ಇಂದಿನಿಂದ ಮೇಕೆದಾಟು ಪಾದಯಾತ್ರೆ
News

ಇಂದಿನಿಂದ ಮೇಕೆದಾಟು ಪಾದಯಾತ್ರೆ

January 9, 2022

ಕನಕಪುರ, ಜ. 8- ವಾರಾಂತ್ಯ ಕಫ್ರ್ಯೂ ನಡುವೆಯೇ ಕಾಂಗ್ರೆಸ್‍ನ ಮಹತ್ವದ ಮೇಕೆದಾಟು ಪಾದಯಾತ್ರೆ ಭಾನುವಾರ ಬೆಳಗ್ಗೆ 8.30ಕ್ಕೆ ಮೇಕೆದಾಟು ಸಮೀಪದ ಸಂಗಮದಲ್ಲಿ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಲ ಮಠಾಧೀಶರು, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಚಾಲನೆ ನೀಡಲಿದ್ದಾರೆ.
ನೇತ್ರಾವತಿ ಮತ್ತು ಅರ್ಕಾವತಿ ನದಿಗಳು ಕಾವೇರಿಯೊಂದಿಗೆ ಸಂಗಮವಾಗುವ ಸ್ಥಳದಿಂದ ಪಾದಯಾತ್ರೆ ಆರಂಭವಾಗಲಿದ್ದು, ಈ ಕಾರ್ಯಕ್ರಮಕ್ಕಾಗಿ 66×33 ವಿಸ್ತೀರ್ಣದ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಪಾದಯಾತ್ರೆ ರಸ್ತೆಯುದ್ದಕ್ಕೂ ನಾಡು, ನೆಲ, ಜಲ ಬಿಂಬಿಸುವ ಧ್ವಜಗಳನ್ನು ನೆಡಲಾಗಿದೆ. ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಗಮಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಈ ವೇಳೆ ಅಲ್ಲಿಗೆ ಆಗಮಿಸಿದ್ದ ರಾಮನಗರ ಜಿಲ್ಲಾ ಎಸ್ಪಿ ಗಿರೀಶ್, ಉಪವಿಭಾ ಗಾಧಿಕಾರಿಗಳು ಹಾಗೂ ತಹಸೀಲ್ದಾರರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಪಾದಯಾತ್ರೆ ನಡೆಸದಂತೆ ನೋಟಿಸ್ ಜಾರಿ ಮಾಡಿದರು. ನೋಟೀಸ್‍ಅನ್ನು ಪಡೆದ ಡಿಕೆಶಿ, ತಾವು ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ನಡೆಯುವುದಾಗಿ ಅಧಿಕಾರಿಗಳಿಗೆ ಉತ್ತರಿಸಿದರು ಎಂದು ಹೇಳಲಾಗಿದೆ. ನಂತರ ಕನಕಪುರದಲ್ಲಿರುವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ನಾಳೆ ಪಾದಯಾತ್ರೆ ವೇಳೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ನಾಳೆ ಬೆಳಗ್ಗೆ ವೇದಿಕೆ ಕಾರ್ಯಕ್ರಮದ ನಂತರ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಬೆಳಗ್ಗೆ 8.30ರ ಸುಮಾರಿಗೆ ಪಾದಯಾತ್ರೆ ಆರಂಭವಾ ಗಲಿದೆ. ಸಂಗಮದಿಂದ 6 ಕಿಲೋಮೀಟರ್ ದೂರದಲ್ಲಿರುವ ಹೆಗ್ಗನೂರು ಗ್ರಾಮದಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಒಟ್ಟು 20 ಸಾವಿರ ಮಂದಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನದ ಊಟಕ್ಕೆ ರಾಗಿ ಮುದ್ದೆ, ಅವರೇಕಾಳು ಸಾರು, ಮೆಂತ್ಯೆ ಬಾತ್, ಪಲ್ಯ ಹಾಗೂ ಸಿಹಿ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಸಂಗಮದಿಂದ 14 ಕಿಲೋಮೀಟರ್ ಅಂತರದಲ್ಲಿರುವ ಕನಕಪುರ ತಾಲೂಕು ದೊಡ್ಡ ಆಲದ ಹಳ್ಳಿ ಗ್ರಾಮದಲ್ಲಿ ಪಾದಯಾತ್ರೆ ತಂಡವು ವಾಸ್ತವ್ಯ ಹೂಡಲಿದೆ. ಈ ಗ್ರಾಮದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಮನೆಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಮರುದಿನ ಉಪಹಾರದ ನಂತರ ಅಲ್ಲಿಂದ ಪಾದಯಾತ್ರೆ ಮತ್ತೇ ಆರಂಭವಾಗಲಿದೆ. ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಲು ವಿವಿಧ ಜಿಲ್ಲೆಗಳಿಂದ ಈಗಾಗಲೇ ಆಗಮಿಸಿರುವ ಕಾಂಗ್ರೆಸ್ ಕಾರ್ಯಕರ್ತರು ರಾಮನಗರ ಮತ್ತು ಕನಕಪುರದಲ್ಲಿ ಬೀಡುಬಿಟ್ಟಿದ್ದಾರೆ. ಅವರೆಲ್ಲರೂ ನಾಳೆ ಬೆಳಗ್ಗೆ 7.30ಕ್ಕೂ ಮುನ್ನ ಪಾದಯಾತ್ರೆ ಆರಂಭವಾಗುವ ಸಂಗಮಕ್ಕೆ ತೆರಳಲು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ನೀರು, ಕಬ್ಬಿನ ಹಾಲು, ಚಾಕೊಲೇಟ್ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ ಸುಮಾರು 1200 ಕಾರ್ಯಕರ್ತರು ಸಜ್ಜಾಗಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕಾವೇರಿ ನೀರು ಹಂಚಿಕೆ ವಿಷಯದ ಬಗ್ಗೆ ರಚಿತವಾಗಿರುವ ಕಾವೇರಿ ಜಲ ವಿವಾದ ನ್ಯಾಯಾಧಿಕರಣ ನೀಡಿರುವ ಆದೇಶ ತಮಗೆ ತಿಳಿದಿರುವ ವಿಷಯವಾಗಿದೆ. ಸದರಿ ನ್ಯಾಯಾಧಿಕರಣದ ಅಂತಿಮ ಆದೇಶದಂತೆ ಕರ್ನಾಟಕ ರಾಜ್ಯವು ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮತ್ತು ಸದರಿ ನೀರನ್ನು ವಿದ್ಯುತ್ ಉತ್ಫಾದನೆಗೆ ಬಳಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇರುತ್ತದೆ. ಅದರಂತೆ ಮೇಕೆದಾಟು ಜಲವಿದ್ಯುತ್ ಯೋಜನೆಯನ್ನು ಅನುಷ್ಠಾನಕ್ಕೆ ತರಬಹುದಾಗಿದೆ. ಕರ್ನಾಟಕದಲ್ಲಿ ವಿದ್ಯುತ್ ಸಮಸ್ಯೆಯು ಗಂಭೀರವಾಗಿರುವುದರಿಂದ ಹಾಗೂ ನಾವು ಜನತೆಗೆ ನೀಡಿರುವ ಭರವಸೆಯಂತೆ ವಿದ್ಯುತ್ ಉತ್ಫಾದನೆಯನ್ನು ಹೆಚ್ಚು ಮಾಡಲೇಬೇಕಾದ ಅನಿವಾರ್ಯತೆಯ ಹಿನ್ನೆಲೆ ಯಲ್ಲಿ ಈ ಪ್ರತಿಷ್ಠಿತ ಯೋಜನೆಯನ್ನು ಕೈಗೆತ್ತಿಕೊಳ್ಳಲೇ ಬೇಕಾಗಿದೆ. ಈಗಾಗಲೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳು ವಲ್ಲಿ ಸಾಕಷ್ಟು ವಿಳಂಬವಾಗಿದೆ. ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಂಬಂಧ ಮೇಲ್ಕಂಡ ಕಂಡಿಕೆಗಳಲ್ಲಿ ಅಡ್ವೊಕೇಟ್ ಜನರಲ್‍ರವರು ನೀಡಿರುವ ಸಕಾರಾತ್ಮಕ ಅಭಿಪ್ರಾಯ ಮತ್ತು ಇತರೆ ಮಾಹಿತಿಯನ್ನು ಅವಗಾಹಿಸಿ ಈ ಕೂಡಲೇ ಯೋಜನೆಯನ್ನು ಪ್ರಾರಂಭಿಸಲು ಸಂಬಂಧ ಪಟ್ಟವರಿಗೆ ಸೂಕ್ತ ಆದೇಶ ನೀಡಬೇಕಾಗಿ ಕೋರಿದೆ.

Translate »