2023ರಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ   ತಂದು ಕೊನೆಯುಸಿರೆಳೆಯುತ್ತೇನೆ 
ಮೈಸೂರು

2023ರಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ  ತಂದು ಕೊನೆಯುಸಿರೆಳೆಯುತ್ತೇನೆ 

January 6, 2021

ಕಡೂರು,ಜ.5-ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸುತ್ತೇನೆ ಎಂದು ನಾನು ಕನಸಿನಲ್ಲಿಯೂ ನೆನಸಿರಲಿಲ್ಲ. ಹೋರಾಟ ಮಾಡುವ ಶಕ್ತಿಯನ್ನು ನನಗೆ ರಾಜ್ಯದ ಜನತೆ ನೀಡಿದ್ದು, ಜನರ ಮೇಲೆ ನನಗೆ ವಿಶ್ವಾಸವಿದೆ. ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕೊನೆಯುಸಿರೆಳೆಯುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ತಾಲೂಕಿನ ಬೀರೂರು ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಗ್ರಾಪಂ ಚುನಾವಣೆಯಲ್ಲಿ ವಿಜಯ ಸಾಧಿಸಿದ ಜೆಡಿಎಸ್ ಬೆಂಬಲಿತ ಸದಸ್ಯರಿಗೆ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಪಸಭಾಪತಿಗಳಾದ ಧರ್ಮೇಗೌಡ ಈ ಕಾರ್ಯಕ್ರಮ ದಲ್ಲಿ ಇಲ್ಲ ಎಂಬುದನ್ನು ನೆನೆದು ದುಃಖವಾಗುತ್ತಿದೆ. ವಿಧಾನ ಪರಿಷತ್‍ನಲ್ಲಿ ನಡೆದ ಘಟನೆಯಿಂದ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಪ್ರಾಣ ಕಳೆದುಕೊಳ್ಳುವಂತಾಗಿದೆ. ನಮ್ಮ ಪಕ್ಷಕ್ಕೆ ಈ ದುರಂತ ನಷ್ಟವುಂಟು ಮಾಡಿದೆ ಎಂದರು.

ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸುವುದು, ಉಳಿಸುವುದು ಬಹಳ ಕಷ್ಟ. ಕಳೆದ 50 ವರ್ಷಗಳ ರಾಜಕೀಯ ಜೀವನ ದಲ್ಲಿ ಹೋರಾಟ ಮಾಡುತ್ತಾ ಬರಲಾಗಿದೆ. ಪ್ರಾದೇಶಿಕ ಪಕ್ಷದ ಬಗ್ಗೆ ಲಘುವಾಗಿ ಮಾತ ನಾಡುತ್ತಿದ್ದಾರೆ. ಅವರು ಇದೇ ಪಕ್ಷದಲ್ಲಿ ಬೆಳೆದು ಮುಂದೆ ಬಂದಂತವರಾಗಿರುತ್ತಾರೆ. ಜೆಡಿಎಸ್ ಪಕ್ಷದ ಬಗ್ಗೆ ಕಠಿಣ ಶಬ್ದ ಬಳಸಿ ಮಾತನಾಡುತ್ತಿದ್ದಾರೆ. ಈ ಪಕ್ಷವನ್ನು ಉಳಿಸಲು ಬಹಳ ಕಷ್ಟಪಟ್ಟಿದ್ದೇನೆ. ನಮ್ಮ ಪಕ್ಷದಲ್ಲಿ ಬೆಳೆದವರು ಕಾಂಗ್ರೆಸ್, ಬಿಜೆಪಿಯಲ್ಲೂ ಇದ್ದಾರೆ. 2023ರವರೆಗೆ ನಾನು ನಿಮ್ಮ ಜೊತೆ ಇರುತ್ತೇನೆ. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿಯಾಗಿದೆ ಎಂದರು. ರಾಜ್ಯಸಭಾ ಸದಸ್ಯನಾಗಿ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕ್ಷೇತ್ರಗಳಿಗೆ ನನ್ನ ಅನುದಾನವನ್ನು ನೀಡಲಾಗುವುದು. ಕೇಂದ್ರ ಸರಕಾರ ರಾಜ್ಯಸಭಾ ಸದಸ್ಯರಿಗೆ ಅನುದಾನ ನಿಗದಿಗೊಳಿಸಿರುತ್ತದೆ. ಇದರಲ್ಲಿ ಹೆಚ್ಚಿನ ಅನುದಾನವನ್ನು ಕಡೂರು ಕ್ಷೇತ್ರಕ್ಕೆ ನೀಡಲಾಗುವುದು. ಕಾರ್ಯಕರ್ತರ ಹೆಚ್ಚಿನ ಶ್ರಮದಿಂದ ಪಕ್ಷ ಗೆಲ್ಲಲು ಸಾಧ್ಯ. ಗೆದ್ದಿರುವ ಗ್ರಾಮ ಪಂಚಾಯತ್ ಸದಸ್ಯರು ನಮ್ಮ ಪಕ್ಷದ ಸೇನಾನಿಗಳು ಎಂದ ಅವರು, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿದ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರು ಹೋರಾಟ ಮಾಡುವುದರ ಮೂಲಕ ಕಡೂರು ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಅವರ ಗೆಲುವು ಖಚಿತ ಎಂದರು.

 

 

 

 

 

Translate »