‘ಆಸ್ತಿ’ ಆಸೆ: ಖಾಲಿ ಪತ್ರಗಳ ಮೇಲೆ  ಸತ್ತ ಅಜ್ಜಿಯ ಹೆಬ್ಬೆಟ್ಟು ಮುದ್ರೆ!
ಮೈಸೂರು

‘ಆಸ್ತಿ’ ಆಸೆ: ಖಾಲಿ ಪತ್ರಗಳ ಮೇಲೆ ಸತ್ತ ಅಜ್ಜಿಯ ಹೆಬ್ಬೆಟ್ಟು ಮುದ್ರೆ!

November 29, 2021

ಮೈಸೂರು,ನ.28- ಹಣ ಮತ್ತು ಆಸ್ತಿ ಮುಂದೆ ಮಾನವೀಯ ಮೌಲ್ಯಗಳು ಹೋಗಲಿ ಮನುಷ್ಯತ್ವವೂ ಮಣ್ಣು ಪಾಲಾ ಗುತ್ತಿದೆ. ಒಂದಲ್ಲ ಒಂದು ಕಡೆ ಆಸ್ತಿ ಗಾಗಿಯೇ ಪ್ರಾಣ ವನ್ನೂ ಬಿಡುವು ದರ ನಡುವೆ, ಹೆಣದ ಹೆಬ್ಬೆಟ್ಟು ಮುದ್ರೆ ಹಾಕಿಕೊಂಡು ಆಸ್ತಿ ಗಳಿಸುವ ಮಟ್ಟಕ್ಕೂ ಮನುಷ್ಯ ಮುಂದಾಗಿದ್ದಾನೆ. ಇದಕ್ಕೆ ನಿದರ್ಶನವೊಂದು ವರದಿಯಾಗಿದೆ.

ಮೈಸೂರಿನ ಶ್ರೀರಾಂಪುರದಲ್ಲಿ ಆಸ್ತಿ ಆಸೆಗಾಗಿ ವೃದ್ಧೆಯೊಬ್ಬರ ಶವದ ಹೆಬ್ಬೆಟ್ಟು ಮುದ್ರೆಯನ್ನು ಆಕೆಯ ಸಂಬಂಧಿಕರು ದಾಖಲೆ ಪತ್ರಗಳಿಗೆ ಒತ್ತಿಕೊಂಡಿರುವ ಅಮಾನವೀಯ ಘಟನೆ ವರದಿಯಾಗಿದೆ.

ಮನೆಯಲ್ಲಿ ಮಲಗಿಸಿರುವ ಹೆಣದ ಹೆಬ್ಬೆಟ್ಟು ಮುದ್ರೆ ಪಡೆಯುತ್ತಿರುವುದನ್ನು ಮಹಿಳೆಯೋರ್ವರು ವಿರೋಧಿಸಿ, ಆ ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ವೀಡಿಯೋ ಚಿತ್ರೀಕರಿಸಿದ್ದು, ಅದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಈ ಅಮಾನ ವೀಯ ಕೃತ್ಯವನ್ನು ವಿರೋಧಿಸಿ ವೀಡಿಯೋ ಮಾಡುತ್ತಿದ್ದರೂ ಕೂಡ ಯಾವುದಕ್ಕೂ ಹೆದರದೆ ವ್ಯಕ್ತಿಯೋರ್ವ ವೀಡಿಯೋ ಮಾಡಿಕೊಳ್ಳಲಿ ಬಿಡಿ ಎಂದು ಉಡಾಫೆ ಯಿಂದ ಹೇಳುತ್ತಿರುವುದೂ ಚಿತ್ರೀಕರಣ ವಾಗಿದೆ. ಮೈಸೂರಿನ ಶ್ರೀರಾಂಪುರದಲ್ಲಿ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮೃತ ವೃದ್ಧೆ ಹೆಸ ರಿನಲ್ಲಿ 14 ಎಕರೆ ಜಮೀನಿದ್ದು, ಕೋಟ್ಯಾಂ ತರ ರೂ. ಬೆಲೆ ಬಾಳುತ್ತಿದೆ ಎಂದು ಹೇಳ ಲಾಗಿದೆ. ಆಕೆಗೆ ಪತಿಯಾಗಲೀ, ಮಕ್ಕಳಾ ಗಲೀ ಇಲ್ಲ ಎಂದು ತಿಳಿದು ಬಂದಿದೆ. ಆಕೆಗೆ ಇಬ್ಬರು ಅಕ್ಕಂದಿರು ಹಾಗೂ ಓರ್ವ ತಮ್ಮ ಇದ್ದಾನೆಂದು ಹೇಳಲಾಗಿದ್ದು, ಓರ್ವ ಅಕ್ಕನ ಮಗ ಸುರೇಶ್ ಎಂಬಾತ ವೃದ್ಧೆಯನ್ನು ತಾನೇ ನೋಡಿಕೊಳ್ಳುತ್ತಿರುವುದಾಗಿ ಹೇಳಿ ಶವದ ಹೆಬ್ಬೆಟ್ಟು ಮುದ್ರೆಯನ್ನು ಸಂಬಂಧಿಕರ ಮುಂದೆಯೇ ಯಾವುದೇ ಅಳುಕಿಲ್ಲದೆ ಒತ್ತಿಕೊಂಡಿದ್ದಾನೆ.

ಈ ಕೃತ್ಯವನ್ನು ವಿರೋಧಿಸಿದ ಮೃತ ವೃದ್ಧೆಯ ಮತ್ತೋರ್ವ ಅಕ್ಕನ ಮಗಳು, ಇಷ್ಟು ಬೇಗ ಹೇಗೆ ಇಷ್ಟೊಂದು ಪತ್ರಗಳನ್ನು ತೆಗೆದುಕೊಂಡು ಬಂದಿದ್ದೀರಿ ಎಂದು ಪ್ರಶ್ನಿಸುತ್ತಾ ಕೃತ್ಯವನ್ನು ವೀಡಿಯೋ ಮಾಡಿ ‘ನೋಡಿ ಪಕ್ಕದಲ್ಲೇ ಲಾಯರ್ ಇದ್ದರೂ ಅವರೂ ಕೂಡ ಏನು ಕೇಳುತ್ತಿಲ್ಲ’ ಎಂದು ಹೇಳಿದ್ದಾರೆ. ಕೆಲವು ಡಾಕ್ಯುಮೆಂಟರಿ ಪತ್ರಗಳಿಗೆ ಸಹಿ ಪಡೆದು ಅದನ್ನು ಸುರೇಶ ತೆಗೆದುಕೊಂಡು ಹೋಗುತ್ತಿದ್ದಾಗ ವೀಡಿಯೋ ಮಾಡುತ್ತಿದ್ದ ಮಹಿಳೆ ಪತ್ರಗಳನ್ನು ಕೊಡಿ ಎಂದು ಕೇಳುತ್ತಾಳೆ. ನೀವು ಲಾಯರ್ ಇಟ್ಟುಕೊಂಡಿದ್ದೀರಿ. ನಾವು ಓದಿದ್ದೇವೆ, ನಮಗೂ ಜ್ಞಾನ ಇದೆ. ನ್ಯಾಯ ಸಿಗಬೇಕು. ಹೆಣದ ಹೆಬ್ಬೆಟ್ಟನ್ನು ಒತ್ತಿಕೊಂಡಿದ್ದೀರಲ್ಲಾ ಇದನ್ನೆಲ್ಲಾ ಫಿಲಂನಲ್ಲಿ ನೋಡಿದ್ದೇವೆ. ಈಗೇನು ಅವಳು ಇದ್ದಾಗಲೇ ಹೆಬ್ಬೆಟ್ಟು ಹಾಕಿದ್ದಳೆಂದು ಹೇಳುತ್ತೀರಾ ಎಂದು ಪ್ರಶ್ನಿಸಿದಾಗ, ಅದೇನಾದರೂ ಆಗಲಿ ಎಂದು ಹೇಳುತ್ತಾ ಹೆಬ್ಬೆಟ್ಟು ಒತ್ತಿಸಿಕೊಂಡ ವ್ಯಕ್ತಿ ಪಕ್ಕದ ಮನೆಗೆ ಹೋಗುತ್ತಾನೆ. ಅದು ಲಾಯರ್‍ವೊಬ್ಬರ ಮನೆ ಎಂದು ಹೇಳಲಾಗಿದೆ.

ಆ ಮನೆಯ ಮಹಿಳೆ ಬಳಿ ವೀಡಿಯೋ ಮಾಡಿದ ಮಹಿಳೆ ನ್ಯಾಯ ಕೇಳುತ್ತಾಳೆ. ನೋಡಿ ಹೆಣದ ಹೆಬ್ಬೆಟ್ಟು ಒತ್ತಿಸಿಕೊಂಡಿದ್ದಾರೆ ಎಂದು ಹೇಳಿದಾಗ ಆ ಮನೆ ಮಹಿಳೆಯು ಅವಳ ತಂದೆ ಆಸ್ತಿ ಅಲ್ಲ. ಗಂಡನ ಆಸ್ತಿ. ಅವಳಿರುವಾಗಲೇ ಎಲ್ಲಾ ಮಾತಾಡಿ ಆಗಿತ್ತು. ಅನಿರೀಕ್ಷಿತ ವಾಗಿ ಹೀಗಾಗಿದೆ. ಖರ್ಚು ಮಾಡಿದವರು ಏನು ಮಾಡಬೇಕು ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ವೀಡಿಯೋ ಮಾಡಿದ ಮಹಿಳೆಯು, ಅದಕ್ಕೆ ಹೆಣದ ಹೆಬ್ಬೆಟ್ಟು ಒತ್ತಿಸಿಕೋಬೇಕಾ. ಪತ್ರಗಳು ಕೊಡಿ ನಮಗೆ ಎಂದು ಕೇಳಿದಾಗ ಅದೇ ಮನೆಯಲ್ಲಿ ಉಪಹಾರ ಸೇವಿಸುತ್ತಿದ್ದ ವ್ಯಕ್ತಿಯೋರ್ವ ‘ಇದಕ್ಕೂ ನಿನಗೂ ಸಂಬಂಧವಿಲ್ಲ, ಹೋಗು’ ಎಂದು ದಬಾಯಿಸುತ್ತಾನೆ. ಮಹಿಳೆಯು ನಮ್ಮ ಪತ್ರಗಳು ನಿಮ್ಮ ಮನೆಯಲ್ಲಿದೆ ಎಂದು ಹೇಳುತ್ತಿದ್ದಂತೆಯೇ ನಿಮಗೆ ಸಂಬಂಧವಿಲ್ಲ ಎಂದು ದಬಾಯಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »