ಮೈಸೂರು, ಜು.19(ಪಿಎಂ)- ಅರ್ಜಿ ಸಲ್ಲಿಸಿ ಮೂರ್ನಾಲ್ಕು ತಿಂಗಳು ಕಳೆದರೂ ಬಿಪಿಎಲ್ (ಬಡತನ ರೇಖೆಗಿಂತ ಕೆಳಗೆ) ಪಡಿತರ ಚೀಟಿ ಲಭ್ಯವಾಗಿಲ್ಲದ ಬಗ್ಗೆಯೇ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಫೋನ್ ಇನ್ ಕಾರ್ಯಕ್ರಮದಲ್ಲಿ ಹೆಚ್ಚು ಕರೆಗಳು ಬಂದವು.
ಈ ಸಂಬಂಧ ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಪಡಿತರ ಚೀಟಿ ವಿತರಣಾ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತಗೊಂಡಿದೆ ಎಂಬ ಮಾಹಿತಿಯನ್ನು ಇಲಾಖೆ ಅಧಿಕಾರಿಗಳು ನೀಡಿದರು.
ಇಲಾಖೆಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯ ಸಾರ್ವಜನಿಕರ ಕುಂದು-ಕೊರತೆ ಪರಿಹಾರಕ್ಕಾಗಿ ಕಳೆದ ವಾರದಿಂದ ಪ್ರತಿ ಸೋಮವಾರ ಫೋನ್ ಇನ್ ಕಾರ್ಯ ಕ್ರಮ ನಡೆಸುತ್ತಿದ್ದು, ಅಂತೆಯೇ ಸೋಮ ವಾರ ನೂತನ ಜಿಲ್ಲಾಧಿಕಾರಿಗಳ ಕಾರ್ಯಾ ಲಯದ ಇಲಾಖೆಯ ಕಚೇರಿಯಲ್ಲಿ ಒಂದು ತಾಸು ನಡೆದ ಫೋನ್ ಇನ್ ಕಾರ್ಯ ಕ್ರಮದಲ್ಲಿ 13 ಕರೆಗಳು ಬಂದವು. ಈ ಪೈಕಿ ಬಹುತೇಕ ಕರೆಗಳು ಬಿಪಿಎಲ್ ಪಡಿತರ ಚೀಟಿ ಪಡೆಯುವ ಬಗ್ಗೆಯೇ ಸಂಬಂಧಿಸಿದ್ದವು.
ನ್ಯಾಯಬೆಲೆ ಅಂಗಡಿಯೊಂದರಲ್ಲಿ ಪಡಿತರ ಪಡೆಯುವ ವೇಳೆ ಬಯೋಮೆಟ್ರಿಕ್‍ಗಾಗಿ ಅಕ್ರಮವಾಗಿ ತಲಾ 10 ರೂ. ಹಣ ಪಡೆಯ ಲಾಗುತ್ತಿದೆ ಎಂದು ರಮಾಬಾಯಿನಗರ ರಾಜೀವ್ ದೂರು ಹೇಳಿದರು. ಈ ವೇಳೆ ಸದರಿ ನ್ಯಾಯಬೆಲೆ ಅಂಗಡಿ ವಿಳಾಸವನ್ನು ರಾಜೀವ್ ಹೇಳಲಿಲ್ಲವಾದರೂ ಕರೆ ಸ್ವೀಕರಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿ ಈ ಸಂಬಂಧ ಪರಿಶೀಲಿಸಿ ಕ್ರಮ ಕೈ ಗೊಳ್ಳುವ ಭರವಸೆ ನೀಡಿದರು.
ಇದರ ಹೊರತಾಗಿ ಉಳಿದೆಲ್ಲವೂ ಇಲಾಖೆ ಸೌಲಭ್ಯ ಸಂಬಂಧ ಮಾಹಿತಿ ಪಡೆಯುವ ಕರೆಗಳಾಗಿದ್ದವು. ಅರ್ಜಿ ಸಲ್ಲಿಸಿ ದ್ದರೂ ಈವರೆಗೆ ಬಿಪಿಎಲ್ ಪಡಿತರ ಚೀಟಿ ಲಭ್ಯವಾಗಿಲ್ಲದ ಬಗ್ಗೆ ಮಾಹಿತಿ ಕೇಳಿದ ಕರೆಗಳೇ ಈ ಪೈಕಿ ಹೆಚ್ಚು. ಕೆಸರೆಯ ಉಮಾ ಮಹೇಶ್ವರಿ, ಬೃಂದಾವನ ಬಡಾವಣೆಯ ಪುಷ್ಪ, ನಂಜನಗೂಡು ತಾಲೂಕಿನ ರತ್ನಾ ಸೇರಿದಂತೆ ಮತ್ತಿತರರು ಜಿಲ್ಲೆಯ ವಿವಿಧ ಭಾಗಗಳಿಂದ ಕರೆ ಮಾಡಿ, ತಾವು ಅರ್ಜಿ ಸಲ್ಲಿಸಿ ತುಂಬ ದಿನಗಳೇ ಕಳೆದರೂ ಬಿಪಿಎಲ್ ಚೀಟಿ ಲಭ್ಯವಾಗಿಲ್ಲ. ಇದಕ್ಕೇನು ಕಾರಣ ಎಂದು ಮಾಹಿತಿ ಕೇಳಿದರು.
ಈ ಸಂಬಂಧ ಮಾಹಿತಿ ನೀಡಿದ ಆಹಾರ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ, ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೊಂಡ ಲಾಕ್‍ಡೌನ್ ಕಾರಣ ಸರ್ಕಾರ ಹೊಸ ಪಡಿತರ ಚೀಟಿ ನೀಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸೋಂಕು ತಡೆಗಾಗಿ ಸರ್ಕಾರ ಈ ಕ್ರಮ ವಹಿಸಿದ್ದು, ಅರ್ಜಿ ಸಲ್ಲಿಸಿರುವ ಸಂಬಂಧ ದಾಖಲೆಗಳ ಪರಿಶೀಲನೆ ಪ್ರಗತಿಯಲ್ಲಿದೆ. ಸ್ಥಳ ಪರಿಶೀಲನೆ ಮತ್ತು ದಾಖಲೆಗಳ ಪುನರ್ ಪರಿಶೀಲನೆ ಪ್ರಕ್ರಿಯೆಗೆ ಸರ್ಕಾರ ಇನ್ನು ಅನುಮತಿ ನೀಡಿಲ್ಲ. ಇದೀಗ ಅನ್‍ಲಾಕ್ ಪ್ರಕ್ರಿಯೆ ಆರಂಭವಾಗಿ ರುವ ಹಿನ್ನೆಲೆಯಲ್ಲಿ ಇದಕ್ಕೂ ಶೀಘ್ರದಲ್ಲಿ ಸರ್ಕಾರ ಅನುವು ಮಾಡಿಕೊಡುವ ಸಾಧ್ಯತೆ ಹೆಚ್ಚಾಗಿದೆ ಎಂದು ವಿವರಿಸಿದರು.
ಬಿಪಿಎಲ್ ಚೀಟಿ ತಿದ್ದುಪಡಿ: ಕೆಲವು ದಿನ ಗಳಿಂದೀಚೆಗೆ ವೈದ್ಯಕೀಯ ಸೌಲಭ್ಯಕ್ಕಾಗಿ ತುರ್ತು ಅಗತ್ಯವಿದ್ದವರಿಗೆ ಬಿಪಿಎಲ್ ಚೀಟಿ ತಿದ್ದುಪಡಿ ಹಾಗೂ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಇನ್ನಿತರ ಕಾರಣಗಳಿಗೆ ಸಂಬಂಧಿಸಿದಂತೆ ಸದ್ಯ ಅವಕಾಶವಿಲ್ಲ ಎಂಬ ಮಾಹಿತಿಯನ್ನೂ ನೀಡಲಾಯಿತು. ಬಿಪಿಎಲ್ ಚೀಟಿಗೆ ಅರ್ಜಿ ಸಲ್ಲಿಸುವ ಸಂಬಂಧ ಟಿಕೆ ಬಡಾ ವಣೆಯ ಜಯರಾಂ ಹಾಗೂ ಎಪಿಎಲ್ ಪಡಿತರ ಚೀಟಿಗೆ ಅರ್ಜಿ ಸಂಬಂಧ ಲಿಂಗೇಗೌಡ ಎಂಬುವರು ಕರೆ ಮಾಡಿ ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿ ಸಿದ ಅಧಿಕಾರಿಗಳು, ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದರು.
ಜೆಪಿ ನಗರದಿಂದ ಹನುಮಂತು ಎಂಬುವರು ಕರೆ ಮಾಡಿ, ತಮ್ಮ ಎಲ್ಲಾ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಬಿಪಿಎಲ್ ಪಡಿತರ ಚೀಟಿ ಮಳವಳ್ಳಿ ತಾಲೂಕು ವಿಳಾಸದಲ್ಲಿದೆ. ಪತ್ನಿ ಮತ್ತು ತಾವು ಒಳಗೊಂಡಂತೆ ಪ್ರತ್ಯೇಕ ಚೀಟಿ ಯನ್ನು ಮೈಸೂರು ವಿಳಾಸಕ್ಕೆ ಮಾಡಿಸಿ ಕೊಳ್ಳುವುದು ಹೇಗೆಂದು ಕೇಳಿದರು. ಇದಕ್ಕೆ, ಮಳವಳ್ಳಿ ತಾಲೂಕಿನ ಚೀಟಿ ಯಲ್ಲಿ ತಮ್ಮ ದಂಪತಿ ಹೆಸರು ತೆಗೆಸಿ, ಮೈಸೂರು ವಿಳಾಸದಲ್ಲಿ ಹೊಸದಾಗಿ ಚೀಟಿ ಮಾಡಿಕೊಳ್ಳಲು ಅವಕಾಶವಿದೆ ಎಂದು ಮಾಹಿತಿ ನೀಡಲಾಯಿತು. ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಕೆ.ರಮಣಿ, ದ್ವಿತೀಯ ದರ್ಜೆ ಸಹಾಯಕ ಬಿ.ಎನ್. ಶಶಿಧರ್ ಹಾಗೂ ಸಹಾಯಕ ಕಾರ್ಯಕ್ರಮ ಅಧಿಕಾರಿ ನಾಗೇಂದ್ರ ಕಾರ್ಯಕ್ರಮದಲ್ಲಿ ಸಾರ್ವಜನಿಕ ಅಹವಾಲು ಆಲಿಸಿದರು.