ಸರ್ಕಾರಿ ಶಾಲೆಯ ಹೆಚ್.ಎಂ. ಕೊಠಡಿಗೆ ಬೆಂಕಿ ಹಚ್ಚಲು ಯತ್ನ
ಚಾಮರಾಜನಗರ

ಸರ್ಕಾರಿ ಶಾಲೆಯ ಹೆಚ್.ಎಂ. ಕೊಠಡಿಗೆ ಬೆಂಕಿ ಹಚ್ಚಲು ಯತ್ನ

December 4, 2018

ಚಾಮರಾಜನಗರ: ನಗರದ ಸಂತೇಮರ ಹಳ್ಳಿ ರಸ್ತೆಯ ಉಪ್ಪಾರ ಬೀದಿಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥ ಮಿಕ ಶಾಲೆಯ (ಅಂಚೆ ಕಚೇರಿ ಪಕ್ಕ) ಮುಖ್ಯೋಪಾಧ್ಯಾಯರ ಕೊಠಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುವ ಯತ್ನ ನಡೆಸಿದ್ದಾರೆ.

ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯ ಕಿಟಕಿಯ ಮೂಲಕ ಬೆಂಕಿಯ ಕಿಡಿಯನ್ನು ಕೊಠಡಿಯ ಒಂದು ಮೂಲೆಗೆ ಎಸೆಯಲಾಗಿದೆ. ಸ್ಥಳದಲ್ಲಿ ಯಾವುದೇ ವಸ್ತುಗಳು ಮತ್ತು ದಾಖಲಾತಿಗಳು ಇರದ ಕಾರಣ ಯಾವುದೇ ಅನಾಹುತ ವಾಗಲೀ ಅಥವಾ ನಷ್ಟ ಸಂಭವಿಸಿಲ್ಲ. ಕೊಠಡಿಯ ಒಳಕ್ಕೆ ಮದ್ಯದ ಬಾಟಲುಗಳನ್ನು ಎಸೆಯಲಾಗಿದೆ. ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯ ಕೆ.ಎಸ್. ಮಹದೇವ ಸ್ವಾಮಿ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾಂಪೌಂಡ್ ಇಲ್ಲದೆ ತೊಂದರೆ: ಶಾಲೆ ಪಕ್ಕ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ರಸ್ತೆಯ ಅಗಲೀಕರಣದ ವೇಳೆ ಶಾಲೆಯ ಎಡಭಾಗದ ಕಾಂಪೌಂಡನ್ನು ಕೆಡವಿ ಹಾಕಲಾಯಿತು. ಕಾಂಪೌಂಡ್ ಕೆಡವಿ ಎರಡು ವರ್ಷ ಆದರೂ ಸಹ ಕಾಂಪೌಂಡ್ ನಿರ್ಮಾಣಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳಾಗಲೀ ಅಥವಾ ಅಧಿಕಾರಿಗಳಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮಾದರಿ ಶಾಲೆಯಾಗಿದ್ದ ಈ ಶಾಲೆ ಇಂದು ಅನಾಥವಾಗಿದೆ. ಎಂದು ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಕೂಸಣ್ಣಸ್ವಾಮಿ ಆರೋಪಿಸಿದ್ದಾರೆ.

ಕಾಂಪೌಂಡ್ ನಿರ್ಮಾಣಕ್ಕೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಪೌರಾಯುಕ್ತರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಸಹ ಯಾರೊಬ್ಬರೂ ಇತ್ತ ಕಡೆ ಗಮನ ಹರಿಸಿಲ್ಲ ಎಂದು ಅವರು ದೂರಿದರು. ಶಾಲೆಗೆ ಕಾಂಪೌಂಡ್ ಇಲ್ಲದ ಕಾರಣ ಅನೇಕ ಅನಾಹುತಗಳು ಸಂಭವಿಸುತ್ತಿವೆ. ಈ ಅನಾಹುತಗಳು ಹೆಚ್ಚಿನ ಮಟ್ಟಕ್ಕೆ ಆಗುವ ಮೊದಲು ಕಾಂಪೌಂಡ್ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಕೂಸಣ್ಣಸ್ವಾಮಿ ಎಚ್ಚರಿಸಿದ್ದಾರೆ.

Translate »