ರೈಲಿನಿಂದ ಆಯತಪ್ಪಿ ಬಿದ್ದು ಮಹಿಳೆ ಸಾವು
ಮೈಸೂರು

ರೈಲಿನಿಂದ ಆಯತಪ್ಪಿ ಬಿದ್ದು ಮಹಿಳೆ ಸಾವು

August 6, 2018

ಮೈಸೂರು: ಮೈಸೂರಿನ ಮಹಿಳೆಯೊಬ್ಬರು ರೈಲಿನಿಂದ ಆಯತಪ್ಪಿ ಬಿದ್ದು, ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ರೈಲು ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಮೈಸೂರಿನ ವಿಜಯನಗರ ಮೊದಲನೇ ಹಂತದ ನಿವಾಸಿ ಹೆನ್ರಿ ಅವರ ಪತ್ನಿ ಮೇರಿ ಫಾತಿಮಾ(63) ಸಾವನ್ನಪ್ಪಿದವರು. ಮೇರಿ ಅವರ ಪುತ್ರ ಮಾಲ್ಡೀವ್ಸ್‍ನಲ್ಲಿ ನೆಲೆಸಿದ್ದು, ಸಂಬಂಧಿಕರೊಬ್ಬರ ನಿಧನದ ಹಿನ್ನೆಲೆಯಲ್ಲಿ ಮೈಸೂರಿಗೆ ಬಂದಿದ್ದರು. ಇಂದು ಮಾಲ್ಡೀವ್ಸ್‍ಗೆ ವಾಪಸ್ಸಾಗುತ್ತಿದ್ದ ಪುತ್ರನನ್ನು ಬೀಳ್ಕೊಡಲೆಂದು ಮೇರಿ ಅವರು ಬೆಂಗಳೂರಿಗೆ ಜೊತೆಯಲ್ಲೇ ತೆರಳಿದ್ದರು.

ಮಗ ವಿಮಾನವೇರಿದ ಬಳಿಕ ಬೆಂಗಳೂರಿನ ಶಾಂತಿನಗರದಲ್ಲಿರುವ ಪುತ್ರಿಯ ಮನೆಗೆ ಹೋಗಿದ್ದು, ಅಲ್ಲಿಂದ ಅವರ ಅಳಿಯ ರೈಲು ನಿಲ್ದಾಣಕ್ಕೆ ಡ್ರಾಪ್ ನೀಡಿದ್ದಾರೆ. ಮೈಸೂರಿಗೆ ಮಧ್ಯಾಹ್ನ 3.20ಕ್ಕೆ ಹೊರಡುವ ರೈಲಿಗಾಗಿ ಕಾದು ಕುಳಿತಿದ್ದ ಮೇರಿ ಅವರು ಮುಂಚಿತವಾಗಿ ಮಧ್ಯಾಹ್ನ 3 ಗಂಟೆಗೆ ಹೊರಡುತ್ತಿದ್ದ ಬೇರೊಂದು ರೈಲು ಹೊರಡುವುದನ್ನು ಕಂಡು ಅದು ಮೈಸೂರಿಗೆ ಹೋಗಬಹುದೆಂದು ಭಾವಿಸಿದ್ದಾರೆ. ಕೂಡಲೇ ಓಡಿಹೋಗಿ ಆ ರೈಲನ್ನೇರಲು ಪ್ರಯತ್ನಿಸಿದ್ದಾರೆ. ಅದಾಗಲೇ ರೈಲು ವೇಗ ಪಡೆದಿದ್ದರಿಂದ ಮೇರಿ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರೈಲ್ವೇ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಮೇರಿ ಅವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಒಯ್ದು, ವೈದ್ಯಕೀಯ ಪರೀಕ್ಷೆಯ ನಂತರ ವಾರಸುದಾರರಿಗೆ ಒಪ್ಪಿಸಿದರು. ಮೇರಿ ಅವರ ಕಣ್ಣುಗಳನ್ನು ಕುಟುಂಬದವರು ವಿಕ್ಟೋರಿಯಾ ಆಸ್ಪತ್ರೆಗೆ ದಾನ ಮಾಡುವ ಮೂಲಕ ದುಃಖದ ನಡುವೆಯೂ ಮಾನವೀಯತೆ ಮೆರೆದರು. ಮೇರಿ ಅವರ ಮೃತದೇಹವನ್ನು ಭಾನುವಾರ ರಾತ್ರಿ ಮೈಸೂರಿಗೆ ತರಲಾಗಿದ್ದು, ನಾಳೆ(ಸೋಮವಾರ) ಅಂತ್ಯ ಸಂಸ್ಕಾರ ನೆರವೇರಲಿದೆ.

Translate »