ಸಾತಗಳ್ಳಿ ನಿವಾಸಿ, ಕೊರೊನಾ ಗೆದ್ದ ವ್ಯಕ್ತಿಯ ಅನುಭವ ಕಥನ
ಮೈಸೂರು, ಆ.23(ವೈಡಿಎಸ್)- `ಕುಟುಂಬದ ನಾಲ್ವರಿಗೂ ಕೊರೊನಾ ಪಾಸಿಟಿವ್ ಬಂದಾಗ ತುಂಬಾ ಭಯ ಆಗಿತ್ತು. ಗಟ್ಟಿ ಮನಸ್ಸಿಂದ ಕೊರೊನಾ ವಿರುದ್ಧ ಹೋರಾಡಿ ಗೆದ್ದೆವು’… `ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸ್ಬೇಕು. ಬಿಸಿನೀರು ಹೆಚ್ಚು ಕುಡೀಬೇಕು. ಧೈರ್ಯವಾಗಿ ಇರ್ಬೇಕು. ಇದಕ್ಕೆ ಧೈರ್ಯವೇ ಮದ್ದು’…
ಇದು ಸಾತಗಳ್ಳಿ ನಿವಾಸಿ, ಕೊರೊನಾ ಗುಣಮುಖ(ಎಂವೈಎಸ್2556)ವ್ಯಕ್ತಿಯ ಅನುಭವದ ಮಾತುಗಳು.
`ನನಗೆ ಕೊರೊನಾ ಹೇಗ್ಬಂತು ಎಂದು ಗೊತ್ತಿಲ್ಲ. 20 ದಿನಗಳಿಂದ ಜ್ವರ ದಿನಬಿಟ್ಟು ದಿನ ಬರ್ತಿತ್ತು. ಮಾತ್ರೆ ಸೇವಿಸ್ದಾಗ ಕಡಿಮೆಯಾಗ್ತಿತ್ತು. ಜು.20ರಂದು ರ್ಯಾಪಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂತು. ಮರುದಿನವೇ ಪತ್ನಿ, ಮಗ, ಮಗಳ ಪರೀಕ್ಷೆ ಮಾಡಿಸ್ದೆ. ಅವರಿಗೂ ಪಾಸಿಟಿವ್ ಬಂತು. ಅಂದಿನಿಂದ ನಾಲ್ವರೂ 14 ದಿನ ಮನೇಲೇ ಕ್ವಾರಂಟೈನ್ ಆಗಿದ್ದೆವು. ಆ ಅವಧಿ ಈಗ ಮುಕ್ತಾಯವಾಗಿದೆ. ಸದ್ಯ ನಾಲ್ವರೂ ಆರೋಗ್ಯವಾಗಿದ್ದೀವಿ’ ಎಂದರು.
ಆರೋಗ್ಯ ವಿಚಾರಿಸುತ್ತಿದ್ದರು: ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾಗ ವೈದ್ಯರು ಪ್ರತಿದಿನ ಕರೆ ಮಾಡಿ ಆರೋಗ್ಯ ವಿಚಾರಿಸ್ತಿದ್ರು. ಆರೋಗ್ಯದಲ್ಲಿ ಏರುಪೇರಾದರೆ ಮನೆಗೆ ಬಂದು ಚಿಕಿತ್ಸೆ ನೀಡ್ತಿದ್ರು. ಪಕ್ಕದ ಮನೆಯವರÀು ಸಹ ಆಗಾಗ್ಗೆ ಆರೋಗ್ಯ ವಿಚಾರಿಸುತ್ತಿದ್ದರು.
ಭಯ ಆಗಿತ್ತು: ಪಾಸಿಟಿವ್ ಬಂದಾಗ ತುಂಬಾ ಭಯವಾಗಿತ್ತು. ಭಯಪಟ್ಟು ಸಾಯುವುದಕ್ಕಿಂತ ಕೊರೊನಾ ಗೆಲ್ಲಬೇಕೆಂದು ಧೈರ್ಯದಿಂದಲೇ ಎದುರಿಸಿದೆವು. ಅದರಿಂದ ಬಹುಬೇಗ ಗುಣಮುಖರಾಗಲು ಸಹಕಾರಿಯಾಯಿತು.
ಚಹಾ ಬಿಡಿಸಿತು: ನನಗೆ ಚಹಾ ಬಿಟ್ಟಿರಲು ಆಗ್ತಿರ್ಲಿಲ್ಲ. ಆದರೆ, ಕೊರೊನಾ ಪಾಸಿಟಿವ್ ಬಂದಾಗಿಂದ ಚಹಾವನ್ನೇ ಸೇವಿಸಿಲ್ಲ. ಬದಲಾಗಿ ಕಷಾಯ, ಬಿಸಿನೀರು ಹೆಚ್ಚು ಉಪಯೋಗಿಸುತ್ತಿದ್ದೀನಿ.
ದಿನಸಿ ಇತ್ತು: ತಿಂಗಳಿಗೆ ಆಗುವಷ್ಟು ದಿನಸಿ ಪದಾರ್ಥ ಮನೆಯಲ್ಲಿದೆ. ಹಾಗಾಗಿ ಕ್ವಾರಂಟೈನ್ ವೇಳೆ ಸಮಸ್ಯೆ ಆಗಲಿಲ್ಲ.