ಕೆಆರ್‍ಎಸ್ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ
ಮಂಡ್ಯ

ಕೆಆರ್‍ಎಸ್ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ

October 23, 2022

ಶ್ರೀರಂಗಪಟ್ಟಣ, ಅ.22-ತಾಲೂಕಿನ ಕೆಆರ್‍ಎಸ್ ಅಣೆಕಟ್ಟೆ ಹಾಗೂ ಬೃಂದಾವನ ಉದ್ಯಾನವನ ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಬೃಂದಾವನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಶನಿವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ನಿಗಮದ ಕೆಲಸಗಾರರು ಅಣೆಕಟ್ಟೆ ಬಳಿ ಗಿಡ-ಗಂಟಿ ತೆರವು ಮಾಡುತ್ತಿದ್ದ ವೇಳೆ ಅಣೆಕಟ್ಟೆಯ ದಕ್ಷಿಣ ದ್ವಾರದ ಬಳಿಯ ನಗುವನ ತೋಟದಿಂದ ಅಣೆಕಟ್ಟೆ ಮೇಲ್ಭಾಗದ ಸೌತ್ ಗೇಟ್ ಮೂಲಕ ಚಿರತೆ ಬರುತ್ತಿರುವುದನ್ನು ಗಮನಿಸಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಉಸ್ತುವಾರಿ ಅಧಿಕಾರಿ ಸಂತೋಷ್ ಆಗಮಿಸಿ, ಪರಿಶೀಲನೆ ನಡೆಸಿದಾಗ ಚಿರತೆಯ ಹೆಜ್ಜೆ ಗುರುತು ಕಂಡು ಬಂದಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿ ಯಿಂದ ತಕ್ಷಣ ಬೃಂದಾವನ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದಾಗಿ ನಿಗಮದ ಸಹಾಯಕ ಕಾರ್ಯ ಪಾಲಕ ಅಭಿಯಂತರ ಘಾರೂಕ್ ಅಬು ತಿಳಿಸಿದ್ದಾರೆ.

ಅಣೆಕಟ್ಟೆಯ ಎರಡು ಕಡೆಯ ಮೇಲ್ಭಾಗದಲ್ಲಿ ಪ್ರವಾಸಿಗರು ಒಳಗೆ ಬಾರದಂತೆ ಸಿಬ್ಬಂದಿ ವಾಪಸ್ ಕಳುಹಿಸುತ್ತಿದ್ದ ದೃಶ್ಯ ಕಂಡು ಬಂದಿತು. ಪ್ರವಾಸಿ ಗರು ಒಂದೇ ಬಾರಿಗೆ ಹಿಂದಿರುಗಿದ್ದರಿಂದ ನೂಕು-ನುಗ್ಗಲು ಉಂಟಾಗಿ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ಸವಾರರು ಪರದಾಡುವ ಸ್ಥಿತಿ ನಿರ್ಮಾಣ ವಾಗಿತ್ತು. ಚಿರತೆ ಬಗ್ಗೆ ಶ್ರೀರಂಗಪಟ್ಟಣ ವಲಯ ಅರಣ್ಯ ಅಧಿಕಾರಿಗೆ, ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಚಿರತೆ ಸೆರೆ ಹಿಡಿ ಯಲು ರಾಯಲ್ ಆರ್ಕಿಡ್ ಬಳಿ ಬೋನ್ ಇರಿಸಿದ್ದಾರೆ.

ಆದಾಯಕ್ಕೆ ಕುತ್ತು: ಸಾಲು ಸಾಲು ರಜೆಗಳಿಂದ ನಿತ್ಯ ಸಾವಿರಾರು ಜನ ಕೆಆರ್‍ಎಸ್‍ಗೆ ಭೇಟಿ ನೀಡುತ್ತಿದ್ದರು. ಇದರಿಂದ ನಿಗಮಕ್ಕೆ ಲಕ್ಷಾಂತರ ರೂ. ಆದಾಯ ಬರುತ್ತಿತ್ತು. ಆದರೆ ಚಿರತೆ ಪ್ರತ್ಯಕ್ಷವಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದು, ನಿಗಮದ ಆದಾಯಕ್ಕೆ ಕಲ್ಲು ಬಿದ್ದಿದೆ. ಬೃಂದಾವನ ಆವರಣ ಚಿರತೆಗೆ ಉತ್ತಮ ತಂಗುದಾಣ: ಬೃಂದಾವನದಲ್ಲಿ ಚಿರತೆ ಕಾಣಿಸಿಕೊಳ್ಳುವುದು ಇದೇ ಮೊದಲಲ್ಲ. ಕೆಲವು ತಿಂಗಳ ಹಿಂದೆ ಅಣೆಕಟ್ಟೆಯ ನಾರ್ತ್ ಗೇಟ್ ಬಳಿ ಚಿರತೆ ಕಾಣಿಸಿಕೊಂಡು ಅರಣ್ಯ ಸಿಬ್ಬಂದಿ ಇರಿಸಿದ್ದ ಬೋನ್‍ಗೆ ಬಿದ್ದಿತ್ತು. ಹೀಗೆ ಪದೇ ಪದೆ ಈ ಸ್ಥಳಕ್ಕೆ ಚಿರತೆ ಬರುತ್ತಿರುವುದಕ್ಕೆ ಬೃಂದಾವನದ ಅನೇಕ ಕಡೆ ಆಳೆತ್ತರ ಬೆಳೆದು ನಿಂತಿರುವ ಗಿಡ-ಗಂಟೆಗಳೇ ಮುಖ್ಯ ಕಾರಣವಾಗಿದೆ. ಇದನ್ನು ತೆರವುಗೊಳಿಸಬೇಕಿದೆ. ಈ ಭಾಗ ದಟ್ಟಕಾಡಿನ ರೀತಿ ಗೋಚರಿಸುತ್ತಿರುವುದರಿಂದ ಈ ಸ್ಥಳದಲ್ಲಿ ಚಿರತೆ ಆಗಾಗ ಬಂದು ಅಡಗಿಕೊಳ್ಳುತ್ತಿವೆ. ಆದ್ದರಿಂದ ತಕ್ಷಣ ಬೃಂದಾವನ ಸುತ್ತ-ಮುತ್ತ ಅನಗತ್ಯ ಗಿಡ-ಗಂಟೆಗಳನ್ನು ಶುಚಿಗೊಳಿಸಬೇಕಿದೆ. ನಾವು ನಿತ್ಯ ಭಯದಲ್ಲೇ ಕೆಲಸ ಮಾಡಬೇಕಿದೆ ಎಂದು ಹಲವು ಸಿಬ್ಬಂದಿ ‘ಮೈಸೂರು ಮಿತ್ರ’ನಿಗೆ ತಮ್ನ ಅಳಲನ್ನು ತೋಡಿಕೊಂಡರು.

ಕೆಲಸ ಮಾಡದ ಸಿಸಿ ಕ್ಯಾಮರಾಗಳು: ಕಳೆದ ಕೆಲ ದಿನಗಳ ಹಿಂದೆ ‘ಮೈಸೂರು ಮಿತ್ರ’ನಲ್ಲಿ ವಿಶ್ವವಿಖ್ಯಾತ ಪ್ರಸಿದ್ದ ಕೆಆರ್‍ಎಸ್ ಅಣೆಕಟ್ಟೆಯ ಭದ್ರತೆ, ನಿಷ್ಕ್ರೀಯ ಸಿಸಿ ಕ್ಯಾಮರಾ ಬಗ್ಗೆ ವಿಶೇಷ ವರದಿ ಪ್ರಕಟವಾಗಿತ್ತು. ಇಷ್ಟಾದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಇನ್ನೂ ಕೂಡ ಸುಮಾರು 45 ಸಿಸಿ ಕ್ಯಾಮರಾಗಳನ್ನು ರಿಪೇರಿ ಮಾಡಿ ಸುವ ಗೋಜಿಗೆ ಹೋಗಿಲ್ಲ. ಇದರ ಪರಿಣಾಮ ಅಣೆಕಟ್ಟೆಯಲ್ಲಿ ಚಿರತೆ ಚಲನ-ವಲನದ ಬಗ್ಗೆ ದಾಖಲೆ ಇಲ್ಲ. ಒಂದು ವೇಳೆ ಸಿಸಿ ಕ್ಯಾಮರಾಗಳು ಕೆಲಸ ಮಾಡಿದ್ದರೆ ಚಿರತೆ ಯಾವ ಕಡೆಗೆ ಹೋಗಿದೆ ಎಂಬುದರ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಬಹುದಿತ್ತು. ಆದರೆ ಈಗ ಅದು ಸಾಧ್ಯವಿಲ್ಲ. ಇದರಿಂದ ಚಿರತೆ ಸೆರೆ ಕಾರ್ಯಾಚರಣೆ ಹಲವು ದಿನಗಳೇ ತೆಗೆದುಕೊಳ್ಳಬಹುದು ಎಂದು ಸಾರ್ವಜನಿಕರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Translate »