ಜೆಡಿಎಸ್ ನಂಬದೇ, ಕಾಂಗ್ರೆಸ್ ಕಿತ್ತಾಟದ ಲಾಭ ಪಡೆದು ಬಿಜೆಪಿ ಬಲಪಡಿಸೋಣ: ಸಚಿವ ಸಿ.ಪಿ.ಯೋಗೇಶ್ವರ್ ಕರೆ
ಮೈಸೂರು

ಜೆಡಿಎಸ್ ನಂಬದೇ, ಕಾಂಗ್ರೆಸ್ ಕಿತ್ತಾಟದ ಲಾಭ ಪಡೆದು ಬಿಜೆಪಿ ಬಲಪಡಿಸೋಣ: ಸಚಿವ ಸಿ.ಪಿ.ಯೋಗೇಶ್ವರ್ ಕರೆ

March 3, 2021

ಮೈಸೂರು,ಮಾ.2(ಎಂಟಿವೈ)- ಜೆಡಿಎಸ್ ನಾಯಕರನ್ನು ನಂಬಿ ರಾಜಕಾರಣ ಮಾಡು ವುದು ಸರಿಯಲ್ಲ. ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೆ ನಮ್ಮ ಕಾರ್ಯಕರ್ತರು ಘಾಸಿಗೊಳ್ಳುತ್ತಾರೆ. ಜೆಡಿಎಸ್ ನಂಬದೇ, ಕಾಂಗ್ರೆಸ್‍ನ ಒಳ ಜಗಳದ ಪ್ರಯೋಜನ ಪಡೆದು ಪಕ್ಷ ಸಂಘಟನೆಯತ್ತ ಗಮನ ಕೇಂದ್ರೀಕರಿಸಿ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಪಕ್ಷದ ಪದಾ ಧಿಕಾರಿಗಳಿಗೆ ಸಲಹೆ ನೀಡಿದರು.

ಸಚಿವರಾದ ಬಳಿಕ ಮೊದಲ ಬಾರಿಗೆ ಮೈಸೂರಿನ ಚಾಮರಾಜ ಮೊಹಲ್ಲಾದಲ್ಲಿ ರುವ ಬಿಜೆಪಿ ಜಿಲ್ಲಾ ಕಚೇರಿಗೆ ಆಗಮಿಸಿದ ಸಿಪಿವೈ, ಸನ್ಮಾನ ಸ್ವೀಕರಿಸಿ ಮಾತನಾಡಿ ದರು. ಸ್ಥಳೀಯ ಸಂಸ್ಥೆ ಸೇರಿದಂತೆ ಯಾವುದೇ ಹಂತದಲ್ಲೂ ಜೆಡಿಎಸ್ ಜತೆ ಮೈತ್ರಿಗೆ ನನ್ನ ವಿರೋಧವಿದೆ. ಆ ಪಕ್ಷ ದೊಂದಿಗೆ ಹೊಂದಾಣಿಕೆ ನಮ್ಮ ಕಾರ್ಯ ಕರ್ತರಿಗೆ ಇಷ್ಟವಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ತೊಡಕಾಗಲಿದೆ ಎಂದರು.

ಸದನದೊಳಗೆ ಬಿಜೆಪಿ, ಮೈಸೂರು ಪಾಲಿಕೆ ಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಜೆಡಿಎಸ್ ನಾಯಕರನ್ನು ಹೇಗೆ ನಂಬ ಬೇಕು? ಯಾವ ರೀತಿ ರಾಜಕಾರಣ ಮಾಡು ತ್ತಾರೆ ಈ ನಾಯಕರು? ಯಾವ ತತ್ವ, ಸಿದ್ಧಾಂತವೂ ಇಲ್ಲದ, ನಂಬಿಕೆಯನ್ನೇ ಉಳಿಸಿ ಕೊಳ್ಳದ ಜೆಡಿಎಸ್‍ಗೆ ಮನ್ನಣೆ ಕೊಡಬಾರದು. ದಾಕ್ಷಿಣ್ಯ ಇಟ್ಟುಕೊಳ್ಳಬಾರದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಜೆಡಿಎಸ್ ಜತೆ ಮೈತ್ರಿ ಬೇಡ ಎಂದು ಹಿಂದೆ ಅನೇಕ ಬಾರಿ ವರಿಷ್ಠರಿಗೆ ಮನವಿ ಮಾಡಿದ್ದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ಜನರು ತಿರಸ್ಕರಿಸಿರುವುದರಿಂದ ಎರಡೂ ಪಕ್ಷಗಳನ್ನು ದೂರ ಇಡಬೇಕು. ಬೆಂಗಳೂರಿ ನಲ್ಲಿ ಮಹಾ ಘಟಬಂಧನ್ ಸಮಾವೇಶ ದಲ್ಲಿ ಮಾಯಾವತಿ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಹಿರಿಯ ಮುಖಂಡರನ್ನು ಒಂದೇ ವೇದಿಕೆ ಯಲ್ಲಿ ಸೇರಿಸಿ ಕೈ ಮೇಲೆತ್ತಿಸಿ ಒಗ್ಗಟ್ಟು ಪ್ರದ ರ್ಶಿಸಿದ್ದನ್ನು ನೋಡಿದ ಹಲವರು, `ಹೆಚ್.ಡಿ. ದೇವೇಗೌಡರು ಮತ್ತೆ ಪ್ರಧಾನಿಯಾಗು ತ್ತಾರೆ’ ಎಂದು ಭವಿಷ್ಯ ನುಡಿದಿದ್ದರು. ಆದರೆ, ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಾಗ ಜೆಡಿಎಸ್‍ಗೆ ಸಿಕ್ಕಿದ್ದು ಒಂದೇ ಸೀಟು ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಕಿತ್ತಾಟದ ಲಾಭ: ಕಾಂಗ್ರೆಸ್ ನಲ್ಲಿನ ಗುಂಪುಗಾರಿಕೆ, ನಾಯಕರ ಕಿತ್ತಾಟ ಬಿಜೆಪಿಗೆ ವರದಾನವಾಗಲಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ದರಾಮಯ್ಯ-ಡಿ.ಕೆ.ಶಿವ ಕುಮಾರ್ ಕಿತ್ತಾಡುತ್ತಿದ್ದಾರೆ. ಸೋನಿಯಾ ಗಾಂಧಿ ನಾಯಕತ್ವ ವಿರುದ್ಧ ಅನೇಕ ರಾಷ್ಟ್ರ ಮಟ್ಟದ ನಾಯಕರೂ ಬಂಡೆದ್ದಿದ್ದು, ಪಕ್ಷ ಹೋಳಾಗುವ ಸನ್ನಿವೇಶವಿದೆ. ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕನಸು ನನಸಾಗಲು ಬಿಡುವುದಿಲ್ಲ ಎಂದು ಡಿಕೆಶಿ ಪಣ ತೊಟ್ಟಿ ದ್ದಾರೆ. ಡಿಕೆಶಿ ವೇಗಕ್ಕೆ ಸಿದ್ದರಾಮಯ್ಯ ಅಡ್ಡ ಗಾಲಾಗಿದ್ದಾರೆ. ಇವರಿಬ್ಬರ ಕಿತ್ತಾಟ, ಜಗಳದ ಲಾಭವನ್ನು ರಾಜಕೀಯವಾಗಿ ಬಳಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಹುಣಸೂರು ಕ್ಷೇತ್ರದ ಉಪ ಚುನಾವಣೆ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 11 ಕ್ಷೇತ್ರದಲ್ಲಿ 8 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಬೇಕು. 2023ಕ್ಕೆ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಪಕ್ಷದ ಚೌಕಟ್ಟಿನಲ್ಲಿ ಕೆಲವು ವಿಚಾರಗಳನ್ನು ಮಾತ ನಾಡಬೇಕಿರುವ ಕಾರಣ ಎಲ್ಲ ಅಂಶಗಳನ್ನು ಮಾತನಾಡಲ್ಲ. ಮೈಸೂರು ಭಾಗದಲ್ಲಿ ಪಕ್ಷ ವನ್ನು ಬಲಪಡಿಸಿ ಹೆಚ್ಚು ಸ್ಥಾನ ಗೆಲ್ಲಲು ಸಂಕಲ್ಪ ಮಾಡಿದ್ದೇನೆ ಎಂದು ತಿಳಿಸಿದÀರು.

ಬಿಜೆಪಿ ಮೈಸೂರು ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ ಮಾತನಾಡಿ, ಕಾರ್ಯಕರ್ತರು ಯಾವುದೇ ಸಮಸ್ಯೆ ಹೇಳಿಕೊಂಡು ಹೋದಾಗ ಸ್ಪಂದಿಸುತ್ತಾರೆ. ಸಣ್ಣ ಸಣ್ಣ ವಿಚಾರಗಳಿಗೂ ಶಿಫಾರಸು ಪತ್ರ ನೀಡಿ ಕೆಲಸ ಆಗುವಂತೆ ಮಾಡುತ್ತಾರೆ. ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಕಾರ್ಯಕರ್ತರಿಗೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಅನೇ ಕರು ಹೇಳುತ್ತಿದ್ದರು. ಅದೇ ರೀತಿ ಪಕ್ಷ ಅಧಿಕಾರಕ್ಕೆ ಬರಬೇಕೆಂದು ನಿರಂತರವಾಗಿ ಶ್ರಮಿಸಿದರು. ಶಾಸಕರ ವಿಶ್ವಾಸ ಗಳಿಸಿ, ಅವರಿಗೆ ಬಿಜೆಪಿ ಮೇಲೆ ನಂಬಿಕೆ ಬರುವಂತೆ ಮಾಡಿ ರಾಜೀನಾಮೆ ಕೊಡಿಸಿ ಅಧಿಕಾರಕ್ಕೆ ತರುವಲ್ಲಿ ಯೋಗೇಶ್ವರ್ ವಹಿಸಿದ್ದ ಪಾತ್ರ ವನ್ನು ಮರೆಯಲಾಗದು ಎಂದರು.

ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ದೇವನೂರು ಪ್ರತಾಪ್, ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ವಾಣೀಶ್‍ಕುಮಾರ್, ಹೆಚ್.ಜಿ.ಗಿರಿಧರ್, ಸೋಮಸುಂದರ್, ಪಾಲಿಕೆ ಮಾಜಿ ಸದಸ್ಯ ಎಂ.ಶಿವಕುಮಾರ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ನಗರ ಅಧ್ಯಕ್ಷ ಜೋಗಿಮಂಜು, ಮುಖಂಡ ರಾದ ಜಯಪ್ರಕಾಶ್(ಜೆಪಿ), ಗೋಪಾಲ ರಾಜೇ ಅರಸ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರತ್ನ ಗೌಡ, ಮಾಧ್ಯಮ ಪ್ರಮುಖರಾದ ಪ್ರದೀಪ್‍ಕುಮಾರ್, ಮಹೇಶ್ ರಾಜೇ ಅರಸ್, ಮಹೇಶ್ ಕೇಬಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »