿ ಸ್ಪರ್ಧಿಸಿ ಸೋತು, ನಂತರ ನಾಮ ನಿರ್ದೇಶನಗೊಂಡಿದ್ದಾರೆ. ಆದರೆ ವಿಶ್ವನಾಥ್ ಅನರ್ಹತೆ ಯನ್ನು ಮುಖ್ಯಮಂತ್ರಿಗಳು ಪರಿಗಣಿಸಬೇಕು. ಕಲಂ 164 (1ಬಿ), 361ಬಿ ಅಡಿ ಹೆಚ್.ವಿಶ್ವನಾಥ್ ಅನರ್ಹರಾಗಿದ್ದಾರೆ. ಹೀಗಾಗಿ 2021ರವರೆಗೆ ಅವರು ಸಚಿವ ರಾಗಲು ಅರ್ಹರಲ್ಲ ಎಂಬುದಾಗಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಆದರೆ ಆರ್.ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರು ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಆಯ್ಕೆಗೊಂಡು ಎಂಎಲ್‍ಸಿ ಆಗಿದ್ದಾರೆ, ಹೀಗಾಗಿ ಅವರಿಗೆ ಸಚಿವರಾಗಲು ಯಾವುದೇ ಅಡ್ಡಿ ಇಲ್ಲ. ಆದರೆ ಹೆಚ್.ವಿಶ್ವನಾಥ್ ವಿಧಾನ ಪರಿಷತ್‍ಗೆ ನಾಮ ನಿರ್ದೇಶನ ಗೊಂಡಿದ್ದಾರೆ,. ಹಾಗಾಗಿ ಅವರಿಗೆ ಸಚಿವ ಸ್ಥಾನ ನೀಡುವುದು ಸಾಧುವಲ್ಲ. ಈಗಲೂ ಅವರು ಅನರ್ಹರಾಗಿದ್ದಾರೆ ಎಂದು ಹೈಕೋರ್ಟ್ ವಿಭಾಗೀಯ ಪೀಠವು ಅಭಿಪ್ರಾಯಪಟ್ಟಿದೆ. ಜೆಡಿಎಸ್ ಶಾಸಕರಾಗಿದ್ದ ವಿಶ್ವನಾಥ್ ಆಪರೇಷನ್ ಕಮಲದ ಮೂಲಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇವರನ್ನು ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ನಾಮ ನಿರ್ದೇಶನ ಮಾಡಿದ್ದರು. ವಿಧಾನ ಪರಿಷತ್ ಸದಸ್ಯರಾದ ನಂತರ ಸಚಿವ ಸ್ಥಾನಕ್ಕಾಗಿ ವಿಶ್ವನಾಥ್ ಬೇಡಿಕೆ ಸಲ್ಲಿಸಿದ್ದರು. ಆದರೆ ಸಾಕಷ್ಟು ವಿರೋಧವಿದ್ದರೂ, ಪ್ರಬಲವಾದ ಲಾಬಿ ಮುಂದುವರೆದಿತ್ತು. ಈ ನಡುವೆ ಹೈಕೋರ್ಟ್ ತೀರ್ಪು ಹಳ್ಳಿಹಕ್ಕಿ ವಿಶ್ವನಾಥ್‍ಗೆ ಬಿಗ್ ಶಾಕ್ ನೀಡಿದೆ. ಅಂತೆಯೇ ಆರ್.ಶಂಕರ್, ಎಎಂಟಿಬಿ ನಾಗರಾಜ್‍ಗೆ ನ್ಯಾಯಾಲಯದ ಆದೇಶ ಬಿಗ್ ರಿಲೀಫ್ ನೀಡಿದೆ. ವಿಧಾನ ಪರಿಷತ್‍ಗೆ ನಾಮನಿರ್ದೇಶನಗೊಂಡಿರುವ ವಿಶ್ವನಾಥ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಔಚಿತ್ಯವನ್ನು ಪ್ರಶ್ನಿಸಿ, ಎ.ಎಸ್.ಹರೀಶ್ ಎಂಬುವವರು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿಯನ್ನು ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಶ್ರೀನಿವಾಸ್ ಓಕ, ವಿಶ್ವನಾಥ್ ಶೆಟ್ಟಿ ಒಳಗೊಂಡ ವಿಭಾಗೀಯ ಪೀಠ ಇಂದು ಮಹತ್ವದ ಆದೇಶ ಹೊರಡಿಸಿದೆ.

 

 

 

Translate »