ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ನಾವು ಬದ್ಧ
ಮೈಸೂರು

ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ನಾವು ಬದ್ಧ

December 4, 2021

ಮೈಸೂರು,ಡಿ.3(ಎಂಟಿವೈ)- ಮೈಸೂರು – ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆ ಯುವ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ, ಗ್ರಾಮೀಣಾಭಿವೃದ್ಧಿ ಹಾಗೂ ಸ್ಥಳೀಯ ಸಂಸ್ಥೆಗಳ ಏಳಿಗೆಗಾಗಿ ಬದ್ಧತೆ ಯಿಂದ ಸೇವೆ ಸಲ್ಲಿಸುತ್ತೇವೆ. ಹಾಗಾಗಿ ಗೆಲುವು ನಮಗೆ ಒಲಿಯಲಿದೆ. ಇದು ಮೇಲ್ಮನೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳ ಉವಾಚ.

ಮೈಸೂರು-ಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿ ಷತ್‍ಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎರಡು ರಾಷ್ಟ್ರೀಯ ಹಾಗೂ ಎರಡು ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿ ಗಳೊಂದಿಗೆ ಮೈಸೂರು ಜಿಲ್ಲಾ ಪತ್ರ ಕರ್ತರ ಸಂಘ ಶುಕ್ರವಾರ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದ ನಾಲ್ವರು ಅಭ್ಯರ್ಥಿಗಳು ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂವಾದದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ, ಬಿಜೆಪಿ ಅಭ್ಯರ್ಥಿ ರಘು ಆರ್.ಕೌಟಿಲ್ಯ, ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡ, ವಾಟಾಳ್ ಪಕ್ಷದ ವಾಟಾಳ್ ನಾಗರಾಜು ಪಾಲ್ಗೊಂಡು, ದ್ವಿಸದಸ್ಯ ಸ್ಥಾನಕ್ಕಾಗಿ ನಡೆಯಲಿರುವ ಚುನಾವಣೆಯಲ್ಲಿ ಅಭಿವೃದ್ಧಿ ಮಂತ್ರ, ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡಿ ಮತಯಾಚಿ ಸುತ್ತೇವೆ ಎಂದು ತಮ್ಮ ಮತಯಾಚನೆಯ ಗುಟ್ಟನ್ನು ವಿವರಿಸಿದರು.

ಬಿಜೆಪಿ ಅಭ್ಯರ್ಥಿ ರಘು ಆರ್. ಕೌಟಿಲ್ಯ

ಬಿಜೆಪಿ ಅಭ್ಯರ್ಥಿ ರಘು ಆರ್.ಕೌಟಿಲ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಯಡಿಯೂರಪ್ಪ ಅವರ ಆಶಯಕ್ಕೆ ಬದ್ಧವಾಗಿ ಕೆಲಸ ಮಾಡುತ್ತಿದ್ದೇನೆ. ಎರಡೂ ಜಿಲ್ಲೆಗಳಿಂದ ಇರುವ ಒಟ್ಟು ಮತದಲ್ಲಿ ಶೇ.98ರಷ್ಟು ಮತ ಗ್ರಾ.ಪಂ ಸದಸ್ಯರದ್ದೇ ಆಗಿದೆ. ಪ್ರಜಾಪ್ರಭುತ್ವದ ಬೇರು ಹಾಗೂ ಅಡಿಪಾಯವೇ ಗ್ರಾ.ಪಂ ಆಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಸದಸ್ಯರಿಗೂ ಅಗತ್ಯ ಸೌಲಭ್ಯ ದೊರಕಿಸಿಕೊಡುವ ಉದ್ದೇಶ ನನ್ನದಾಗಿದೆ ಎಂದು ಹೇಳಿದರು.
ಮಾಸಿಕ ಗೌರವಧನ 10 ಸಾವಿರಕ್ಕೆ ಹೆಚ್ಚಳ ಮಾಡಬೇಕು. ಉಚಿತ ಮೊಬೈಲ್, ಉಚಿತ ಬಸ್‍ಪಾಸ್, ಸಬ್ಸಿಡಿಯಲ್ಲಿ ದ್ವಿಚಕ್ರ ವಾಹನ ಕೊಡಿಸುವ ಯೋಜನೆ ಜಾರಿ ಗೊಳಿಸಬೇಕಾಗಿದೆ. ಆರೋಗ್ಯ ವಿಮೆ, ಜೀವವಿಮೆ ಸೇರಿದಂತೆ ಗ್ರಾ.ಪಂ ಸದಸ್ಯರ ಬೇಡಿಕೆಗಳ ಈಡೇರಿಕೆಗೆ ವಿಧಾನಪರಿಷತ್‍ನಲ್ಲಿ ಧ್ವನಿಯಾಗಲು ನಾನು ಬದ್ಧನಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಯುವಜನ ವಲಸೆ ಹೋಗುವುದನ್ನು ತಡೆಗಟ್ಟಲು `ನನ್ನ ಊರು-ನಮ್ಮ ಉದ್ಯೋಗ’ ತರಬೇತಿ ಕೇಂದ್ರ ಸ್ಥಾಪಿಸುವ ಆಲೋಚನೆ ಹೊಂದಿದ್ದೇನೆ ಎಂದು ಅವರು ಹೇಳಿದರು.

ಈ ಎಲ್ಲಾ ಉದ್ದೇಶಗಳನ್ನು ಗ್ರಾಪಂ ಸದಸ್ಯರ ಮುಂದಿಟ್ಟು ಮತಯಾಚಿಸುತ್ತಿದ್ದೇನೆ. ನನ್ನ ಗೆಲುವು ನಿಶ್ಚಿತ. ಈಗಾಗಲೇ ಎಲ್ಲರನ್ನು ಭೇಟಿ ಮಾಡಿದ್ದೇನೆ ಎಂದು ಅವರು ಗ್ರಾಪಂ ಅಧಿಕಾರವನ್ನು ಮೊಟಕು ಗೊಳಿಸುವ ಕೆಲಸವನ್ನು ಬಿಜೆಪಿ ಮಾಡಿಲ್ಲ. ಎಂ-ನರೇಗಾ ಯೋಜನೆಯನ್ನು ಇನ್ನಷ್ಟು ಬಲಪಡಿಸುವ ಕೆಲಸವನ್ನು ಮಾಡಲಾಗಿದೆ. ಮೇಲ್ಮನೆಯಲ್ಲಿ ಗ್ರಾಪಂ ಸದಸ್ಯರ ಪರ ಧ್ವನಿ ಎತ್ತುವವರ ಕೊರತೆ ಇತ್ತು. ಇದರಿಂದಾಗಿ ಇವರ ವಿಷಯದಲ್ಲಿ ತಾರತಮ್ಯವಾಗಿದ್ದು, ನಾನು ಗೆದ್ದರೆ ಇದನ್ನು ಸರಿ ಪಡಿಸುವ ಕೆಲಸ ಮಾಡುತ್ತೇನೆ ಎಂದರು.

 

ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ. ತಿಮ್ಮಯ್ಯ

ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ಡಿ. ತಿಮ್ಮಯ್ಯ ಅವರು ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಕಳೆದ 32 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಬಳಿಕ ಮೇಲ್ಮನೆಗೆ ನಡೆಯುವ ಚುನಾವಣೆ ಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದೇನೆ. ಇದು ನನ್ನ ಮೊದಲ ಚುನಾವಣೆ ಎಂದರು.
ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿ ಯಲ್ಲಿ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮೈಸೂರು-ಚಾಮರಾಜ ನಗರ ಜಿಲ್ಲೆಗಳ ಗ್ರಾಪಂಗಳಿಗೆ 27 ಸಾವಿರ ಕೋಟಿ ರೂ. ಅನುದಾನವನ್ನು ನೀಡಿದ್ದಾರೆ. ಇದರೊಂದಿಗೆ ಸಿದ್ದರಾಮಯ್ಯ ಜಾರಿಗೊಳಿಸಿದ ಇಂದಿರಾ ಕ್ಯಾಂಟೀನ್, ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳು ಈಗಲೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಅವರು ತಮ್ಮ ಸರ್ಕಾರದ ಕೊಡುಗೆಗಳನ್ನು ವಿವರಿಸಿದರು.

ಈಗ ಈ ಯೋಜನೆಗಳನ್ನು ನಿಲ್ಲಿಸಿ ಬಿಜೆಪಿ ಸರ್ಕಾರ ಬಡವರಿಗೆ, ಜನ ಸಾಮಾನ್ಯರಿಗೆ ಅನ್ಯಾಯ ಮಾಡಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇನೆ. ಮೈಸೂರಲ್ಲಿ ಜಯದೇವ, ಜಿಲ್ಲಾಸ್ಪತ್ರೆ ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಹೆಚ್ಚಿನ ಕೊಡುಗೆ ನೀಡಿರುವುದು ಕಾಂಗ್ರೆಸ್. ಈ ಹಿನ್ನೆಲೆಯಲ್ಲಿ ಎರಡು ಜಿಲ್ಲೆಗಳಲ್ಲಿ 6600 ಸದಸ್ಯರಿದ್ದು, ಅವರಲ್ಲಿ 4 ಸಾವಿರ ಸದಸ್ಯರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ನಾನು ಎಂಎಲ್‍ಸಿಯಾಗಿ ಆಯ್ಕೆಯಾದರೆ ಗ್ರಾಪಂ ಸದಸ್ಯರಿಗೆ ಹಕ್ಕುಗಳನ್ನು ಕಲ್ಪಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡ

ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡ ಮಾತನಾಡಿ, 20 ವರ್ಷದ ಹಿಂದೆ ಮೈಸೂರಿನ ಶ್ರೀರಾಮ್‍ಪುರ ಗ್ರಾಪಂ ಸದಸ್ಯನಾಗಿ, ನಂತರ ಅಧ್ಯಕ್ಷನಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ. ಗ್ರಾಪಂ ಕಡೆ ಎಲ್ಲರ ದೃಷ್ಟಿ ಬೀಳುವಂತೆ ಅಭಿವೃದ್ಧಿ ಮಾಡಿದ್ದೇನೆ. ಗ್ರಾಪಂ, ತಾಪಂ, ಎಪಿಎಂಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಹೀಗಾಗಿ, ಈ ಸದಸ್ಯರ ಕೊರತೆ ಕುರಿತು ಗೊತ್ತಿದೆ ಎಂದರು.

ತಾಪಂಗಿಂತ ಗ್ರಾಪಂಗೆ ಹೆಚ್ಚಿನ ಅನುದಾನ ಬಂದರೂ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ನಗರ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಕೆಲ ಗ್ರಾಪಂಗಳಿಗೆ ಮಾತ್ರ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಉಳಿದ ಗ್ರಾಪಂ ನಿರ್ಲಕ್ಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಗ್ರಾಪಂ ಸದಸ್ಯರಿಗೂ ಅಭಿವೃದ್ಧಿ ಕಾರ್ಯಕ್ಕಾಗಿ ವಾರ್ಷಿಕ 10 ಲಕ್ಷ ಅನುದಾನ ನೀಡಬೇಕು. ಸದಸ್ಯರ ಹಿತ ಕಾಯಲು ವಿಶೇಷ ನಿಧಿ ಮೀಸಲಿಡುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆ ಹೋರಾಡುತ್ತೇನೆ. ನಾನು ಸೈನಿಕನಾಗಿ ದೇಶದ ಗಡಿ ಕಾಯ್ದಿರುವೆ. ಅದೇ ರೀತಿ ನಾನು ಗೆದ್ದರೆ ಗ್ರಾಪಂ ಸದಸ್ಯರ ಹಿತಸಕ್ತಿ ಕಾಯುತ್ತೇನೆ ಎಂದು ಭರವಸೆ ನೀಡಿದರು.

 

ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್

ಕನ್ನಡಪರ ಹೋರಾಟಗಾರ, ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ ಮಾತನಾಡಿ, ಕನ್ನಡ ನಾಡು ನುಡಿಗಾಗಿ ಸಾವಿರಾರು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಮೇಲ್ಮನೆಯಲ್ಲಿ ನಾನು ಇರಬೇಕೋ ಬೇಡವೋ ಎಂಬದನ್ನು ಮತದಾರರು ಚಿಂತನೆ ಮಾಡಲಿ. 5 ಬಾರಿ ಶಾಸಕನಾಗಿರುವ ನಾನು ವಿವಿಧ ಚುನಾವಣೆಯಲ್ಲಿ 15 ಬಾರಿ ಸೋತಿರುವೆ ಎಂದರು. ಶಾಸಕನಾಗಿದ್ದಾಗ ಒಂದೇ ಒಂದು ದಿನವೂ ಶಾಸನ ಸಭೆಗೆ ಗೈರು ಹಾಜರಾಗಲಿಲ್ಲ. ಜವಾಹರ್‍ಲಾಲ್ ನೆಹರು ಪ್ರಧಾನಿಯಾಗಿದ್ದಾಗಲೂ ಅವರೂ ಸಹ ಗೈರು ಹಾಜರಾಗಿರಲಿಲ್ಲ. ಸೋಲಿನಿಂದ ಧೃತಿಗೆಟ್ಟಿಲ್ಲ. ಸೋಲಿಗಿಂತ ಹೆಚ್ಚು ಹೋರಾಟದ ಮೂಲಕ ದಾಖಲೆ ನಿರ್ಮಿಸಿರುವೆ. ನನ್ನನ್ನು ಗೆಲ್ಲಿಸಿದರೆ ಮೇಲ್ಮನೆಯಲ್ಲಿ ಗ್ರಾಪಂ ಸದಸ್ಯರ ಪರವಾಗಿ ಹೋರಾಟ ಮಾಡಿ, ಕನಿಷ್ಠ 5 ಸಾವಿರ ಗೌರವಧನ ಕೊಡಿಸಲು ಹೋರಾಟ ಮಾಡುತ್ತೇನೆ ಎಂದರು.

ಸಂವಾದದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ ಇದ್ದರು.

ಉಸ್ತುವಾರಿ ಸಚಿವರ ವಿರುದ್ಧ ಚು.ಆಯೋಗಕ್ಕೆ ದೂರು

ಮೈಸೂರು, ಡಿ.3(ಎಂಟಿವೈ)- ಒಂದು ಸೈಟ್ ಅನ್ನು ನಾಲ್ವರಿಗೆ ಮಾರಾಟ ಮಾಡಿರುವ ಹಾಗೂ ಕಿಡ್ನಿ ಮಾರಾಟ ಮಾಡುವುದಕ್ಕೆ ನಂಬರ್ ಒನ್’ ಎಂದು ನನ್ನ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಡಿರುವ ಆರೋಪಕ್ಕೆ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ ಎಂದು ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ತಿಳಿಸಿದ್ದಾರೆ.

ಸಂವಾದದಲ್ಲಿ ಸಚಿವರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾವುದೇ ದಾಖಲೆಯಿಲ್ಲದೆ ಆರೋಪ ಮಾಡುವುದು, ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ. ಸಚಿವ ಎಸ್.ಟಿ.ಸೋಮಶೇಖರ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಯೊಂದಿಗೆ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತಕ್ಕೂ ದೂರು ನೀಡಬಹುದು. ಒಂದು ವೇಳೆ ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸುವುದರೊಂದಿಗೆ ಚುನಾವಣಾ ಕಣದಿಂದಲೇ ಹಿಂದೆ ಸರಿಯುವುದಾಗಿ ಸ್ಪಷ್ಟಪಡಿಸಿದರು.

ಸಚಿವರ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ರಘು ಆರ್.ಕೌಟಿಲ್ಯ ಪ್ರತಿಕ್ರಿಯಿಸಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರಿಗೆ ದೊರೆತ ಮಾಹಿತಿ ಆಧಾರದ ಮೇಲೆ ಈ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು ನಾನು ಏನು ಹೇಳಲ್ಲ. ಅವರಿಂದ ಉತ್ತರ ಪಡೆದುಕೊಳ್ಳಿ. ಸಚಿವರು ನಮ್ಮ ಮತ ಪ್ರಚಾರದ ಸಾರಥಿ. ಅಭ್ಯರ್ಥಿಗೆ ಅನುಕೂಲವಾಗಲಿ ಎಂಬ ಉz್ದÉೀಶದಿಂದಲೇ ಈ ರೀತಿಯಲ್ಲಿ ಹೇಳಿಕೆ ಕೊಟ್ಟಿರಬಹುದು. ಇದರಲ್ಲಿ ಲಾಭ-ನಷ್ಟವನ್ನು ನಾನು ನೋಡಲ್ಲ ಎಂದರು. ಈ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ನಡುವಿನ ಹೊಂದಾಣಿಕೆಯ ಪ್ರಶ್ನೆ ಬರಲ್ಲ ಎಂದು ಹೇಳಿದರು.

ಹಣ ಹಂಚಲ್ಲ ಎಂದು ಪ್ರಮಾಣ ಮಾಡಿ: ತಬ್ಬಿಬ್ಬಾದ ಪರಿಷತ್ ಅಭ್ಯರ್ಥಿಗಳು

ಮೈಸೂರು, ಡಿ.3(ಎಂಟಿವೈ)- ವಿಧಾನ ಪರಿಷತ್ ಚುನಾವಣೆಯಲ್ಲಿ ಹಣ ನೀಡದೇ ನಾನು ಮತ ಕೇಳುತ್ತಿದ್ದೇನೆ. ಮೂರು ಪಕ್ಷಗಳ ಅಭ್ಯರ್ಥಿಗಳು ಹಣ ನೀಡುವುದಿಲ್ಲ ಎಂದು ಆಣೆ ಮಾಡಲಿ ಎಂದು ಪಕ್ಷೇತರ ಅಭ್ಯರ್ಥಿ ವಾಟಾಳ್ ಹೇಳಿದ ಮಾತಿಗೆ ಮೂರು ಪಕ್ಷಗಳ ಅಭ್ಯರ್ಥಿಗಳು ಕೆಲ ಕಾಲ ಗಲಿಬಿಲಿಗೊಂಡರು.

ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಾಲ್ವರು ಅಭ್ಯರ್ಥಿಗಳಲ್ಲಿ ವಾಟಾಳ್ ನಾಗರಾಜ್ ಪ್ರಶ್ನೆಯೊಂದಕ್ಕೆ ಉತ್ತರಿಸಿ, ನನ್ನ ಬಳಿ ಹಣವಿಲ್ಲ. ಆದರೆ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವೆ. ನಿಮ್ಮ ಪರ ಯಾವಾಗ ಬೇಕಾದರೂ ಹೋರಾಟಕ್ಕೆ ನಾನು ಸಿದ್ಧನಿದ್ದೇನೆ. ದಯಮಾಡಿ ಓಟ್ ಹಾಕಿ ಎಂದು ಎಲ್ಲಾ ಸದಸ್ಯರನ್ನು ಕೇಳಿಕೊಳ್ಳುತ್ತಿದ್ದೇನೆ. ನಾನು ಹಣ ನೀಡುತ್ತಿಲ್ಲ ಎಂದು ಯಾವ ದೇವರ ಮೇಲಾದರೂ ಆಣೆ ಮಾಡುತ್ತೇನೆ. ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ. ಹಣ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಬಳಿಕ ನಾನು ಆಣೆ ಮಾಡಿದ್ದೇನೆ. ವೇದಿಕೆಯಲ್ಲಿರುವ ಮೂರು ಪಕ್ಷದ ಅಭ್ಯರ್ಥಿಗಳಿಂದಲೂ ಆಣೆ-ಪ್ರಮಾಣ ಮಾಡಿಸಿ ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು. ಇದಕ್ಕೆ ಪತ್ರಕರ್ತರೂ ದÀನಿಗೂಡಿಸಿ, ಮೈಸೂರಿಂದಲೇ ರಾಜ್ಯಕ್ಕೆ ಸಂದೇಶ ರವಾನೆಯಾಗಲಿ. ಅಭ್ಯರ್ಥಿಗಳು ಹಣ ಹಂಚದೇ ಇರುವುದಕ್ಕೆ ಸಮ್ಮತಿ ಇದ್ದರೆ ಪ್ರಮಾಣ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಇದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಡಾ.ತಿಮ್ಮಯ್ಯ ಅವರು `ಈ ಚುನಾವಣೆ ನೋಡಿದರೆ ನನಗೆ ಯಾಕೋ ಭಯವಾಗುತ್ತದೆ. ಈ ವರೆಗೆ ಯಾವುದೇ ಮತದಾರರು ನನಗೆ ದುಡ್ಡು ಕೇಳಿಲ್ಲ. ಈ ವಿಷಯವೂ ಗೊತ್ತಿಲ್ಲ ಎಂದರು.

ಬಿಜೆಪಿ ಅಭ್ಯರ್ಥಿ ರಘು ಆರ್.ಕೌಟಿಲ್ಯ ಪ್ರತಿಕ್ರಿಯಿಸಿ, ಮತ ಎಂಬುದು ಸಂತೆಯಲ್ಲಿ ಬಿಕರಿಯಾಗುವ ವಸ್ತು ಅಲ್ಲ. ಗ್ರಾಪಂ ಸದಸ್ಯರ ಆತ್ಮಗೌರವಕ್ಕೆ ಚ್ಯುತಿ ಬರುವ ಹೇಳಿಕೆ ಕೊಡಲ್ಲ. ನನಗೆ ಯಾರೂ ಹಣ ಕೇಳಿಲ್ಲ ಎಂದರು. ಇತ್ತ ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಯಾವುದೇ ಪ್ರತಿಕ್ರಿಯೆ ನೀಡÀಲಿಲ್ಲ.

Translate »