ಕುಡಿದ ಮತ್ತಿನಲ್ಲಿ ಕಾನ್‍ಸ್ಟೇಬಲ್ ಮೇಲೆ ಹಲ್ಲೆ: ಮೂವರ ಬಂಧನ  ಸರಸ್ವತಿಪುರಂನಲ್ಲಿ ಶನಿವಾರ ರಾತ್ರಿ ಘಟನೆ
ಮೈಸೂರು

ಕುಡಿದ ಮತ್ತಿನಲ್ಲಿ ಕಾನ್‍ಸ್ಟೇಬಲ್ ಮೇಲೆ ಹಲ್ಲೆ: ಮೂವರ ಬಂಧನ ಸರಸ್ವತಿಪುರಂನಲ್ಲಿ ಶನಿವಾರ ರಾತ್ರಿ ಘಟನೆ

June 2, 2020

ಮೈಸೂರು,ಜೂ.1(ಆರ್‍ಕೆ)-ಕುಡಿದ ಮತ್ತಿನಲ್ಲಿ ಪೊಲೀಸ್ ಕಾನ್‍ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ಮೂವರು ಯುವಕರನ್ನು ಮೈಸೂರಿನ ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಕೆ.ಜಿ.ಕೊಪ್ಪಲು ನಿವಾಸಿ ಲೇಟ್ ರಾಮಣ್ಣ ಅವರ ಮಗ ಆರ್.ಮಹೇಶ್‍ಗೌಡ, ಶ್ರೀರಾಂಪುರದ ಜಯರಾಂ ಅವರ ಮಗ ದರ್ಶನ್ ಹಾಗೂ ಜಯನಗರ ನಿವಾಸಿ ಶಿವಣ್ಣ ಕೆ.ಗೌಡ ಅವರ ಮಗ ಹೇಮಕುಮಾರ್‍ಗೌಡ ಬಂಧಿತ ಆರೋಪಿಗಳಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸರಸ್ವತಿಪುರಂ ಠಾಣೆ ಇನ್‍ಸ್ಪೆಕ್ಟರ್ ವಿಜಯಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಶನಿವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಸರಸ್ವತಿಪುರಂ ಠಾಣೆ ಗರುಡ ವಾಹನ ದಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್‍ಸ್ಟೇಬಲ್ ಮಹದೇವು ಎಂಬುವರು, ಸರಸ್ವತಿಪುರಂ ಮುಖ್ಯ ರಸ್ತೆಯ ಟಿಟಿಎಲ್ ಕಾಲೇಜು ಎದುರಿನ ಬಸ್ ಶಿಲ್ಟರ್‍ನಲ್ಲಿ ಮೂವರು ಯುವಕರು ಕುಳಿತಿದ್ದುದನ್ನು ಕಂಡು ಮನೆಗೆ ಹೋಗುವಂತೆ ಹೇಳಿ ಮುಂದೆ ಹೋಗಿದ್ದರು. ಮತ್ತೆ ಅರ್ಧಗಂಟೆ ಬಿಟ್ಟು ಅದೇ ಮಾರ್ಗದಲ್ಲಿ ಬಂದಾಗಲೂ ಮಹೇಶ್‍ಗೌಡ, ದರ್ಶನ್ ಮತ್ತು ಹೇಮಕುಮಾರ್‍ಗೌಡ ಅದೇ ಸ್ಥಳದಲ್ಲಿದ್ದುದನ್ನು ಕಂಡ ಮಹದೇವು ಪ್ರಶ್ನಿಸಿದಾಗ ಯುವಕರು ಅವಾಚ್ಯ ಶಬ್ದಗಳಿಂದ ನಿಂಧಿಸಿದರಲ್ಲದೆ, ಕಾನ್‍ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದೂ ಇನ್‍ಸ್ಪೆಕ್ಟರ್ ತಿಳಿಸಿದರು.

ವಿಷಯ ತಿಳಿದ ತಕ್ಷಣ ಸಿಬ್ಬಂದಿ ಸ್ಥಳಕ್ಕೆ ತೆರಳಿದರಾದರೂ, ಹಲ್ಲೆ ನಡೆಸಿದ ಯುವಕರು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸರಸ್ವತಿಪುರಂ ಠಾಣೆ ಪೊಲೀಸರು ಭಾನುವಾರ ಬೆಳಿಗ್ಗೆ ಮೂವರು ಆರೋಪಿಗಳನ್ನು ಬಂಧಿಸಿದರು.

ಠಾಣೆಯಲ್ಲಿ ವಿಚಾರಣೆ ನಡೆಸಿದ ನಂತರ ಮೂವರನ್ನೂ ನ್ಯಾಯಾಧೀಶರ ಮುಂದೆ ನಿವಾಸದಲ್ಲಿ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು ಎಂದೂ ಇನ್‍ಸ್ಪೆಕ್ಟರ್ ವಿಜಯಕುಮಾರ್ ತಿಳಿಸಿದರು.

 

 

Translate »