ನೀರಿನ ಶುಲ್ಕ ಹೆಚ್ಚಳ: ಪಾಲಿಕೆ ವಿರುದ್ಧ ಆಮ್ ಆದ್ಮಿ ಪಕ್ಷ ಆಕ್ರೋಶ
ಮೈಸೂರು

ನೀರಿನ ಶುಲ್ಕ ಹೆಚ್ಚಳ: ಪಾಲಿಕೆ ವಿರುದ್ಧ ಆಮ್ ಆದ್ಮಿ ಪಕ್ಷ ಆಕ್ರೋಶ

December 1, 2020

ಮೈಸೂರು,ನ.30(ಎಂಟಿವೈ)- ಮೈಸೂರು ಮಹಾನಗರ ಪಾಲಿಕೆ ನಗರದ ಜನರನ್ನು ಸುಲಿಗೆ ಮಾಡುತ್ತಿದ್ದು, ಕುಡಿಯುವ ನೀರಿದ ಶುಲ್ಕವನ್ನು ಶೇ.50ರಷ್ಟು ಹೆಚ್ಚಳ ಮಾಡುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ನಗರಾಧ್ಯಕ್ಷೆ ಮಾಳವಿಕ ಗುಬ್ಬಿವಾಣಿ ಆರೋಪಿಸಿದ್ದಾರೆ.

ಕೊರೊನಾ ಸಂಕಷ್ಟದ ನಡುವೆಯೂ ಪಾಲಿಕೆ ವಿವಿಧ ಸೆಸ್ ದರ ಹೆಚ್ಚಳ ಮಾಡುವ ಮೂಲಕ ಮೊದಲೇ ತೊಂದರೆಗೀಡಾಗಿ ರುವ ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಗದಾ ಪ್ರಹಾರ ಮಾಡುತ್ತಿದೆ. ಇತ್ತೀಚೆಗಷ್ಟೇ ಸ್ಮಶಾನ ಮತ್ತು ಉದ್ಯಾನವನ ಸೆಸ್ ಹೆಚ್ಚಳ ಮಾಡಿದ್ದ ನಗರ ಪಾಲಿಕೆ ಇದೀಗ, ಕುಡಿಯುವ ನೀರಿನ ಶುಲ್ಕವನ್ನು ಶೇ.50ರಷ್ಟು ಹೆಚ್ಚಿಸುವ ಮೂಲಕ ಸುಲಿಗೆ ಮಾಡಲು ಮುಂದಾಗಿದೆ. ತಮ್ಮ ತೆರಿಗೆ ಸಂಗ್ರಹ ಮತ್ತು ನೀರಿನ ಸರಬರಾಜು ವ್ಯವಸ್ಥೆಯ ವಿಫಲತೆಯನ್ನು ಮರೆಮಾಚಲು ಶುಲ್ಕ ಹೆಚ್ಚಿಸುವುದು ಪಾಲಿಕೆಯ ತಂತ್ರವಾಗಿದೆ. ಇದಕ್ಕೆ ಸಮ್ಮತಿಸಿದ ಪಾಲಿಕೆ ಸದಸ್ಯರು ನಾಗರಿಕರ ನಂಬಿಕೆಗೆ ದ್ರೋಹ ಎಸಗಿದ್ದಾರೆ ಎಂದು ಅವರು ದೂರಿದ್ದಾರೆ.

ಈ ಹಿಂದೆ ನರ್ಮ್ ಯೋಜನೆಯಡಿ (2007-2012) ಜನತೆಗೆ 24×7 ನೀರು ಸರಬ ರಾಜು ಮಾಡುವುದಾಗಿ ಭರವಸೆ ನೀಡಿ ನೀರಿನ ದರ ದ್ವಿಗುಣಗೊಳಿಸಿತ್ತು. ಅಲ್ಲದೆ, ನೀರಿನ ಬಿಲ್ ಮೇಲೆ ಶೇ.30ರಷ್ಟು ಒಳಚರಂಡಿ ಸೆಸ್ ವಿಧಿಸಿತ್ತು. ಆದರೆ ಒಂದು ದಿನವೂ 24 ತಾಸು ನೀರು ಸರಬರಾಜಾಗಲಿಲ್ಲ. ಈಗಲಾದರೂ ಪಾಲಿಕೆ 24×7 ಶುದ್ಧ ನೀರಿನ ಪೂರೈಕೆಗೆ ಗಮನಹರಿಸಬೇಕು. ನೀರು ಪೆÇೀಲಾಗುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು. ಎಂದು ಆಗ್ರಹಿಸಿದ್ದಾರೆ. ಕಾವೇರಿ, ಕಬಿನಿಯಿಂದ ಎಷ್ಟು ಪ್ರಮಾಣದ ನೀರು ತರಲಾಗುತ್ತಿದೆ? ಅದರಲ್ಲಿ ಬಳಕೆದಾರರಿಂದ ಸಂಗ್ರಹವಾಗುತ್ತಿರುವ ನೀರಿನ ಬಿಲ್ ಎಷ್ಟು? ಎಷ್ಟು ಕಾನೂನು ಬಾಹಿರ ನೀರಿನ ಸಂಪರ್ಕಗಳು ಇವೆ? ಅವುಗಳಲ್ಲಿ ಎಷ್ಟು ಸಂಪರ್ಕವನ್ನು ಕಡಿತಗೊಳಿಸ ಲಾಗಿದೆ ಎಂಬ ಮಾಹಿತಿಯನ್ನು ಸಾರ್ವಜನಿಕರ ಮುಂದಿಡುವಂತೆ ಒತ್ತಾಯಿಸಿದ್ದಾರೆ.

ನೀರಿನ ಶುಲ್ಕ ಸಂಗ್ರಹ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕಾಗಿದೆ. ನೀರಿನ ಶುಲ್ಕ ಸಂಗ್ರಹ ಮತ್ತು ನೀರು ಸರಬರಾಜು ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳಿಂದ ವಾಣಿ ವಿಲಾಸ ನೀರಿನ ಸಂಸ್ಥೆ ನಷ್ಟದಲ್ಲಿ ನಡೆಯುತ್ತಿದೆ ಮತ್ತು ಸಾಲದ ಹೊರೆ ಹೆಚ್ಚುತ್ತಿದೆ ಎಂದರು.

Translate »