ಸರಕಾರಿ ಶಾಲೆ ಉಳಿಸುವ ಅಭಿಯಾನ: ಕೈಲಾಸಪುರಂ, ತಿಲಕ್‍ನಗರ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ
ಮೈಸೂರು

ಸರಕಾರಿ ಶಾಲೆ ಉಳಿಸುವ ಅಭಿಯಾನ: ಕೈಲಾಸಪುರಂ, ತಿಲಕ್‍ನಗರ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

August 6, 2018

ಮೈಸೂರು: ಸರಕಾರಿ ಶಾಲೆಗಳನ್ನು ಉಳಿಸುವ ಜೊತೆಗೆ ಪ್ರವೇಶಾತಿ ಹೆಚ್ಚಳ ಮಾಡುವ ಉದ್ದೇಶದಿಂದ `ಸರಕಾರಿ ಶಾಲೆ ಉಳಿಸುವ ಅಭಿಯಾನ’ದಡಿ ಎರಡು ಸರಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಜಾಮಿಟ್ರಿ ಬಾಕ್ಸ್ ವಿತರಣೆ ಮಾಡಲಾಯಿತು.

ನಗರ ಪಾಲಿಕೆಯ ವಾರ್ಡ್ 25ರ ವ್ಯಾಪ್ತಿಗೆ ಬರುವ ಕೈಲಾಸಪುರಂ, ತಿಲಕ್‍ನಗರ ಸರಕಾರಿ ಶಾಲೆಯ ಮಕ್ಕಳಿಗೆ ತಾಪಂ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಪುಸ್ತಕ, ಜಾಮಿಟ್ರಿ ಬಾಕ್ಸ್‍ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರಿ ಶಾಲೆ ಉಳಿಸುವ ಅಭಿಯಾನದಡಿ ಕೈಲಾಸಪುರಂ, ತಿಲಕ್‍ನಗರ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಗಿದೆ. ಚಾಮುಂಡೇಶ್ವರಿ ಯುವಕರ ಸೇವಾ ಸಮಿತಿಯಿಂದ ಈ ಅಭಿಯಾನ ಆರಂಭಿಸಿದ್ದು, ಮುಂದೆ ವಾರ್ಡ್ 25ರ ವ್ಯಾಪ್ತಿಗೆ ಬರುವ ಎಲ್ಲಾ ಸರಕಾರಿ ಶಾಲೆಗಳಿಗೆ ಪುಸ್ತಕ ಹಂಚುವ ಕಾರ್ಯಕ್ರಮ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ಈ ಅಭಿಯಾನ ಮುಂದುವರೆಸುವ ಜೊತೆಗೆ ಸರಕಾರಿ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ, ಜಾಮಿಟ್ರಿ ಬಾಕ್ಸ್, ಬ್ಯಾಗ್ ಮೊದಲಾದ ವಸ್ತುಗಳನ್ನು ವಿತರಿಸುವ ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.

ಸರಕಾರಿ ಶಾಲೆಯಿಂದ ಹೊರಗುಳಿದು ಖಾಸಗಿ ಶಾಲೆಗಳಿಗೆ ಹೆಚ್ಚು ಹೋಗುವಂತಾಗಿದೆ. ಹಾಗಾಗಿ, `ಮಿಸ್ಡ್ ಕಾಲ್ ಕೊಡಿ, ಸರಕಾರಿ ಶಾಲೆ ಉಳಿಸಿ’ ಅಭಿಯಾನ ಆರಂಭಿಸಿದ್ದೇವೆ ಎಂದು ನುಡಿದರು. ನಗರದ ಹೃದಯ ಭಾಗದಲ್ಲಿದ್ದರೂ ಕೈಲಾಸಪುರಂ, ತಿಲಕ್‍ನಗರ ಪ್ರದೇಶ ತೀರಾ ಹಿಂದುಳಿದಿದೆ. ಈ ವಾರ್ಡಿನ ಅಭಿವೃದ್ಧಿಪಡಿಸುವುದು ಅಗತ್ಯವಿದೆ. ಸ್ಥಳೀಯ ಯುವಕ ಸಂಘಟನೆಗಳ ಮುಖಂಡರು ವಾರ್ಡಿನಲ್ಲಿ ಸಕ್ರಿಯವಾಗಿ ಕೆಲಸ ಮಾಡಿದರೆ ಬದಲಾವಣೆ ತರಬಹುದು ಎಂದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ರೇಣುಕಾಸ್ವಾಮಿ, ಚಂದನ್, ಹರ್ಷ, ಸತ್ಯ, ಭರತ್ ಇದ್ದರೆ, ತಿಲಕ್‍ನಗರ ಶಾಲೆಯ ಶಿಕ್ಷಕರಾದ ಮಮ್ತಾಜ್, ಶೋಭಾರಾಣಿ ಮೊದಲಾದವರು ಇದ್ದರು.

Translate »