ಬ್ಯಾಂಕ್‍ಗಳಿಗೆ ನುಗ್ಗುವ ಹೋರಾಟದ ಎಚ್ಚರಿಕೆ
ಮೈಸೂರು

ಬ್ಯಾಂಕ್‍ಗಳಿಗೆ ನುಗ್ಗುವ ಹೋರಾಟದ ಎಚ್ಚರಿಕೆ

November 4, 2021

ಮೈಸೂರು, ನ.3(ಆರ್‍ಕೆಬಿ)- ರಾಜ್ಯದಲ್ಲಿ ಬಲವಂತವಾಗಿ ಹಿಂದಿ ಹೇರಿಕೆ ಮಾಡಲಾಗುತ್ತಿದ್ದು, ಬ್ಯಾಂಕ್‍ಗಳು ಕೂಡಲೇ ಹಿಂದಿ ಹೇರಿಕೆ ಕೈಬಿಡದಿದ್ದರೆ ನ.21ರಂದು ಬ್ಯಾಂಕ್‍ಗಳ ವಿರುದ್ಧ ಭಾರೀ ಹೋರಾಟ ನಡೆಸಲಾಗುವುದು. ಅಗತ್ಯವಾದರೆ ಬ್ಯಾಂಕ್‍ಗಳಿಗೆ ನುಗ್ಗಿ ಪಾಠ ಕಲಿಸಲಾಗುವುದು ಎಂದು ಮಾಜಿ ಶಾಸಕ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದು ಬ್ಯಾಂಕ್‍ಗಳಿಗೆ ಎಚ್ಚರಿಕೆ ನೀಡಿದರು.

ಮೈಸೂರಿನ ಚಾಮರಾಜ ಒಡೆಯರ್ ವೃತ್ತದಲ್ಲಿ (ಆರ್ ಗೇಟ್) ಹಿಂದಿ ಹೇರಿಕೆ ವಿರುದ್ಧ ಘೋಷಣೆ ಕೂಗಿ, ಹಿಂದಿ ಹೇರಿಕೆ ಯನ್ನು ಕನ್ನಡಿಗರು ಸಹಿಸುವುದಿಲ್ಲ. ಕೂಡಲೇ ಹಿಂದಿ ಹೇರಿಕೆ ಕೈಬಿಡಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದರು.

ಹಿಂದಿ ಹೇರಿಕೆಯ ಅರಿವಿದ್ದರೂ ರಾಜ್ಯದ ಯಾವೊಬ್ಬ ಸಂಸತ್ ಸದಸ್ಯರೂ ಅದರ ವಿರುದ್ಧ ಸೊಲ್ಲೆತ್ತುತ್ತಿಲ್ಲ. ಹಿಂದಿ ಭಾಷೆ ಕರ್ನಾ ಟಕದಿಂದ ತೊಲಗಬೇಕು. ಹಿಂದಿ ವಿರುದ್ಧ ಇಡೀ ರಾಜ್ಯ ಒಂದಾಗಿ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ಇಲ್ಲದಿದ್ದರೆ ಮುಂದೆ ದೊಡ್ಡ ಆಘಾತ ಆಗಲಿದೆ. ಹಿಂದಿಯಿಂದ ಕನ್ನಡ ಭಾಷೆಗೆ ಉಳಿ ಗಾಲವಿಲ್ಲ. ಹಿಂದಿ ಹೇರಿಕೆ ಮೂಲಕ ಕನ್ನಡವನ್ನು ನಾಶ ಮಾಡುವ ಹುನ್ನಾರ ನಡೆದಿದೆ ಎಂದು ವಾಟಾಳ್ ಆರೋಪಿಸಿದರು.

ಭವಿಷ್ಯದಲ್ಲಿ ಹಿಂದಿಯಿಂದ ಕನ್ನಡ ಭಾಷೆಯ ಮೇಲಾಗುವ ಅಪಾಯದ ಬಗ್ಗೆ ಸಾಹಿತಿ, ಬರಹಗಾರರು ಎಚ್ಚೆತ್ತುಕೊಳ್ಳಬೇಕು. ಬೀದಿಗಿಳಿದು ಹೋರಾಟ ನಡೆಸಬೇಕು. ಹಿಂದಿ ಹೇರಿಕೆಯಿಂದ ಮುಂದೆ ಕನ್ನಡ ಪತ್ರಿಕೋದ್ಯಮಕ್ಕೂ ಅಪಾಯ ಬರುವ ಸಾಧ್ಯತೆ ಗಳಿವೆ. ಹಾಗಾಗಿ ವಾಟಾಳ್ ಪಕ್ಷ ರಾಜ್ಯಾದ್ಯಂತ ಹೋರಾಟ ನಡೆಸಲಿದೆ. ಪ್ರತಿ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿಯೂ ಹಿಂದಿ ವಿರೋಧಿ ಕ್ರಿಯಾ ಸಮಿತಿ ರಚಿಸಿ ಹೋರಾಟ ನಡೆಸಲು ನಿರ್ಧ ರಿಸಲಾಗಿದೆ ಎಂದರು. ಬಿಜೆಪಿ ಮತ್ತು ಆರ್‍ಎಸ್‍ಎಸ್ ಹಿಂದಿ ಹೇರಿಕೆಗೆ ಮುಂದಾಗಿರುವ ಬಗ್ಗೆ ಟೀಕಿಸಿದ ಅವರು, ಮೇಲೆ ಕನ್ನಡ ತೋರಿಕೆ, ಹಿಂಬದಿಯಲ್ಲಿ ಹಿಂದಿ ಹೇರಿಕೆ. ಇದು ಬಿಜೆಪಿ ಸರ್ಕಾ ರದ ಕನ್ನಡ ವಿರೋಧಿ ಧೋರಣೆಯಾಗಿದೆ ಎಂದು ದೂರಿದರು.

ಕೇಂದ್ರ ಸರ್ಕಾರದ ಸಮಾರಂಭಗಳು ಕನ್ನಡದಲ್ಲಿ ನಡೆಯುತ್ತಿಲ್ಲ. ಹಿಂದಿಯನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. ಇತ್ತೀಚೆಗೆ ಸಮಾ ರಂಭಗಳಲ್ಲಿ ಕನ್ನಡವೇ ಮರೆಯಾಗುತ್ತಿದೆ. ಬರೀ ಹಿಂದಿ, ಇಂಗ್ಲಿಷ್ ಬಳಕೆ ಹೆಚ್ಚುತ್ತಿದೆ. ಕನ್ನಡವನ್ನು ಬುಡಮಟ್ಟದಿಂದ ನಾಶಪಡಿಸುವ ಹುನ್ನಾರ ಇದರಲ್ಲಿದೆ ಎಂದು ಆರೋಪಿಸಿದರು. ಪ್ರತಿಭಟನೆ ಯಲ್ಲಿ ಪಕ್ಷದ ಮುಖಂಡರಾದ ಹೆಚ್.ಆರ್. ಪಾರ್ಥಸಾರಥಿ, ಮುನಾವರ್, ಕ್ರಾಂತಿ ಕುಮಾರ್, ಟಿ.ಕೃಷ್ಣಮೂರ್ತಿ ಇದ್ದರು.

Translate »