ಮೈಸೂರು ವಿಜಯನಗರದಲ್ಲಿ ಹಾಡಹಗಲೇ ಮಹಿಳೆ ಸರ ಕಳವು
ಮೈಸೂರು

ಮೈಸೂರು ವಿಜಯನಗರದಲ್ಲಿ ಹಾಡಹಗಲೇ ಮಹಿಳೆ ಸರ ಕಳವು

June 2, 2020

ಮೈಸೂರು, ಜೂ. 1(ಆರ್‍ಕೆ)- ಮುಖಕ್ಕೆ ಮಾಸ್ಕ್ ಧರಿಸಿದ್ದ ಖದೀಮರಿಬ್ಬರು ಸ್ಕೂಟರ್‍ನಲ್ಲಿ ಹೋಗು ತ್ತಿದ್ದ ಮಹಿಳೆಯ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಹಾಡಹಗಲೇ ಮೈಸೂರಿನ ವಿಜಯನಗರ ರೈಲ್ವೇ ಬಡಾವಣೆಯ ಸೂರ್ಯ ಬೇಕರಿ ಸರ್ಕಲ್ ಅನತಿ ದೂರದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.

ಅತ್ಯಂತ ದುಃಖ ಹಾಗೂ ರೋಷದ ಸಂಗತಿ ಎಂದರೆ, ಹಾಡಹಗಲೇ ಈ ದುಷ್ಕøತ್ಯ ನಡೆದರೂ, ಆಜು ಬಾಜಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಮೂಕ ಪ್ರೇಕ್ಷಕರಂತೆ ತಮಗೂ ಇದಕ್ಕೂ ಸಂಬಂಧ ಇಲ್ಲ ಎಂಬಂತೆ ವರ್ತಿಸಿದ್ದು.

ಮೈಸೂರಿನ ವಿಜಯನಗರ ರೈಲ್ವೇ ಬಡಾವಣೆ ನಿವಾಸಿ ಸವಿತಾ(27) 40 ಗ್ರಾಂ ಚಿನ್ನದ ಮಾಂಗಲ್ಯ ಸರ ಕಳೆದು ಕೊಂಡವರು. ಮಂಚೇಗೌಡನಕೊಪ್ಪಲಿನ ಸಂಬಂಧಿ ಕರ ಮನೆಗೆ ಹೋಗಿ ತಮ್ಮ ಡಿಯೋ ಸ್ಕೂಟರ್ ನಲ್ಲಿ ಹಿಂದಿರುಗುತ್ತಿದ್ದಾಗ ಬೈಕಿನಲ್ಲಿ ಹಿಂದಿನಿಂದ ಬಂದ ಖದೀಮರು, ಸೂರ್ಯಬೇಕರಿ ಸರ್ಕಲ್ ಸಮೀಪ ಮುಖ್ಯ ರಸ್ತೆಯಲ್ಲಿ ಸವಿತಾ ಅವರ ಕೊರಳಿನಿಂದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು, ಮಧ್ಯಾಹ್ನ ಸಮಾರು 1.15 ಗಂಟೆ ವೇಳೆಗೆ ಪರಾರಿಯಾದರು.

ಘಟನಾ ಸ್ಥಳಕ್ಕೆ ತೆರಳಿದ ವಿಜಯನಗರ ಠಾಣೆ ಇನ್ ಸ್ಪೆಕ್ಟರ್ ಬಾಲಕೃಷ್ಣ ಹಾಗೂ ಸಿಬ್ಬಂದಿ, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡರು. ಮಹಿಳೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾದ ದೃಶ್ಯ ರಸ್ತೆಯ ಅಂಗಡಿಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಪೊಲೀಸರು ಫುಟೇಜಸ್ ಪಡೆದು ಸರಗಳ್ಳರ ಪತ್ತೆಗೆ ವ್ಯಾಪಕ ಶೋಧ ನಡೆಸುತ್ತಿದ್ದಾರೆ. ದಟ್ಟ ವಾಹನ ಸಂಚಾರ ವಿರುವ ಬ್ಯುಸಿ ರಸ್ತೆಯಲ್ಲಿ ಹಾಡಹಗಲೇ ನಡೆದಿರುವ ಘಟನೆಯಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಲಾಕ್‍ಡೌನ್‍ನಿಂದಾಗಿ ಆದಾಯವಿಲ್ಲದೆ ಕಂಗಾಲಾಗಿ ರುವ ಕೆಲ ಯುವಕರು, ಈ ರೀತಿಯ ಕಳವು ಮಾಡು ತ್ತಿದ್ದು, ಮಹಿಳೆಯರು, ವೃದ್ಧರು ಓಡಾಡುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಎಚ್ಚರದಿಂದಿರಬೇಕು ಎಂದು ಇನ್‍ಸ್ಪೆಕ್ಟರ್ ಬಾಲಕೃಷ್ಣ ಸಲಹೆ ನೀಡಿದ್ದಾರೆ.

Translate »