ಎರಡೂ ಡೋಸ್
News

ಎರಡೂ ಡೋಸ್

December 4, 2021
  • ರಾಜ್ಯದಲ್ಲಿ ಒಮಿಕ್ರಾನ್‍ಗೆ ಕಡಿವಾಣ ಹಾಕಲು ಸರ್ಕಾರದ ಮೊದಲ ಹಂತದ ಎಚ್ಚರಿಕಾ ಕ್ರಮ
  • ಸಲಹಾ ಸಮಿತಿ ತಜ್ಞರೊಂದಿಗೆ ಮುಖ್ಯಮಂತ್ರಿ ಚರ್ಚೆ ನಂತರ ಹಲವು ಎಚ್ಚರಿಕಾ
    ಕ್ರಮದ ನಿರ್ಧಾರ 
  • ಮದುವೆಗೆ ಮತ್ತೆ 500 ಜನರ ಹಾಜರಿ ನಿರ್ಬಂಧ 
  • ಸರ್ಕಾರಿ ನೌಕರರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು 
  • ಸೋಂಕಿತರಿಬ್ಬರಲ್ಲಿ ಸೌಮ್ಯ ರೀತಿ ರೋಗಲಕ್ಷಣ 
  • ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಕಡ್ಡಾಯ; ನೆಗೆಟಿವ್ ಬಂದರೆ ಪ್ರವೇಶ, ಪಾಸಿಟಿವ್ ಬಂದರೆ ಆಸ್ಪತ್ರೆಗೆ ದಾಖಲು 
  • ಆಕ್ಸಿಜನ್, ಐಸಿಯು ಬೆಡ್ ಸಿದ್ಧಗೊಳಿಸಲು ತೀರ್ಮಾನ 
  • ಶಾಲಾ ತರಗತಿಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ

ಬೆಂಗಳೂರು, ಡಿ. 3(ಕೆಎಂಶಿ)- ಮಾಲ್, ಸಿನಿಮಾ ಮಂದಿರಕ್ಕೆ ತೆರಳುವವರು ಕಡ್ಡಾಯ ವಾಗಿ ಕೋವಿಡ್-19 ಎರಡು ಡೋಸ್ ಲಸಿಕೆ ಪಡೆದಿರಬೇಕು. ಇಲ್ಲದಿದ್ದರೆ ಪ್ರವೇಶವಿಲ್ಲ.

ಶಾಲಾ ಕಾಲೇಜಿಗೆ ತೆರಳುವ ಮಕ್ಕಳ ಪೋಷಕರು ಎರಡು ಡೋಸ್ ಲಸಿಕೆ ಪಡೆದಿದ್ದರಷ್ಟೇ ಮಕ್ಕಳಿಗೆ ಪ್ರವೇಶ ನೀಡುವ ಕಠಿಣ ತೀರ್ಮಾನವನ್ನು ರಾಜ್ಯ ಸರ್ಕಾರ ಇಂದಿಲ್ಲಿ ಕೈಗೊಂಡಿದೆ.

ಸರ್ಕಾರಿ ನೌಕರರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆಗಳನ್ನು ಪಡೆದಿರಲೇಬೇಕು ಎಂಬ ನಿಯಮ ಜಾರಿಗೊಳ್ಳಲಿದೆ. ಒಮಿಕ್ರಾನ್ ಸೋಂಕು ತೀವ್ರ ಪರಿಣಾಮ ಬೀರಿಲ್ಲ. ಸೋಂಕಿ ತರಿಗೆ ಸೌಮ್ಯ ರೋಗ ಲಕ್ಷಣಗಳು ಕಂಡು ಬಂದಿವೆ. ಸಾವಿನ ಪ್ರಕರಣಗಳು ವರದಿಯಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಮುನ್ನೆಚ್ಚರಿಕೆಯಾಗಿ ಇನ್ನು ಮುಂದೆ ಮದುವೆ ಮತ್ತು ಇತರೆ ಸಮಾರಂಭದಲ್ಲಿ 500 ಮಂದಿಗಿಂತ ಹೆಚ್ಚು ಜನ ಸೇರುವಂತಿಲ್ಲ ಎಂಬ ತೀರ್ಮಾನ ಕೈಗೊಳ್ಳಲಾಗಿದೆ. ಒಮಿಕ್ರಾನ್ ಸೋಂಕು ದೇಶದಲ್ಲೇ ಮೊಟ್ಟ ಮೊದಲು ರಾಜ್ಯದಲ್ಲಿ ಕಾಣಿಸಿಕೊಂಡಿರುವ ಬೆನ್ನಲ್ಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಲಹಾ ಸಮಿತಿಯ ತಜ್ಞರು, ಅಧಿಕಾರಿಗಳು ಹಾಗೂ ತಮ್ಮ ಸಹೋದ್ಯೋಗಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದ ನಂತರ ಸರ್ಕಾರ ಈ ದಿಟ್ಟ ತೀರ್ಮಾನ ಕೈಗೊಂಡಿದೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಂದಾಯ ಸಚಿವ ಆರ್. ಅಶೋಕ್, ಒಮಿಕ್ರಾನ್ ಹೊಸ ತಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ತಜ್ಞರಿಂದ ಪ್ರಾಥಮಿಕ ಮಾಹಿತಿ ಪಡೆದಿದ್ದೇವೆ. ಅವರು ನೀಡಿರುವ ಮಾಹಿತಿಯಂತೆ ಸೋಂಕಿನಲ್ಲಿ ತೀವ್ರತೆ ಇಲ್ಲ. ಭಾರತ ಸರ್ಕಾರ ಪತ್ರ ಬರೆದು ಪೂರ್ಣ ವರದಿ ನೀಡುವಂತೆ ಕೇಳಿದ್ದೇವೆ. ಇದು ಪ್ರಾಥಮಿಕ ವರದಿ ಅಷ್ಟೇ. ಆದರೆ ರಾಜ್ಯ ಸರ್ಕಾರವೂ ಎಲ್ಲಾ ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತದೆ.

ಇಡೀ ವಿಶ್ವದಲ್ಲಿ 400 ಪ್ರಕರಣ ಅಧಿಕೃತವಾಗಿ ಬಯಲಿಗೆ ಬಂದಿದೆ. ಅದರಲ್ಲಿ ಕರ್ನಾಟಕದ ಎರಡು ಪ್ರಕರಣಗಳೂ ಸೇರಿವೆ. ಸೋಂಕಿಗೆ ಒಳಗಾದವರು ಆರೋಗ್ಯವಾಗಿದ್ದಾರೆ. ಈ ಸೋಂಕಿನಿಂದ ಇದುವರೆಗೂ ಯಾವುದೇ ಸಾವುಗಳು ಸಂಭವಿಸಿಲ್ಲ. ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಿ, ನೆಗೆಟಿವ್ ಬಂದರೆ ಮಾತ್ರ ರಾಜ್ಯಕ್ಕೆ ಪ್ರವೇಶ. ಒಂದು ವೇಳೆ ಪರೀಕ್ಷೆ ವೇಳೆ ಪಾಸಿಟಿವ್ ಬಂದರೆ ಅಂತಹವರನ್ನು ನೇರವಾಗಿ ಆಸ್ಪತ್ರೆಗೆ ದಾಖಲು ಮಾಡಲಾಗುವುದು. ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪರೀಕ್ಷೆಗೆ ಅವಕಾಶ ಮಾಡಿಕೊಡುವುದಲ್ಲದೆ, ತ್ವರಿತಗತಿಯಲ್ಲಿ ಪರೀಕ್ಷೆ ಫಲಿತಾಂಶ ಪಡೆಯಲು ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ ಎಂದರು. ಇಂದಿನಿಂದಲೇ ಶಾಲಾ ಕಾಲೇಜುಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಕೇರಳದಿಂದ ಬಂದಿರುವ ವಿದ್ಯಾರ್ಥಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವುದನ್ನು ನಿಷೇಧಿಸಲಾಗಿದೆ. ಒಮಿಕ್ರಾನ್ ಜೊತೆಗೆ ಈಗಾಗಲೇ ಕಂಡು ಬಂದಿರುವ ಡೆಲ್ಟಾ ವೈರಸ್ ಸೋಂಕಿನ ಕುರಿತು ಸಹ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ನರ್ಸಿಂಗ್, ಅರೆ ವೈದ್ಯಕೀಯ ತರಬೇತಿ ಸಂಸ್ಥೆಗಳಲ್ಲಿ ಶೇಕಡ 100 ರಷ್ಟು ಪರೀಕ್ಷೆ ನಡೆಸಲಾಗುವುದು. 65 ವರ್ಷದ ಮೇಲಿನ ವ್ಯಕ್ತಿಗಳು ಹಾಗೂ ಇತರ ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳಿಗೆ ಸಹ ಪರೀಕ್ಷೆ ನಡೆಸುತ್ತೇವೆ ಎಂದರು.

ತರಗತಿ ಯಥಾಸ್ಥಿತಿ: ಶಾಲೆಗಳಲ್ಲಿ ಸದ್ಯಕ್ಕೆ ತರಗತಿಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾ ಗುವುದು, ಆದರೂ ಇಲ್ಲಿ ತೀವ್ರ ನಿಗಾ ವಹಿಸಲು ಸೂಚಿಸಲಾಗಿದೆ. ಪರೀಕ್ಷಾ ಸಾಮಥ್ರ್ಯ ವನ್ನು ಹಾಗೂ ಪರೀಕ್ಷಾ ಪ್ರಮಾಣದ ಗುರಿಯನ್ನು ಪ್ರತಿನಿತ್ಯ ಒಂದು ಲಕ್ಷಕ್ಕೆ ಹೆಚ್ಚಿಸಲಾಗುವುದು. ಕೋವಿಡ್-19 ಎರಡನೇ ಅಲೆಯಲ್ಲಿ ಎದುರಾದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆಯಾಗಿ ಮತ್ತೆ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರೋಗ್ಯ ಇಲಾಖೆಗೆ ತಿಳಿಸಿದ್ದಾರೆ.

ಆಕ್ಸಿಜನ್, ಐಸಿಯು ಬೆಡ್ ರೆಡಿ: ಆಕ್ಸಿಜನ್ ಹಾಗೂ ಐಸಿಯು ಬೆಡ್‍ಗಳನ್ನು ಸಿದ್ದಗೊಳಿ ಸಲು ಸೂಚಿಸಲಾಗಿದೆ. ಆಕ್ಸಿಜನ್ ಜಾಲ ಸಮಿತಿ ಮತ್ತೆ ತನ್ನ ಕಾರ್ಯ ಆರಂಭಿಸುತ್ತದೆ. ರಾಜ್ಯದಲ್ಲಿ ಕಂಟ್ರೋಲ್ ರೂಂ ಆರಂಭಿಸಲು ಸೂಚಿಸಲಾಗಿದೆ. ಕಳೆದ ಬಾರಿ ಉಂಟಾದ ಔಷಧಿಯ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಶಾಂಘ್ರಿಲಾ ಹೊಟೇಲ್‍ನಲ್ಲಿ ಸಭೆ ಮಾಡಿ ಹೋದವರಿಗೆ ಪಾಸಿಟಿವ್ ಬಂದಿರುವ ಬಗ್ಗೆ ತಪ್ಪು ಮಾಹಿತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ಮಾಡಿದ್ದು, ಇದರ ಉಸ್ತುವಾರಿ ನೋಡಿಕೊಳ್ಳಲು ಹಿರಿಯ ಅಧಿಕಾರಿ ಮೀನಾ ನಾಗರಾಜ ಅವರನ್ನು ನೇಮಿಸಲಾಗಿದೆ. ಸೋಂಕಿಗೆ ನಿಗದಿಪಡಿಸಿರುವ ಹಾಸಿಗೆಗಳನ್ನು ಮತ್ತೆ ಕೋವಿಡ್-19 ರೋಗಿಗಳಿಗೆ ಮೀಸಲಿಡಬೇಕು. ಆಕ್ಸಿಜನ್ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು.

ಹೊಸ ವರ್ಷಾಚರಣೆ ಸಂಬಂಧ ಮುಂದೆ ನಿರ್ಧಾರ: ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನ ನಿಗದಿತ ಸಮಯದಂತೆ ಜರುಗಲಿದೆ. ಹೊಸ ವರ್ಷ ಆಚರಣೆಗೆ ಸಂಬಂಧಿಸಿದಂತೆ ಸರ್ಕಾರ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದರು. ಕೊರೊನಾ ಸೋಂಕಿನ, ರೂಪಾಂತರಿಗೆ ಸಂಬಂದಿಸಿದಂತೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿಗದಿಪಡಿಸಿರುವ ನಿಯಮಾವಳಿಗಳನ್ನು ಚಾಚು ತಪ್ಪದಂತೆ ಪಾಲಿಸಲು ಸಚಿವ ಅಶೋಕ್ ಮನವಿ ಮಾಡಿದರು. ಆರ್ಥಿಕ ಚಟುವಟಿಕೆಗಳು ಮತ್ತೆ ಯಥಾಸ್ಥಿತಿಗೆ ಬರುವ ಸಂದರ್ಭದಲ್ಲಿ ಲಾಕ್‍ಡೌನ್ ಸೇರಿದಂತೆ ಯಾವುದೇ ಕಠಿಣ ನಿಲವು ತೆಗೆದುಕೊಳ್ಳುವುದಿಲ್ಲ. ಆದರೆ ಸಾರ್ವಜನಿಕರು ಸರ್ಕಾರದ ಜೊತೆ ಸಹಕರಿಸಬೇಕೆಂದರು.

Translate »