ಕೋವಿಡ್ ನಿಯಮ ಪಾಲನೆಯೊಂದಿಗೆ ಪಾದಯಾತ್ರೆ ನಡೆಸಿಯೇ ತೀರುತ್ತೇವೆ
News

ಕೋವಿಡ್ ನಿಯಮ ಪಾಲನೆಯೊಂದಿಗೆ ಪಾದಯಾತ್ರೆ ನಡೆಸಿಯೇ ತೀರುತ್ತೇವೆ

January 9, 2022

ಕನಕಪುರ, ಜ.8-ವೀಕೆಂಡ್ ಕಫ್ರ್ಯೂ ನಡುವೆಯೇ `ನೀರಿಗಾಗಿ ನಡಿಗೆ’, `ನಮ್ಮ ನೀರು, ನಮ್ಮ ಹಕ್ಕು’ ಹೆಸರಿನಲ್ಲಿ ಉದ್ದೇಶಿತ ಮೇಕೆದಾಟು ಪಾದಯಾತ್ರೆ ಯನ್ನು ಭಾನುವಾರ ಬೆಳಗ್ಗೆ 8.30ಕ್ಕೆ ಪ್ರಾರಂಭಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಕೋವಿಡ್ ನಿಯಮಗಳ ಪಾಲನೆ ಯೊಂದಿಗೆ ಪಾದಯಾತ್ರೆ ನಡೆಸಲಿರು ವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಮೇಕೆದಾಟು ಪಾದಯಾತ್ರೆ ಹಿನ್ನೆಲೆಯಲ್ಲಿ ಕನಕಪುರ ದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಶನಿವಾರ ಶಾಸಕಾಂಗ ಪಕ್ಷದ ಸಭೆ ನಡೆಸಿದ ನಂತರ ಜಂಟಿ ಸುದ್ದಿ ಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ, ನಾಳೆ ಪಾದಯಾತ್ರೆ ನಡೆಸಿಯೇ ತೀರುತ್ತೇವೆ ಎಂದು ಘಂಟಾಘೋಷವಾಗಿ ಹೇಳಿದರು. ಮೇಕೆದಾಟು ವಿಚಾರ ವಾಗಿ ಬಿಜೆಪಿ ಎರಡು ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿದ ಈ ನಾಯಕರು, ಬಿಜೆಪಿಯಿಂದ ನೀಡಿರುವ ಜಾಹೀರಾತನ್ನು ಯಾರು ನೀಡಿದ್ದಾರೆ ಎಂಬ ಹೆಸರನ್ನೂ ಕೂಡ ಉಲ್ಲೇಖಿಸದೇ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದರು. ಕಾಂಗ್ರೆಸ್ ನೀರಿಗಾಗಿ ನಡೆಸುತ್ತಿರುವ ಪಾದಯಾತ್ರೆ ಯನ್ನು ತಡೆಯಲು ಅಧಿಕಾರಿಗಳ ಮೂಲಕ ಒತ್ತಡ ಹೇರುವ ಪ್ರಯತ್ನ ವನ್ನು ಸರ್ಕಾರ ಮಾಡಿದೆ ಎಂದರು. ನಾಳೆ ಪಾದಯಾತ್ರೆ ವೇಳೆ ಯಾವ ರೀತಿಯ ಮುಂಜಾಗ್ರತೆ ವಹಿಸಬೇಕು ಎಂಬುದರ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚಿಸಿದ್ದೇವೆ. ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಲಕ್ಷಕ್ಕೂ ಹೆಚ್ಚು ಮಾಸ್ಕ್‍ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಶುದ್ಧ ಕುಡಿಯುವ ನೀರು ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ನಾನು ಮತ್ತು ಸಿದ್ದರಾಮಯ್ಯ ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದಂತೆ ನಡೆದುಕೊಳ್ಳಲು ಬದ್ಧರಾಗಿ ನಾಳೆ ಬೆಳಗ್ಗೆ 8.30ಕ್ಕೆ `ನೀರಿಗಾಗಿ ನಡಿಗೆ, ನಮ್ಮ ನೀರು-ನಮ್ಮ ಹಕ್ಕು’ ಪಾದಯಾತ್ರೆಯನ್ನು ಆರಂಭಿಸಲಿದ್ದೇವೆ. ಈ ಹೋರಾಟ ರಾಜ್ಯದ ರೈತರ ಹಿತಕ್ಕಾಗಿ ಹಾಗೂ ಬೆಂಗಳೂರಿನ ಕುಡಿಯುವ ನೀರಿಗಾಗಿ ನಡೆಯುತ್ತಿದೆಯೇ ಹೊರತು, ಯಾವುದೇ ರಾಜಕೀಯ ಕಾರಣಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ ಡಿ.ಕೆ.ಶಿವಕುಮಾರ್, ಪಾದಯಾತ್ರೆಯಲ್ಲಿ ಭಾಗವಹಿಸುವವರು ಬೆಳಗ್ಗೆ 7.30ಕ್ಕೆಲ್ಲಾ ಸ್ಥಳದಲ್ಲಿರಬೇಕು. ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸಬೇಕು. ಕೋವಿಡ್ ನಿಯಮ ಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು. ರಾಮನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚೇನೂ ಇಲ್ಲ. ಈ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ರೋಗಿ ಐಸಿಯುವಿ ನಲ್ಲಿ ಇಲ್ಲ. ಯಾವುದೇ ಸಾವೂ ಕೂಡ ಸಂಭವಿಸಿಲ್ಲ. ಆದರೂ ಕಫ್ರ್ಯೂ ಹೇರಿ 144 ಸೆಕ್ಷನ್ ಜಾರಿಗೊಳಿಸಿರುವುದು ನಿಯಮ ಬಾಹಿರ. ನಮ್ಮ ಪಾದಯಾತ್ರೆಗೆ ಅಡ್ಡಿಪಡಿಸ ಬೇಕೆಂಬ ಕಾರಣಕ್ಕಾಗಿಯೇ ಕಫ್ರ್ಯೂ ಹೇರಲಾಗಿದೆ ಎಂದು ಅವರು ಆರೋಪಿಸಿದರು.

ಸರ್ಕಾರದಿಂದ ಸುಳ್ಳು ಮಾಹಿತಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸರ್ಕಾರವು ಸುಳ್ಳು ಮಾಹಿತಿಗಳನ್ನು ಮಾಧ್ಯಮದ ಮೂಲಕ ಜನರಿಗೆ ನೀಡುತ್ತಿದೆ. ಎರಡು ಪತ್ರಿಕೆಗಳಲ್ಲಿ ಸುಳ್ಳು ಮಾಹಿತಿಗಳುಳ್ಳ ಜಾಹೀರಾತನ್ನು ನೀಡಲಾಗಿದೆ. ಆದರೆ ಈ ಜಾಹೀರಾತು ನೀಡಿದ್ದು ಯಾರು? ಎಂಬ ಹೆಸರನ್ನೂ ಕೂಡ ಉಲ್ಲೇಖಿಸಿಲ್ಲ. ಈ ಜಾಹೀರಾತು ಕಾಂಗ್ರೆಸ್ ವಿರುದ್ಧ ಅಪಪ್ರಚಾರಕ್ಕಾಗಿ ನೀಡಿರುವ ಜಾಹೀರಾತು ಎಂದರು. ಮೇಕೆದಾಟು ಹೋರಾಟ ರಾಜಕಾರಣಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜನರಿಗೆ ಅನ್ಯಾಯ ಮಾಡಿ ಯೋಜನೆ ಅನುಷ್ಠಾನಕ್ಕೆ ವಿಳಂಬ ಮಾಡುತ್ತಿರುವ ಬಿಜೆಪಿ ನಮ್ಮ ಹೋರಾಟವನ್ನು ರಾಜಕೀಯ ಹೋರಾಟ ಎಂದು ಅಪಪ್ರಚಾರ ಮಾಡುತ್ತಿದೆ ಎಂದು ಕಿಡಿಕಾರಿದರು. ಕೋವಿಡ್ 3ನೇ ಅಲೆ ಪ್ರಾರಂಭಕ್ಕೂ ಮುನ್ನವೇ ಎರಡು ತಿಂಗಳ ಹಿಂದೆಯೇ ನಾನು(ಸಿದ್ದರಾಮಯ್ಯ) ಮತ್ತು ಡಿ.ಕೆ.ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಘೋಷಿಸಿದ್ದೇವೆ ಎಂದ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಎರಡೂವರೆ ವರ್ಷವಾಗಿದೆ. ಕೇಂದ್ರದಲ್ಲೂ ಅವರದೇ ಸರ್ಕಾರವಿದೆ. ಕೇಂದ್ರ ಪರಿಸರ ಇಲಾಖೆಯ ಅನುಮತಿ ಪಡೆದರೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ಕೇವಲ 15 ದಿನದಲ್ಲಿ ಅನುಮತಿ ಪಡೆಯಲು ಸಾಧ್ಯ. ಹೀಗಿರುವಾಗ ಎರಡೂವರೆ ವರ್ಷದಿಂದ ಬಿಜೆಪಿ ಈ ವಿಚಾರದಲ್ಲಿ ಏನೂ ಮಾಡದೇ ಜನರಿಗೆ ಅನ್ಯಾಯವೆಸಗಿದೆ ಎಂದು ಆರೋಪಿಸಿದರು.

ಮೇಕೆದಾಟು ಯೋಜನೆ ಕಾಂಗ್ರೆಸ್‍ನದ್ದೇ ಹೊರತು ಬಿಜೆಪಿಯದ್ದಲ್ಲ ಎಂದ ಅವರು, 2013ರ ಫೆಬ್ರವರಿಯಲ್ಲಿ ಅಂದಿನ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಈ ಯೋಜನೆಯ ಪ್ರಕ್ರಿಯೆಗಳನ್ನು ಆರಂಭಿಸಿದರು. ಕಾವೇರಿ ಜಲ ವಿವಾದದಲ್ಲಿ ರಾಜ್ಯದ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ನಾರಿಮನ್ ಅವರ ಸಲಹೆಯನ್ನು ಪಡೆದು ಯೋಜನೆಯ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ. 2017ರಲ್ಲಿ ಡಿಪಿಆರ್ ಸಿದ್ಧಪಡಿಸಿಕೊಟ್ಟಿದ್ದೆವು. ಅದಕ್ಕೆ ಕೆಲವು ಆಕ್ಷೇಪಣೆಗಳು ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್, ಪರಿಷ್ಕøತ ಡಿಪಿಆರ್ ಅನ್ನು ಸಲ್ಲಿಸಿದ್ದು, ಅದು ಅನುಮೋದನೆಯೂ ಆಗಿದೆ. ಕೇಂದ್ರ ಪರಿಸರ ಇಲಾಖೆಯ ಅನುಮತಿ ಮಾತ್ರ ಬಾಕಿ ಇದೆ. ಯೋಜನೆ ಅನುಷ್ಠಾನಕ್ಕೆ ಯಾವುದೇ ರೀತಿಯ ತಡೆಯಾಜ್ಞೆಯೂ ಇಲ್ಲ. ಆದರೂ ಕೂಡ ಬಿಜೆಪಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆಪಾದಿಸಿದರು. ಕೋವಿಡ್ ನೆಪದಲ್ಲಿ ನಮ್ಮ ಪಾದಯಾತ್ರೆಯನ್ನು ತಡೆಯಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ನಮಗೆ ಕಾನೂನಿನ ಬಗ್ಗೆ ಗೌರವವಿದೆ. ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ ಪಾದಯಾತ್ರೆ ನಡೆಸುತ್ತೇವೆ ಎಂದ ಸಿದ್ದರಾಮಯ್ಯ, ನಿಯಮಗಳನ್ನು ಪಾಲಿಸದೇ ಇರುವವರ ವಿರುದ್ಧ ಪೊಲೀಸರು ಕೇಸ್ ಹಾಕಬಹುದು. ನಿಯಮ ಪಾಲಿಸಿದರೆ ಅವರು ಏನೂ ಮಾಡಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Translate »