ಬೆಸಸಂಖ್ಯೆ ಸೆಮಿಸ್ಟರ್ ಪರೀಕ್ಷೆ ಕೈಬಿಟ್ಟು ಯುಜಿಸಿ ಮಾರ್ಗಸೂಚಿಯಂತೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಬೆಸಸಂಖ್ಯೆ ಸೆಮಿಸ್ಟರ್ ಪರೀಕ್ಷೆ ಕೈಬಿಟ್ಟು ಯುಜಿಸಿ ಮಾರ್ಗಸೂಚಿಯಂತೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

July 20, 2021

ಮೈಸೂರು, ಜು.19(ಪಿಎಂ)- ಪದವಿ, ಇಂಜಿನಿಯರಿಂಗ್, ಡಿಪ್ಲೊಮಾ ಮತ್ತು ಸ್ನಾತಕೋತ್ತರ ಪದವಿ ಸಂಬಂಧ ಒಂದೇ ತಿಂಗಳ ಅವಧಿಯಲ್ಲಿ ಎರಡು ಸಮಿಸ್ಟರ್ ಪರೀಕ್ಷೆಗಳನ್ನು (ಬೆಸಸಂಖ್ಯೆ ಸೆಮಿಸ್ಟರ್ ಪರೀಕ್ಷೆ) ನಡೆಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈ ಸೇಷನ್ (ಎಐಡಿಎಸ್‍ಓ) ನೇತೃತ್ವದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಅಂತಿಮ ಸೆಮಿಸ್ಟರ್ ಪರೀಕ್ಷೆ ಮಾತ್ರ ಕಡ್ಡಾಯವಾಗಿ ನಡೆಸಬೇಕು. ಮಧ್ಯಂತರ ಮತ್ತು ವಾರ್ಷಿಕ ಸೆಮಿಸ್ಟರ್ ಪರೀಕ್ಷೆಗಳನ್ನು ಕೈಬಿಟ್ಟು, ಆಂತರಿಕ ಮೌಲ್ಯಮಾಪನ ಅಥವಾ ಹಿಂದಿನ ಸೆಮಿಸ್ಟರ್ ಆಧಾರದಲ್ಲಿ ಮೌಲ್ಯಮಾಪನ ಮಾಡಬೇಕು ಎಂದು ಯುಜಿಸಿ ವೈಜ್ಞಾನಿಕ ಮಾರ್ಗಸೂಚಿ ನೀಡಿದೆ. ರಾಜ್ಯ ಸರ್ಕಾರ, ವಿಶ್ವವಿದ್ಯಾಲಯಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಈ ಮಾರ್ಗಸೂಚಿಯಂತೆಯೇ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿಗಳು, ಶಿಕ್ಷಕರು, ಜನ ಸಾಮಾನ್ಯರ ಆರೋಗ್ಯ ಮತ್ತು ಹಿತಾಸಕ್ತಿಯ ಆದ್ಯತೆಯಾಗಿ ರಾಜ್ಯ ಸರ್ಕಾರ ಯುಜಿಸಿಯ ಮಾರ್ಗಸೂಚಿ ಅನುಸರಿಸಬೇಕು. ಸುಪ್ರಿಂ ಕೋರ್ಟ್ ಆದೇಶದ ಮೇರೆಗೆ ಯುಜಿಸಿಯು ಅಂತಿಮ ಸೆಮಿಸ್ಟರ್ ಪರೀಕ್ಷೆ ಮಾತ್ರ ನಡೆಸ ಬೇಕು ಎಂದು ಹೇಳಿದೆ. ಹೀಗಿರುವಾಗ ಬೇರೆ ಪರೀಕ್ಷೆಗಳನ್ನು ನಡೆಸುವುದು ಅವೈಜ್ಞಾನಿಕ ಮಾತ್ರವಲ್ಲ, ಕಾನೂನುಬಾಹಿರ ಕೂಡ ಆಗು ತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆ ಮುಖಂಡರಾದ ಸುಭಾಷ್ ಜೋಯಪ್ಪ, ಆಸಿಯಾ ಬೇಗಂ, ಸೇವಂತ್, ತೇಜಸ್, ಮನೋಜ್, ಧ್ರುವ, ಯಶವಂತ್, ವಿನಯ್ ಸೇರಿದಂತೆ ವಿದ್ಯಾವರ್ಧಕ, ವಿದ್ಯಾ ವಿಕಾಸ್ ಮತ್ತಿತರರ ಕಾಲೇಜು ವಿದ್ಯಾರ್ಥಿ ಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »