ಮೈಸೂರು, ಡಿ.2(ಪಿಎಂ)- `ಸೈನಿಕ’ನ ಮಂತ್ರಿ ಮಾಡಲು ಅವಸರವೇಕೇ? ಎಂದು ಕೇಳುವ ಮೂಲಕ ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಂತ್ರಿ ಆಗು ವುದು ಖಚಿತ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ದವರಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಎ.ಹೆಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್‍ಗೆ ಸಚಿವ ಸ್ಥಾನ ನೀಡಲು ಅವಸರ ಬೇಕಿಲ್ಲ. ಏಕೆಂದರೆ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ನೀಡಿಲ್ಲ. ಆದರೂ ಮುಖ್ಯಮಂತ್ರಿಗಳು ಏಕೆ ಅವಸರ ಮಾಡುತ್ತಿದ್ದಾ ರೆಂದು ಗೊತ್ತಾಗುತ್ತಿಲ್ಲ. ವಿಶ್ವನಾಥ್‍ಗೆ (ನನಗೆ) ಎದುರಾಗಿರುವ ಎಲ್ಲಾ ಅಡೆತಡೆ ನಿವಾರಿಸಿ ಅವಕಾಶ ಕಲ್ಪಿಸಿದ್ದರೆ ಸಂತಸ ವಾಗುತ್ತಿತ್ತು. ಆದರೆ ಸರ್ಕಾರ ರಚಿಸುವ ವೇಳೆ ಸಿಎಂ ನನ್ನ ಮುಂದೇ ನಿಂತಿದ್ದ ರೀತಿಯೇ ಬೇರೆ. ಆದರೆ ಈಗಿನ ಅವರ ವರ್ತನೆಯೇ ಬೇರೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ರಚನೆಯಾಗಲು ಯೋಗೇಶ್ವರ್ ಪಾತ್ರ ಏನಿಲ್ಲ. ಬಾಂಬೆ ಹಾಗೂ ಪುಣೆಯಲ್ಲಿ ಸೂಟ್‍ಕೇಸ್ ಹಿಡಿದು ಕೊಂಡು ತಿರುಗುತ್ತಿದ್ದ. ಯತ್ನಾಳ್, ಕತ್ತಿಯಂತಹ ನಾಯಕರು ಸರತಿಯಲ್ಲಿದ್ದಾರೆ. ಅವರಿಗೆ ಮಂತ್ರಿ ಮಾಡಿ. ಇಂತಹ ಆತುರದ ನಿರ್ಧಾರ ತೆಗೆದುಕೊಂಡರೆ ನಿಮ್ಮ ನಾಯಕತ್ವದ ಬಗ್ಗೆ ಅಪನಂಬಿಕೆ ಬರಲಿದೆ ಎಂದು ಸಿಎಂಗೆ ಸಲಹೆ ನೀಡಿದರು.
ಯಡಿಯೂರಪ್ಪ ಅವರ ಹಿರಿತನ, ಅನುಭವದ ಬಗ್ಗೆ ಎಲ್ಲರಿಗೂ ಅಭಿಮಾನ ಇದೆ. ಆದರೆ ಏಕೋ ಒಮ್ಮೊಮ್ಮೆ ತೀರ್ಮಾನ ಹೇಗೇಗೋ ತೆಗೆದುಕೊಳ್ಳುತ್ತಿದ್ದಾರೆ. ಇದು ಅವರ ವಯಸ್ಸಿನ ಪರಿಣಾಮವೋ ಅಥವಾ ಒತ್ತಡಗಳ
ಪರಿಣಾಮವೋ ಗೊತ್ತಾಗುತ್ತಿಲ್ಲ ಎಂದರು. ಜನತಂತ್ರ ವ್ಯವಸ್ಥೆಯಲ್ಲಿ ರಾಜಕಾರಣ ಸಕಾರಾತ್ಮಕ ಧೋರಣೆಯಿಂದ ಹೋಗಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕಾರಣವೇ ಉಸಿರು. ಅದು ಮಾಲಿನ್ಯಗೊಳ್ಳಬಾರದು. ಆದರೆ ಈಗ ಹೆಚ್ಚು ಮಾಲಿನ್ಯವೇ ಆಗುತ್ತಿದೆ. ಇದರಿಂದ ಜನ ಬಹಳ ಕೆಟ್ಟದಾಗಿ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ ಎಂದು ತಿಳಿಸಿದರು.
ತಮಗೆ ಸಚಿವ ಸ್ಥಾನ ನೀಡಬಾರದೆಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಂಬಂಧ ಹೈಕೋರ್ಟ್ ನೀಡಿರುವ ಮಧ್ಯಂತರ ತೀರ್ಪು ಕುರಿತು ಪ್ರತಿಕ್ರಿಯಿಸಿದ ವಿಶ್ವನಾಥ್, ಪೂರ್ಣ ಪ್ರಮಾಣದ ಆದೇಶ ಪ್ರತಿಬಂದಿಲ್ಲ. ಈ ಸಂಬಂಧ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು. ಪರಿಷತ್ ಸ್ಥಾನಕ್ಕೆ ಈ ತೀರ್ಪಿನಿಂದ ಯಾವುದೇ ತೊಂದರೆ ಇಲ್ಲ ಎಂದರಲ್ಲದೆ, ಹಾಗೆಯೇ ಬಾಂಬೆ ಟೀಂನಲ್ಲಿ ನಾನು ಒಂಟಿಯಾಗಿಲ್ಲ. ಎಲ್ಲರು ಜೊತೆಯಾಗಿದ್ದಾರೆ. ಬಿಜೆಪಿಯ ಹಿರಿಯ ನಾಯಕರ ಅಭಯವೂ ನಮಗಿದೆ ಎಂದರು.
ಸಿದ್ದರಾಮಯ್ಯಗೆ ಕುಟುಕಿದರು: ಲವ್ ಜಿಹಾದ್ ನಿಷೇಧ ಕಾಯ್ದೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ವಿಶ್ವನಾಥ್, ಮಾಜಿ ಮುಖ್ಯಮಂತ್ರಿ ಆದವರೊಬ್ಬರು ಆ ರೀತಿಯ ಪದ ಬಳಕೆ ಮಾಡಬಾರದು. ಬೆರಕೆ ಅನ್ನೋ ಪದ ಸರಿಯಲ್ಲ. ಹಾಗೇ ನೋಡಿದರೆ ಪಕ್ಷದಿಂದ ಪಕ್ಷಕ್ಕೆ ಬಂದಿರುವ ಹಿನ್ನೆಲೆಯಲ್ಲಿ ನಾವಿಬ್ಬರೂ ಬೇರೆಕೆಯೇ. ಭಾರತೀಯ ಸಂಸ್ಕøತಿ ಮನದಲ್ಲಿಟ್ಟುಕೊಂಡು ಮಾತನಾಡಬೇಕು ಎಂದು ಕುಟುಕಿದರು.
ಸಾ.ರಾ.ಮಹೇಶ್ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೈಮುಗಿದು ಉತ್ತರಿಸಿದ ವಿಶ್ವನಾಥ್, ಸಾ.ರಾ.ಮಹೇಶ್ ಬಗ್ಗೆ ನನಗೆ ಪ್ರಶ್ನೆಯನ್ನೇ ಕೇಳಬೇಡಿ. ಸಾ.ರಾ.ಮಹೇಶ್ ನನ್ನ ಅನುಭವದ ಮುಂದೆ ನನಗೆ ಸಮನಲ್ಲ. ಅಂತವರ ಬಗ್ಗೆ ನಾನು ಪ್ರತಿಕ್ರಿಯೆಯನ್ನೇ ನೀಡುವುದಿಲ್ಲ ಎಂದರು.