ಅಧಿಕಾರ ವಿಕೇಂದ್ರೀಕರಣ ಪರಮ ವಿರೋಧಿ ಬಿಜೆಪಿ, ಅವಕಾಶವಾದಿ ಜೆಡಿಎಸ್ ಬದಲು ಕಾಂಗ್ರೆಸ್ ಬೆಂಬಲಿಸಿ
ಮೈಸೂರು

ಅಧಿಕಾರ ವಿಕೇಂದ್ರೀಕರಣ ಪರಮ ವಿರೋಧಿ ಬಿಜೆಪಿ, ಅವಕಾಶವಾದಿ ಜೆಡಿಎಸ್ ಬದಲು ಕಾಂಗ್ರೆಸ್ ಬೆಂಬಲಿಸಿ

December 4, 2021

ಮೈಸೂರು,ಡಿ.3(ಎಸ್‍ಬಿಡಿ)- ಅಧಿಕಾರ ವಿಕೇಂದ್ರೀಕರಣದ ವಿರೋಧಿಯಾಗಿರುವ ಬಿಜೆಪಿ ಹಾಗೂ ಅವಕಾಶವಾದಿ ರಾಜಕಾರಣ ಮಾಡುವ ಜೆಡಿಎಸ್ ಪಕ್ಷಗಳ ಯಾವ ಆಮಿಷಕ್ಕೂ ಒಳಗಾಗದೆ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಬೆಂಬಲಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್.ಧ್ರುವನಾರಾಯಣ್ ಮನವಿ ಮಾಡಿದರು.

ಮೈಸೂರಿನ ವರುಣಾ ಹಾಗೂ ತಗಡೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಸಹಯೋಗದಲ್ಲಿ ನಗ ರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ `ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆಯುತ್ತಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ. ತಿಮ್ಮಯ್ಯ ಪರ ಮತಯಾಚಿಸಿ, ಮಾತನಾಡಿದರು.

ರಾಜ್ಯದ ಒಟ್ಟು 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಜೆಡಿಎಸ್ ಕೇವಲ 6 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪರಿಶಿಷ್ಟ ಜಾತಿಯ ಎಡಗೈ ಸಮು ದಾಯ, ವಾಲ್ಮೀಕಿ ಸಮುದಾಯ, ಕುರುಬರು, ದೇವಾಂಗ ಜನಾಂಗ, ಒಕ್ಕಲಿಗ, ವೀರಶೈವ, ಮುಸ್ಲಿಂ ಹೀಗೆ ಸಾಮಾಜಿಕ ನ್ಯಾಯದಡಿ ಎಲ್ಲಾ ಸಮುದಾಯದವರಿಗೆ ಹಾಗೂ ಮಹಿಳೆಯರಿಗೂ ಕಾಂಗ್ರೆಸ್ ಪಕ್ಷ ಅವಕಾಶ ನೀಡಿದೆ. ಬಸವಣ್ಣನವರ ಅನುಭವ ಮಂಟಪದ ಸಂದೇಶವನ್ನು ಕಾಂಗ್ರೆಸ್‍ನಲ್ಲಿ ಕಾಣಬಹುದು ಎಂದು ಅವರು ಹೇಳಿದರು.

ಈಶ್ವರಪ್ಪಗೆ ಎದಿರೇಟು: `ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ’ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡುತ್ತಾರೆ. ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಳ್ಳಲು ಅವರಿಗೆ ನೈತಿಕತೆ ಇಲ್ಲ. ಹಿಂದುಳಿದ ವರ್ಗಗಳ ಕಾಲೇಜು ವಿದ್ಯಾರ್ಥಿಗಳಿಗಿದ್ದ ವಿದ್ಯಾಸಿರಿ ಯೋಜನೆ ನಿಲ್ಲಿಸಿ ದ್ದೀರಿ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಅನು ದಾನವನ್ನು ಕಡಿತಗೊಳಿಸಿದ್ದೀರಿ. ನಿಮ್ಮಿಂದ ಬಡವರಿಗೆ ಒಂದೇ ಒಂದು ಮನೆ ಮಂಜೂರು ಮಾಡಲು ಸಾಧ್ಯವಾಗಿಲ್ಲ. ಅಧಿಕಾರ ಕೇಂದ್ರೀಕರಣಕ್ಕಾಗಿ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯನ್ನೇ ಮುಂದೂಡುತ್ತಿದ್ದೀರಿ. ಧೈರ್ಯ ಇದ್ದರೆ ಈ ಚುನಾವಣೆಗಳನ್ನು ನಡೆಸಿ ಎಂದು ಸವಾಲೆಸೆದ ಧ್ರುವನಾರಾಯಣ್, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಪಾಲರಿಗೆ ದೂರು ನೀಡಿದ್ದ ಈಶ್ವರಪ್ಪ, ಈಗ ಮುರುಗೇಶ್ ನಿರಾಣಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎನ್ನುತ್ತಿದ್ದಾರೆ. ಅಲ್ಲದೆ ಯತ್ನಾಳ್, ಹೆಚ್.ವಿಶ್ವನಾಥ್, ಬೆಲ್ಲದ್ ನೇರವಾಗಿ ಭ್ರಷ್ಟಾಚಾರ ಆರೋಪ ಮಾಡಿದರೂ ಸುಮ್ಮನಿದ್ದ ಬಿ.ವೈ.ವಿಜ ಯೇಂದ್ರ ಈಗ ಕಾಂಗ್ರೆಸ್‍ನಲ್ಲಿ ಒಳಜಗಳವಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಚಳವಳಿ ಅನಿವಾರ್ಯ: ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, ಪಂಚಾ ಯತ್‍ರಾಜ್ ವ್ಯವಸ್ಥೆ ಕಾಂಗ್ರೆಸ್ ಕೊಡುಗೆ. ಕೇಂದ್ರ, ರಾಜ್ಯ ಸರ್ಕಾರಗಳ ಜೊತೆಗೆ ಗ್ರಾಮ ಪಂಚಾಯ್ತಿಗಳ ಮೂಲಕ ಹಳ್ಳಿ ಸರ್ಕಾರ ರೂಪಿಸುವ ಮಹೋದ್ದೇಶದಿಂದ ಅನುಷ್ಠಾನ ಗೊಳಿಸಲಾಗಿದೆ. ಆದರೆ ಗ್ರಾಮೀಣ ಭಾಗದ ಅಭಿವೃದ್ಧಿ ಬಿಜೆಪಿ ಹಾಗೂ ಜೆಡಿಎಸ್‍ಗೆ ಬೇಕಿಲ್ಲ. ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿಯನ್ನು 5 ವರ್ಷದಿಂದ ಎರಡೂವರೆ ವರ್ಷಕ್ಕೆ ಕಡಿತಗೊಳಿಸಿ ದ್ದಾರೆ. ಗ್ರಾಪಂಗಳಿಗೆ ಸಾಂವಿಧಾನಿಕ ಕರ್ತವ್ಯ, ಜವಾಬ್ದಾರಿ ಹಾಗೂ ಹೊಣೆಗಾರಿಕೆ ಇದೆ. ಆದರೆ ವಿಧಾನಸೌಧದ ಮುಂದೆ ಹಸುವಿಗೆ ಪೂಜೆ ಸಲ್ಲಿಸುವ ಬಿಜೆಪಿಗೂ ಕೃಷಿಗೂ ಸಂಬಂಧವೇ ಇಲ್ಲ ಎಂದರು.

ಕೊರೊನಾ ಸಂದಿಗ್ಧತೆ ನಡುವೆ ರೈತ ವಿರೋಧಿ ಕಾಯ್ದೆಗಳನ್ನು ತಂದು, 15 ತಿಂಗಳ ಹೋರಾಟದ ಪರಿಣಾಮ ವಾಪಸ್ ಪಡೆದಿರುವುದೇ ಇದಕ್ಕೆ ಸಾಕ್ಷಿ. ಜೆಡಿಎಸ್‍ಗೂ ನಿರ್ದಿಷ್ಟ ರಾಜಕೀಯ ಸಿದ್ಧಾಂತವಿಲ್ಲ. ಈ ಎರಡೂ ಪಕ್ಷಗಳಿಗೂ ಹಳ್ಳಿಗಳ ಅಭಿವೃದ್ಧಿ ಬಗ್ಗೆ ಬದ್ಧತೆ ಇಲ್ಲ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯ ಕತ್ತು ಹಿಸುಕುವ ಕೆಲಸವಾಗುತ್ತಿದೆ. ಹಿಂದುಳಿದವರು, ರೈತರು, ಬಡವರು ಉಳಿಯಬೇಕಾದರೆ ಪಂಚಾಯತ್ ರಾಜ್ ವ್ಯವಸ್ಥೆ ಮೂಲಕ ಮತ್ತೊಂದು ಸ್ವಾತಂತ್ರ್ಯ ಚಳವಳಿ ನಡೆಯುವುದು ಅನಿವಾರ್ಯ. ಆರೋಗ್ಯ ಇಲಾಖೆಯ ಹಲವು ಜವಾಬ್ದಾರಿ ಗಳನ್ನು ಸಮರ್ಥವಾಗಿ ನಿರ್ವಹಿಸಿ, ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನವಾಗಿರುವ, ಗ್ರಾಮೀಣರೊಂದಿಗೆ ಕಾರ್ಯ ನಿರ್ವಹಿಸಬಲ್ಲ ಅರ್ಹ, ಸಮರ್ಥ ಅಭ್ಯರ್ಥಿ ಡಾ.ತಿಮ್ಮಯ್ಯ ಅವರನ್ನು ಗೆಲ್ಲಿಸಿಕೊಡಿ ಎಂದು ಕೋರಿದರು.

ವಿಧಾನಸಭೆಗೆ ದಿಕ್ಸೂಚಿ: ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತ ನಾಡಿ, ವಿಧಾನಪರಿಷತ್ ಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿಯಾಗಲಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚು ಗೆದ್ದರೆ ಪಕ್ಷದ ಬಲ ಹೆಚ್ಚುವುದರ ಜೊತೆಗೆ ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಲಿದೆ. ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚು ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರಿರುವುದು ವರುಣಾ ಕ್ಷೇತ್ರದಲ್ಲಿ. ಒಟ್ಟು 692ರಲ್ಲಿ 590ಕ್ಕೂ ಹೆಚ್ಚು ಕಾಂಗ್ರೆಸ್ ಬೆಂಬಲಿ ತರಿದ್ದಾರೆ. ಎಲ್ಲರೂ ನಮ್ಮ ಪಕ್ಷದ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯನವರಿಗೆ ಮತ ಚಲಾಯಿಸಬೇಕು. ಇದರಲ್ಲಿ ವ್ಯತ್ಯಾಸವಾದರೆ ಕ್ಷೇತ್ರದ ಶಾಸಕನಾದ ನನಗೆ, ಈ ಹಿಂದೆ ಪ್ರತಿನಿಧಿಸಿದ್ದ ನಮ್ಮ ತಂದೆ ಸಿದ್ದರಾಮಯ್ಯನವರಿಗೂ ಅವಮಾನವಾಗುತ್ತದೆ. ಮೀಸಲಾತಿ ವಿರೋಧಿ, ಅಧಿಕಾರ ವಿಕೇಂದ್ರೀಕರಣದ ವಿರೋಧಿ, ಸನಾತನ ಧರ್ಮ ಪುರುತ್ಥಾನದ ಮೂಲಕ ಜಾತಿ ವ್ಯವಸ್ಥೆ ಗಟ್ಟಿಗೊಳಿಸುವ ಹುನ್ನಾರ ಹೊಂದಿರುವ ಬಿಜೆಪಿಯ ಆಮಿಷಕ್ಕೆ ಒಳಗಾಗದೆ ಡಾ.ತಿಮ್ಮಯ್ಯ ಅವರಿಗೆ ಮಾತ್ರ ಪ್ರಾಶಸ್ತ್ಯದ ಮತ ನೀಡಿ, ಗೆಲ್ಲಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಕಾಂಗ್ರೆಸ್ ಮೈಸೂರು ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ವಿಧಾನಪರಿಷತ್ ಸದಸ್ಯ ಆರ್.ಧರ್ಮ ಸೇನ, ಚುನಾವಣಾ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮುಖಂಡರಾದ ಗುರುಪಾದಸ್ವಾಮಿ, ಸುನಿಲ್ ಬೋಸ್, ಎಚ್.ಸಿ.ಬಸವ ರಾಜು, ವರುಣಾ ಮಹೇಶ್, ರಂಗಸ್ವಾಮಿ, ರಮೇಶ್, ಶಿವನಾಗಪ್ಪ, ಅಕ್ಬರ್ ಅಲಿ, ಪದ್ಮನಾಭ್, ಡೊನಾಲ್ಡ್, ಮಾರುತಿ ಮತ್ತಿತರರು ಉಪಸ್ಥಿತರಿದ್ದರು.

Translate »