ಮೈಸೂರಲ್ಲಿ ಮುಂದುವರೆದ ಫುಟ್‍ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ
ಮೈಸೂರು

ಮೈಸೂರಲ್ಲಿ ಮುಂದುವರೆದ ಫುಟ್‍ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ

July 20, 2021

ಮೈಸೂರು, ಜು.19(ಎಸ್‍ಬಿಡಿ)- ಮೈಸೂರಿನ ಫುಟ್‍ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ಮುಂದು ವರೆದಿದ್ದು, ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಗಳೇ ರಸ್ತೆಗಿಳಿದು ವ್ಯಾಪಾರಿಗಳಿಗೆ ತಿಳಿಹೇಳಿದರು.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತಾಪ್ರಸನ್ನ, ಸಂಚಾರ ವಿಭಾಗದ ಎಸಿಪಿ ಎಸ್.ವಿ.ಗಂಗಾಧರಸ್ವಾಮಿ, ಹಲವು ಠಾಣೆಯ ಇನ್‍ಸ್ಪೆಕ್ಟರ್, ಸಬ್‍ಇನ್‍ಸ್ಪೆಕ್ಟರ್ ಗಳು ಹಾಗೂ ಸಿಬ್ಬಂದಿಯೊಂದಿಗೆ ಸೋಮವಾರ ಸಂಜೆ ಮಂಡಿಮೊಹಲ್ಲಾದ ಸಾಡೇ ರಸ್ತೆ, ಕಬೀರ್ ರಸ್ತೆ ಹಾಗೂ ಕೆ.ಟಿ.ಸ್ಟ್ರೀಟ್ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಿದರು. ಮಾರಾಟದ ವಸ್ತುಗಳನ್ನು ಫುಟ್‍ಪಾತ್‍ನಲ್ಲಿ ಇಟ್ಟಿದ್ದ ಮಳಿಗೆದಾರರಿಗೆ ಎಚ್ಚರಿಕೆ ನೀಡಿ, ಆ ಕ್ಷಣದಲ್ಲೇ ತೆರವು ಮಾಡಿಸಿದರು. ಹಲವು ಕಡೆ ಫುಟ್‍ಪಾತ್ ನಲ್ಲೇ ಅಳವಡಿಸಿದ್ದು ಅಂಗಡಿ ನಾಮಫಲಕ ಹಾಗೂ ಜಾಜೀರಾತು ಫಲಕಗಳನ್ನು ತೆಗೆಸಿದರು. ಮಂಡಿಮೊಹಲ್ಲಾದ ಈ ಮೂರು ರಸ್ತೆಗಳ ಫುಟ್‍ಪಾತ್ ಅತಿ ಕ್ರಮಣವನ್ನು ತೆರವುಗೊಳಿಸಿ, ಪಾದಚಾರಿ ಗಳಿಗೆ ಮುಕ್ತಗೊಳಿಸಲಾಗಿದೆ. ಇನ್ನು ಮುಂದೆ ಪಾದಚಾರಿಗಳಿಗೆ ಅಡ್ಡಿಪಡಿಸಿದರೆ ಕಟ್ಟುನಿಟ್ಟಿನ ಕ್ರಮ ವಹಿಸುವ ಎಚ್ಚರಿಕೆ ನೀಡಲಾಗಿದೆ. ಕೆಲವರು ಫುಟ್‍ಪಾತ್ ಒಳಗೊಂಡಂತೆ ಗೋಡೆ, ಶೆಡ್ ನಿರ್ಮಿಸಿ ಕೊಂಡಿದ್ದಾರೆ. ಅಂತಹವರಿಗೆ ನೋಟೀಸ್ ನೀಡಿ, ತೆರವುಗೊಳಿಸಲು ಇನ್ನೊಂದು ದಿನ ಕಾಲಾವಕಾಶ ನೀಡಲಾಗಿದೆ. ತಾವಾಗಿಯೇ ತೆಗೆಯದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಗೀತಾಪ್ರಸನ್ನ ತಿಳಿಸಿದ್ದಾರೆ.

ಹಲವೆಡೆ ಕಾರ್ಯಾಚರಣೆ: ದೇವರಾಜ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರವೇ ಬೀದಿ ಮತ್ತು ಗಾಂಧಿ ವೃತ್ತ, ಕೃಷ್ಣ ರಾಜ ಸಂಚಾರ ಠಾಣೆ ವ್ಯಾಪ್ತಿಯ ಚಾಮ ರಾಜ ಜೋಡಿ ರಸ್ತೆ, ನರಸಿಂಹರಾಜ ಸಂಚಾರ ಠಾಣೆ ವ್ಯಾಪ್ತಿಯ ಅಕ್ಬರ್ ರಸ್ತೆ, ಅಶೋಕ ರಸ್ತೆ ಮತ್ತು ನ್ಯೂ ಸಯ್ಯಾಜಿ ರಾವ್ ರಸ್ತೆ, ಸಿದ್ದಾರ್ಥನಗರ ಸಂಚಾರ ಠಾಣೆ ವ್ಯಾಪ್ತಿಯ ಮಲೆ ಮಹದೇಶ್ವರ ರಸ್ತೆ, ವಿ.ವಿ.ಪುರಂ ಸಂಚಾರ ಠಾಣೆ ವ್ಯಾಪ್ತಿಯ ಹೆಬ್ಬಾಳ್ ಮುಖ್ಯ ರಸ್ತೆ ಮತ್ತು ವಾಲ್ಮೀಕಿ ರಸ್ತೆ ಫುಟ್‍ಪಾತ್ ಅತಿಕ್ರಮಣವನ್ನು ಆಯಾಯ ಠಾಣಾ ವ್ಯಾಪ್ತಿಯ ಪೊಲೀಸರು ತೆರವುಗೊಳಿಸಿದ್ದಾರೆ. ಫುಟ್‍ಪಾತ್ ಅತಿಕ್ರಮಿಸಿಕೊಂಡಿದ್ದ ಆರೋಪದಡಿ 15 ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಅಲ್ಲದೆ ಫುಟ್ ಪಾತ್‍ಗಳಲ್ಲಿ ವಾಹನ ನಿಲ್ಲಿಸಿ, ಪಾದಚಾರಿ ಗಳಿಗೆ ಅಡ್ಡಿಯುಂಟು ಮಾಡಿದ್ದ 15 ಮಂದಿ ವಿರುದ್ಧ ಮೋಟಾರು ವಾಹನ ಕಾಯ್ದೆ ಯಡಿ ಪ್ರಕರಣ ದಾಖಲಿಸಿ, ಸ್ಥಳದಲ್ಲೇ 5,100 ರೂ. ದಂಡ ಸಂಗ್ರಹಿಸಿದ್ದಲ್ಲದೆ, 58 ಜನರಿಗೆ ನೋಟಿಸ್ ನೀಡಲಾಗಿದೆ.

Translate »