ದೀಪಾವಳಿ ಅಂಗವಾಗಿ ಫೋಟೊ ಸ್ಟುಡಿಯೋ ಬೋರ್ಡ್ ಸ್ವಚ್ಛಗೊಳಿಸುವ ವೇಳೆ ದುರಂತ ವಿದ್ಯುತ್ ತಂತಿ ತಗುಲಿ ಫೋಟೋಗ್ರಾಫರ್ಸ್ ಸಾವು
ಮಂಡ್ಯ

ದೀಪಾವಳಿ ಅಂಗವಾಗಿ ಫೋಟೊ ಸ್ಟುಡಿಯೋ ಬೋರ್ಡ್ ಸ್ವಚ್ಛಗೊಳಿಸುವ ವೇಳೆ ದುರಂತ ವಿದ್ಯುತ್ ತಂತಿ ತಗುಲಿ ಫೋಟೋಗ್ರಾಫರ್ಸ್ ಸಾವು

October 23, 2022

ಮದ್ದೂರು, ಅ.22- ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಮರಳಿಗ ಗ್ರಾಮದ ರಾಮೇಗೌಡ-ಜಯಲಕ್ಷ್ಮಮ್ಮ ಅವರ ಪುತ್ರ ಎಂ.ಆರ್. ವಿವೇಕ(42) ಹಾಗೂ ತಾಲೂಕಿನ ಗೆಜ್ಜಲಗೆರೆ ಗ್ರಾಮದ ಜಿ.ಕೆ.ಶಿವಣ್ಣ-ಅನ್ನಪೂರ್ಣ ದಂಪತಿ ಪುತ್ರ ಜಿ.ಎಸ್. ಮಧುಕುಮಾರ್ (27) ದುರಂತ ಸಾವಿಗೀಡಾದವರು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಸಗರಹಳ್ಳಿ ಗ್ರಾಮದಲ್ಲಿರುವ ಲಕ್ಷ್ಮಿ ಫೋಟೋ ಸ್ಟುಡಿಯೋ ಸ್ವಚ್ಛಗೊಳಿಸಿದ ನಂತರ ನಾಮಫಲಕವನ್ನು ಶುದ್ಧಿಗೊಳಿಸಿ, ಅದನ್ನು ಅಂಗಡಿಯ ಮೇಲೆ ಅಳ ವಡಿಸಲು ಹೋದ ಸಂದರ್ಭದಲ್ಲಿ ಪಕ್ಕದಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಎಂ.ಆರ್.ವಿವೇಕ್ 15 ವರ್ಷಗಳಿಂದ ಬೆಸಗರಹಳ್ಳಿ ಗ್ರಾಮದಲ್ಲಿ ಸ್ಟುಡಿಯೋ ನಡೆಸುತ್ತಿದ್ದರು. ಇವರು ಪತ್ನಿ, ಪುತ್ರ, ಪುತ್ರಿ ಅಗಲಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದ ಇವರ ನಿಧನದಿಂದ ಕುಟುಂಬ ಸಂಕಷ್ಟಕ್ಕೀಡಾಗಿದೆ. ಗೆಜ್ಜಲಗೆರೆ ಗ್ರಾಮದ ಯುವಕ ಜಿ.ಎಸ್.ಮಧುಕುಮಾರ್, ಕಳೆದ ಆರೇಳು ವರ್ಷಗಳಿಂದ ಎಂ.ಆರ್.ವಿವೇಕ್ ಅವರ ಲಕ್ಷ್ಮಿ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದರು. ಇವರ ಸಾವಿನಿಂದ ಬೆಸಗರಹಳ್ಳಿ ಗ್ರಾಮದಲ್ಲಿ ಶೋಕದ ವಾತಾ ವರಣ ನೆಲೆಸಿದೆ. ಘಟನೆಯ ಬಳಿಕ ಇಬ್ಬರ ದೇಹವನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸ ಲಾಯಿತು. ಅಲ್ಲಿ ಪಂಚನಾಮೆ ನಡೆಸಿ ವಾರಸುದಾರಿಗೆ ಶವಗಳ ಒಪ್ಪಿಸಲಾಯಿತು.

ಬೆಸಗರಹಳ್ಳಿ ಠಾಣೆ ಸೌತ್ ಇನ್ಸ್‍ಪೆಕ್ಟರ್ ಮಹೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪರಿಹಾರಕ್ಕೆ ಒತ್ತಾಯ: ಅಂಗಡಿ ಮುಂಗಟ್ಟು ಮತ್ತು ಮನೆಗಳ ಮೇಲೆ, ಮುಂದೆ ಹಾದು ಹೋಗಿರುವ ವಿದ್ಯುತ್ ವೈರ್‍ಗಳಿಂದ ಅವಘಡ ಸಂಭವಿಸದಂತೆ ಪೈಪ್‍ಗಳನ್ನು ಹಾಕಲು ಇಲಾಖೆಯ ಮಾರ್ಗಸೂಚಿ ಇದೆ. ಆದರೂ, ಇದನ್ನು ವಿದ್ಯುತ್ ಇಲಾಖೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಆದ್ದರಿಂದ, ಎರಡೂ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ, ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಿ ಕುಟುಂಬಗಳನ್ನು ರಕ್ಷಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Translate »