ಮೈಸೂರು, ಡಿ.2(ಎಂಟಿವೈ)- ರಾಜ್ಯ ಸರ್ಕಾರ ಘೋಷಿಸಿರುವ ಮರಾಠಿ ಅಭಿವೃದ್ಧಿ ನಿಗಮ ರದ್ದು ಮಾಡುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆ ಗಳು ಕರೆ ನೀಡಿರುವ ಡಿ.5ರ ಕರ್ನಾಟಕ ಬಂದ್‍ಗೆ ಬೆಂಬಲ ನೀಡದಿರಲು ಮೈಸೂರು ಉದ್ಯಮ ಒಕ್ಕೂಟ ನಿರ್ಧರಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಉದ್ಯಮ ಒಕ್ಕೂಟದ ವತಿಯಿಂದ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ವಿವಿಧ ಉದ್ಯಮ ಗಳ ಪ್ರತಿನಿಧಿಗಳು ಮಾತನಾಡಿ, ಕನ್ನಡಪರ ಸಂಘ ಟನೆಗಳು ಕರೆ ನೀಡಿರುವ ಡಿ.5ರ ಕರ್ನಾಟಕ ಬಂದ್‍ಗೆ ಕೇವಲ ನೈತಿಕ ಬೆಂಬಲ ನೀಡುತ್ತೇವೆ. ಆದರೆ ಉದ್ಯಮ ಬಂದ್ ಮಾಡುವುದಿಲ್ಲ. ಈಗಾಗಲೇ ಕೊರೊನಾ ಸೋಂಕಿನಿಂದಾಗಿ ಸರ್ಕಾರ ಲಾಕ್‍ಡೌನ್ ಮಾಡಿದ್ದ ರಿಂದ ಬಹುತೇಕ ಎಲ್ಲಾ ಉದ್ಯಮಗಳು ಸಂಕಷ್ಟಕ್ಕೀ ಡಾಗಿ ಇಂದಿಗೂ ಚೇತರಿಸಿಕೊಂಡಿಲ್ಲ. ನಷ್ಟದಲ್ಲಿಯೇ ಉದ್ಯಮಗಳು ನಡೆಯುತ್ತಿರುವುದರಿಂದ ಪದೇ ಪದೆ ಬಂದ್ ಮಾಡಿದರೆ ಮತ್ತಷ್ಟು ಹೊರೆಯಾ ಗುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್‍ಗೆ ಬೆಂಬಲ ನೀಡದಿರಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಹೋರಾಟಕ್ಕೆ ಬೆಂಬಲ ನೀಡುತ್ತೇವೆ. ಆದರೆ ನಮ್ಮೊಡನೆ ಚರ್ಚಿ ಸದೆ, ನಮ್ಮ ಅಭಿಪ್ರಾಯ ಪಡೆಯದೇ ಏಕಾಏಕಿ ಬಂದ್ ಘೋಷಿಸಿರುವುದು ಸರಿಯಲ್ಲ. ಈಗಾಗಲೇ ಕೊರೊನಾ ಹೊಡೆತದಿಂದ ಪ್ರವಾಸೋದ್ಯಮ ನೆಲ ಕಚ್ಚಿದೆ. ಅನ್‍ಲಾಕ್ ಆದ ಬಳಿಕವೂ ಉದ್ಯಮಗಳು ಚೇತರಿಕೆ ಕಂಡಿಲ್ಲ. ಪರಿಸ್ಥಿತಿ ಹೀಗಿರುವಾಗ ಬಂದ್‍ಗೆ ಕರೆ ನೀಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಕರ್ನಾಟಕ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆ ಯಲ್ಲಿ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್, ಮೈಸೂರು ಹೋಟೆಲ್ ಮಾಲೀಕರ ಸಂಘ, ಜಿಲ್ಲಾ ಪ್ರವಾಸಿ ವಾಹನ ಚಾಲಕ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಅನುಮೋದಿತ ಪ್ರವಾಸಿ ಮಾರ್ಗದರ್ಶಿಗಳ ಸಂಘ, ಜಿಲ್ಲಾ ಮತ್ತು ನಗರ ಮ್ಯಾಕ್ಸಿಕ್ಯಾಬ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಮೈಸೂರು ರೀಜನ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್, ದೇವರಾಜ್ ಅರಸ್ ರಸ್ತೆ ಟ್ರೇಡರ್ಸ್ ಅಸೋಸಿಯೇಷನ್, ವರ್ತಕರ ಸಂಘ, ಮೈಸೂರು ಟೈಕ್ಸ್‍ಟೈಲ್ ಮತ್ತು ಗಾರ್ಮೆಂಟ್ ಮರ್ಚೆಂಟ್ ಅಸೋಸಿಯೇಷನ್, ಜಿಲ್ಲಾ ಡಿಸ್ಟ್ರಿಬ್ಯೂಟರ್ ಅಸೋಸಿ ಯೇಷನ್, ಕಲ್ಯಾಣ ಮಂಟಪ ಮಾಲೀಕರ ಸಂಘ ಮತ್ತು ಮೈಸೂರು ಮಹಾನಗರ ಪಾಲಿಕೆ ಮಂಡಿ ಮಾರುಕಟ್ಟೆ ಬಾಡಿಗೆದಾರರ ಸಂಘದ ಪ್ರತಿನಿಧಿಗಳು ಇರುವ `ಮೈಸೂರು ಉದ್ಯಮ ಸಂಘಗಳ ಒಕ್ಕೂಟ’ದ ಸಭೆಯಲ್ಲಿ ಕರ್ನಾಟಕ ಬಂದ್‍ಗೆ ನೈತಿಕ ಬೆಂಬಲ ವಷ್ಟೇ ನೀಡಲು ತೀರ್ಮಾನಿಸಲಾಗಿದೆ ಎಂದು ನಾರಾಯಣಗೌಡ ವಿವರಿಸಿದರು.
ಮೈಸೂರ್ ಟ್ರಾವೆಲ್ಸ್ ಅಸೋಸಿಯೇಷನ್ ಗೌರವಾ ಧ್ಯಕ್ಷ ಬಿ.ಎಸ್.ಪ್ರಶಾಂತ್ ಮಾತನಾಡಿ, ಕೊರೊನಾ ಹಾವಳಿಯಿಂದ ತತ್ತರಿಸಿರುವ ಟ್ರಾವೆಲ್ಸ್ ಉದ್ಯಮ ಈಗತಾನೇ ಚೇತರಿಕೆ ಹಾದಿಯಲ್ಲಿ ಅಂಬೆಗಾಲಿಡುತ್ತಿವೆ. ಇಂಥ ಸಂದರ್ಭದಲ್ಲಿ ಬಂದ್‍ಗೆ ಬೆಂಬಲ ನೀಡುವುದು ಅಸಾಧ್ಯ. ಪ್ರವಾಸೋದ್ಯಮವನ್ನೇ ಸಾವಿರಾರು ಕುಟುಂಬಗಳು ಅವಲಂಬಿಸಿವೆ. ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಸಾವಿರಾರು ಮಂದಿ ಜೀವನ ಕಂಡುಕೊಳ್ಳುತ್ತಿದ್ದಾರೆ. ಕಳೆದ 8 ತಿಂಗಳಿಂದ ಜೀವನ ಸರಿದೂಗಿಸುವುದೇ ಕಷ್ಟವಾಗಿತ್ತು. ಕಳೆದ 10-15ದಿನಗಳಿಂದ ಆಶಾಭಾವ ಮೂಡಿದೆ. ಇಂತಹ ಸ್ಥಿತಿಯಲ್ಲಿ ಬಂದ್ ನಡೆಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಬಹುತೇಕ ಉದ್ಯಮಿಗಳು ವ್ಯಕ್ತಪಡಿಸಿದ್ದಾರೆ ಎಂದರು.
ಪ್ರವಾಸಿಗರು ವಾರಾಂತ್ಯ ಪ್ರವಾಸಕ್ಕಾಗಿ ಶುಕ್ರವಾರವೇ ಮೈಸೂರಿಗೆ ಬಂದು ವಾಸ್ತ್ತವ್ಯ ಹೂಡಿ ಭಾನುವಾರ ಹಿಂತಿರುಗುತ್ತಾರೆ. ಶನಿವಾರ ಬಂದ್‍ಗೆ ಕರೆ ನೀಡಿರುವುದರಿಂದ ಪ್ರವಾಸಿಗರು ಮೈಸೂರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಹೋಟೆಲ್‍ಗಳು, ಉಪಹಾರ ಗೃಹಗಳು, ಸಾರಿಗೆ, ಅಂಗಡಿಗಳು, ರಸ್ತೆಬದಿ ವ್ಯಾಪಾರಿಗಳು, ಪ್ರವಾಸಿ ತಾಣಗಳು, ಪ್ರವಾಸಿ ಆಕರ್ಷಣೆಗಳು, ಆಟೋರಿಕ್ಷಾಗಳು, ಕುದುರೆ ಸಾರೋಟ ಹೀಗೆ ಹತ್ತಾರು ಉದ್ಯಮಗಳು 1 ದಿನದ ಆದಾಯದಿಂದ ವಂಚಿತವಾಗುತ್ತವೆ. ಈಗಾಗಲೇ ಮೈಸೂರಿಗೆ ಬರಬೇಕಿದ್ದ ಪ್ರವಾಸಿಗರು ಕೇರಳ ಕಡೆ ಮುಖ ಮಾಡಿದ್ದಾರೆ ಎಂದು ವಿಷಾದಿಸಿದರು.
ಜಿಲ್ಲಾ ಪ್ರವಾಸಿ ವಾಹನ ಚಾಲಕ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ನಾಗರಾಜ್, ಮೈಸೂರು ಅನುಮೋದಿತ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಅಶೋಕ್, ಜಿಲ್ಲಾ-ನಗರ ಮ್ಯಾಕ್ಸಿಕ್ಯಾಬ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ರವಿ, ದೇವರಾಜ್ ಅರಸ್ ರಸ್ತೆ ಟ್ರೇಡರ್ಸ್ ಅಸೋಸಿಯೇಷನ್ ವೀರಭದ್ರಪ್ಪ, ಕಲ್ಯಾಣ ಮಂಟಪ ಮಾಲೀಕರ ಸಂಘದ ಕೆ.ಆರ್.ಸತ್ಯನಾರಾಯಣ, ಪಾಲಿಕೆ ಮಂಡಿ ಮಾರುಕಟ್ಟೆ ಬಾಡಿಗೆದಾರರ ಸಂಘದ ಮಹದೇವು ಸುದ್ದಿಗೋಷ್ಠಿಯಲ್ಲಿದ್ದರು.