ವಾರಾಂತ್ಯ ಕಫ್ರ್ಯೂ: ಮೈಸೂರಲ್ಲಿ ಭಾರೀ ಜನಸ್ಪಂದನೆ
ಮೈಸೂರು

ವಾರಾಂತ್ಯ ಕಫ್ರ್ಯೂ: ಮೈಸೂರಲ್ಲಿ ಭಾರೀ ಜನಸ್ಪಂದನೆ

January 9, 2022

ಮೈಸೂರು, ಜ. 8(ಆರ್‍ಕೆ)- ಹೊಸ ವರ್ಷದ ಮೊದಲ ವೀಕೆಂಡ್ ಕಫ್ರ್ಯೂ ವಿಗೆ ಮೈಸೂರು ನಗರ ಸೇರಿದಂತೆ ಜಿಲ್ಲೆ ಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ಅನಗತ್ಯವಾಗಿ ವಾಹನಗಳಲ್ಲಿ ಸುತ್ತುವವ ರಿಗೆ ಬ್ರೇಕ್ ಹಾಕಬೇಕಿದೆ. ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಕೊರೊನಾ 3ನೇ ಅಲೆಯನ್ನು ಕಟ್ಟಿ ಹಾಕಲೆಂದು ರಾಜ್ಯ ಸರ್ಕಾರವು ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆವರೆಗೆ ಜಾರಿಗೊಳಿ ಸಿರುವ ವಾರಾಂತ್ಯ ಕಫ್ರ್ಯೂವಿಗೆ ನಾಗರಿಕರು ಸ್ಪಂದಿಸುತ್ತಿದ್ದಾರೆ. ಮೊದಲ ದಿನವಾದ ಇಂದು ಎಲ್ಲಾ ಅಂಗಡಿ ಮುಂಗಟ್ಟು, ಸಿನಿಮಾ ಮಂದಿರ, ಜಿಮ್, ಕ್ಲಬ್, ಪಬ್, ಮದ್ಯದಂಗಡಿ, ಸ್ವಿಮ್ಮಿಂಗ್ ಪೂಲ್, ಪಾರ್ಕ್, ಮಾಲ್‍ಗಳು ಕಾರ್ಯ ನಿರ್ವಹಿಸಲಿಲ್ಲ.ದೇವಸ್ಥಾನಗಳು, ಅರಮನೆ, ಮೃಗಾಲಯ, ಕಾರಂಜಿಕೆರೆ ಉದ್ಯಾನವನ, ದಸರಾ ವಸ್ತು ಪ್ರದರ್ಶನಗಳಂತಹಪ್ರವಾಸಿ ಕೇಂದ್ರಗಳು, ಬ್ಯಾಂಕ್, ಜೀವ ವಿಮಾ ಕಂಪನಿಗಳು, ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು, ವಾಹನ ಶೋ ರೂಂಗಳು, ಹಳೇ ವಾಹನ ಮಾರಾಟ ಕೇಂದ್ರ, ಗ್ಯಾರೇಜ್‍ಗಳು ಸಂಪೂರ್ಣ ಬಂದ್ ಆಗಿದ್ದವು. ಸರ್ಕಾರದ ಮಾರ್ಗಸೂಚಿಯಲ್ಲಿ ಅವಕಾಶ ನೀಡಿರುವುದರಿಂದ ಹಣ್ಣು, ಹಾಲು, ತರಕಾರಿ, ಮೀನು, ಮಾಂಸ, ಮೊಟ್ಟೆ, ಆಹಾರ ಧಾನ್ಯ, ದಿನಸಿ, ನ್ಯಾಯಬೆಲೆ ಅಂಗಡಿಗಳ ಪಡಿತರ, ಔಷಧಿ ಅಂಗಡಿಗಳು ತೆರೆದಿದ್ದು, ಎಂದಿನಂತೆ ವ್ಯಾಪಾರ-ವಹಿವಾಟುಗಳು ನಡೆದವು.

ಪಾರ್ಸಲ್ ಇತ್ತು: ಹೋಟೆಲ್‍ಗಳಲ್ಲಿ ಕುಳಿತು ಊಟ-ತಿಂಡಿ ಸೇವಿಸುವ ನಿರ್ಬಂಧ ವಿದ್ದ ಕಾರಣ, ಆಹಾರವನ್ನು ಪಾರ್ಸೆಲ್ ಮಾಡಿಸಿ ಗ್ರಾಹಕರು ಕೊಂಡೊಯ್ಯುತ್ತಿದ್ದಾರೆ. ರೆಸ್ಟೋರೆಂಟ್‍ಗಳಲ್ಲೂ ಆಹಾರ ಪದಾರ್ಥಗಳ ಪಾರ್ಸೆಲ್ ನೀಡಲಾಗುತ್ತಿದೆ. ಬೇಕರಿ, ಸ್ವೀಟ್ ಅಂಗಡಿಗಳಲ್ಲಿ ವ್ಯಾಪಾರ ಸಾಮಾನ್ಯವಾಗಿತ್ತು. ಅದೇ ರೀತಿ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಪೆಟ್ರೋಲ್ ಬಂಕ್, ಗ್ಯಾಸ್ ಬಂಕ್‍ಗಳು, ಅಡುಗೆ ಅನಿಲ ಸಿಲಿಂಡರ್ ಪೂರೈಕೆ, ಆನ್‍ಲೈನ್‍ನಲ್ಲಿ ಬುಕ್ ಮಾಡಿದ ಗ್ರಾಹಕರಿಗೆ ಆಹಾರ, ಔಷಧಿಗಳನ್ನು ಮನೆ ಮನೆಗೆ ಪೂರೈಸುವ ಸೇವೆಯಲ್ಲಿ ಯಾವುದೇ ವ್ಯತ್ಯಾಸಗಳಾಗಲಿಲ್ಲ.

ಸಾರಿಗೆ ಸೇವೆ ಲಭ್ಯ: ವಾರಾಂತ್ಯ ಕಫ್ರ್ಯೂ ಜಾರಿಯಲ್ಲಿದ್ದರು, ಕೆಎಸ್‍ಆರ್‍ಟಿಸಿ, ಖಾಸಗಿ ಬಸ್, ಆಟೋ, ಟ್ಯಾಕ್ಸಿ, ರೈಲು, ವಿಮಾನ, ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅಡ್ಡಿ ಇರಲಿಲ್ಲ. ಆದರೆ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಪ್ರಯಾಣಿಕರ ಸಂಖ್ಯೆಗನು ಗುಣವಾಗಿ ಸಾರಿಗೆ ಮತ್ತು ಖಾಸಗಿ ಬಸ್‍ಗಳ ಸೇವೆಯನ್ನು ಒದಗಿಸಲಾಯಿತು.

ಪೊಲೀಸ್ ಕಣ್ಗಾವಲು: ಸರ್ಕಾರ ಜಾರಿಗೆ ತಂದಿರುವ ವಾರಾಂತ್ಯ ಕಫ್ರ್ಯೂ ಆದೇಶವನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಹೊತ್ತಿರುವ ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸರು, ಪ್ರಮುಖ ರಸ್ತೆ, ಜಂಕ್ಷನ್, ಸರ್ಕಲ್‍ಗಳಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ತೀವ್ರ ನಿಗಾ ವಹಿಸುತ್ತಿದ್ದಾರೆ. ಆಸ್ಪತ್ರೆ, ಮೆಡಿಕಲ್ ಸ್ಪೋರ್, ಹೋಟೆಲ್‍ಗಳಿಗೆ ಹೋಗುವವರು, ಅಗತ್ಯ ಸೇವೆಗಾಗಿ ಸಂಚರಿಸುವವರಿಗೆ ಸ್ಥಳದಲ್ಲಿರುವ ಪೊಲೀಸರು ತೊಂದರೆ ನೀಡುತ್ತಿಲ್ಲ. ಚೆಕ್‍ಪೋಸ್ಟ್‍ಗಳಲ್ಲಿ ಬರುವ ವಾಹನಗಳನ್ನು ತಡೆದು ಅವರ ಪ್ರಯಾಣ ದಾಖಲೆಗಳನ್ನು ಪರಿಶೀಲಿಸಿ ಕಳುಹಿಸಿಕೊಡುತ್ತಿರುವ ಪೊಲೀಸರು, ತುರ್ತು ಸೇವೆ ಎಂದು ಕಂಡುಬಂದಲ್ಲಿ ಸಂಚಾರಕ್ಕೆ ಅವಕಾಶ ನೀಡುತ್ತಿದ್ದಾರೆ.

ಮಾಸ್ಕ್ ಕಾರ್ಯಾಚರಣೆ: ವಾರಾಂತ್ಯ ಕಫ್ರ್ಯೂ ನಿರ್ಬಂಧಕಾಜ್ಞೆಯನ್ನು ಪರಿಣಾಮಕಾರಿ ಯಾಗಿ ಜಾರಿ ಮಾಡಲೆಂದು ಕರ್ತವ್ಯ ನಿರ್ವಹಿಸುತ್ತಿರುವ ಸಿವಿಲ್, ಸಂಚಾರ ಠಾಣೆ ಪೊಲೀಸರು, ಮಾಸ್ಕ್ ಧರಿಸದವರು, ಅನಗತ್ಯವಾಗಿ ಓಡಾಡುವವರು, ಸಾಮಾಜಿಕ ಅಂತರ ಕಾಪಾಡದೆ ಗುಂಪು ಕಟ್ಟಿ ನಿಲ್ಲುವವರಿಗೆ ತಿಳಿವಳಿಕೆ ಹೇಳಿ ಕಳುಹಿಸುತ್ತಿದ್ದಾರೆ. ರೂಪಾಂತರಿ ಒಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತಿರುವುದರಿಂದ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಿಮ್ಮ ಮತ್ತು ಕುಟುಂಬದವರ ಆರೋಗ್ಯ ರಕ್ಷಿಸಿ ಎಂದು ಪೊಲೀಸರು ನಾಗರಿಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಅನಿರೀಕ್ಷಿತ ಭೇಟಿ: ಕಲ್ಯಾಣ ಮಂಟಪ, ವೆಡ್ಡಿಂಗ್ ಹಾಲ್‍ಗಳಿಗೆ ಸ್ಥಳೀಯ ಪಾಲಿಕೆ ಅಧಿಕಾರಿಗಳೊಂದಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು, ಮದುವೆ ರಿಸಪ್ಷನ್, ಶುಭ ಸಮಾರಂಭಗಳಲ್ಲಿ ವಿಡಿಯೋ ಮಾಡಿ ಹೆಚ್ಚುವರಿಯಾಗಿ ಸೇರಿದ್ದವರನ್ನು ಹೊರಕ್ಕೆ ಕಳುಹಿಸಿದರು. ಸದಾ ಜನರಿಂದ ಗಿಜಿಗುಡುತ್ತಿದ್ದ ದೇವರಾಜ ಮಾರುಕಟ್ಟೆ, ಕೆ.ಆರ್, ಮಂಡಿ ಮಾರ್ಕೆಟ್, ಮಕ್ಕಾಜಿ ಚೌಕ, ಚಿಕ್ಕಗಡಿಯಾರ, ಬೋಟಿ ಬಜಾರ್, ಕೆ.ಆರ್. ಸರ್ಕಲ್, ಡಿ. ದೇವರಾಜ ಅರಸು ರಸ್ತೆ, ಶಿವರಾಂಪೇಟೆ, ಸಂತೇಪೇಟೆ ಗಳಲ್ಲಿ ಕಫ್ರ್ಯೂನಿಂದಾಗಿ ಮರುಭೂಮಿಯಂತಿದ್ದ ದೃಶ್ಯ ಇಂದು ಕಂಡುಬಂದಿತು.

ಅಧಿಕಾರಿಗಳಿಂದ ಪರಿಶೀಲನೆ: ಹೊಸ ವರ್ಷದ ಮೊದಲ ವೀಕೆಂಡ್ ಕಫ್ರ್ಯೂ ಜಾರಿಯಾದ ಮೊದಲ ದಿನ ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಅಡಿಷನಲ್ ಡಿಸಿ ಮಂಜುನಾಥಸ್ವಾಮಿ, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ ಅವರು ಇಂದು ಪ್ರದಕ್ಷಿಣೆ ಮಾಡಿ ಗಸ್ತು ಜಾರಿ ಹಾಗೂ ಸಾರ್ವಜನಿಕರ ಪ್ರತಿಕ್ರಿಯೆಯನ್ನು ಅವಲೋಕಿಸಿದರು.

Translate »