ವೀಕೆಂಡ್ ಕಫ್ರ್ಯೂ, ಎರಡನೇ ದಿನವೂ ಕೊಡಗು ಸ್ತಬ್ಧ
ಕೊಡಗು

ವೀಕೆಂಡ್ ಕಫ್ರ್ಯೂ, ಎರಡನೇ ದಿನವೂ ಕೊಡಗು ಸ್ತಬ್ಧ

April 26, 2021

ಮಡಿಕೇರಿ,ಏ.25-ವೀಕೆಂಡ್ ಕಫ್ರ್ಯೂನ 2ನೇ ದಿನವಾದ ಭಾನುವಾರ ಕೂಡ ಕೊಡಗು ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ. ಭಾನುವಾರ ಬೆಳಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮಳಿಗೆಗಳನ್ನು ತೆರೆದಿದ್ದರೂ ಕೂಡ ಹೆಚ್ಚಿನ ಗ್ರಾಹಕರು ಕಂಡು ಬರಲಿಲ್ಲ.
ಇನ್ನು ಮಹಾವೀರ ಜಯಂತಿ ಹಿನ್ನೆಲೆ ಯಲ್ಲಿ ಮಾಂಸ ಮಾರುಕಟ್ಟೆಯನ್ನು ಬಂದ್ ಮಾಡಲಾಗಿತ್ತು. ಮಾರುಕಟ್ಟೆಯಲ್ಲಿ ಮೀನು ಮಳಿಗೆ ತೆರೆದಿತ್ತಾದರೂ, ಹೊರ ಭಾಗದಿಂದ ಮೀನು ಪೂರೈಕೆಯಾಗದ ಕಾರಣ ಬಹುತೇಕ ಗ್ರಾಹಕರಿಗೆ ಮೀನು ಕೂಡ ಲಭ್ಯವಾಗದೆ ಖಾಲಿ ಕೈಯಲ್ಲಿ ಮನೆಗೆ ಮರಳಬೇಕಾಯಿತು. ಕರ್ಫ್ಯೂ ಸಮಯದಲ್ಲಿ ತುರ್ತು ವಾಹನ ಸಂಚಾರ ಹೊರತುಪಡಿಸಿ, ಉಳಿದ ಎಲ್ಲ ರೀತಿಯ ವಾಹನ ಸಂಚಾರವೂ ಬಂದ್ ಆಗಿತ್ತು.

ಭಾನುವಾರವೂ ಕೂಡ ಸಾರ್ವಜನಿಕರು ಕೂಡ ರಸ್ತೆಗೆ ಇಳಿಯದೇ ಜಿಲ್ಲಾಡಳಿತದ ಸೂಚನೆಯನ್ನು ಪಾಲಿಸಿದ್ದು ಕಂಡು ಬಂತು. ಸಂಚಾರಿ ಪೊಲೀಸರು ಕೂಡ ನಗರ ಪಟ್ಟಣ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಾ ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿದ್ದರು. ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳು, ಚೆಸ್ಕಾಂ ಸಿಬ್ಬಂದಿಗಳ ಓಡಾಟಕ್ಕೆ ಮುಕ್ತ ಅವಕಾಶ ನೀಡಲಾಗಿತ್ತು. ಪೆಟ್ರೋಲ್ ಬಂಕ್‍ಗಳು ತೆರೆದಿದ್ದರೂ ವಾಹನ ವ್ಯಾಪಾರ ವಹಿವಾಟು ಇಲ್ಲದೇ ಬಿಕೋ ಎನ್ನುತ್ತಿತ್ತು. ಪೆಟ್ರೋಲಿಯಂ, ಅಡುಗೆ ಅನಿಲ, ಹಾಲು, ದಿನಸಿ ಸಾಮಾಗ್ರಿ ಸೇರಿದಂತೆ ಅಗತ್ಯ ವಸ್ತುಗಳ ಸೇವೆ ನೀಡುವ ವಾಹನಗಳು ಎಂದಿನಂತೆ ಸಂಚರಿಸಿದವು. ಕಫ್ರ್ಯೂ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

Translate »