ಕುಸಿಯುವ ಭೀತಿಯಲ್ಲಿ ಆಲನಹಳ್ಳಿ ಸರ್ಕಾರಿ ಶಾಲೆ
ಮೈಸೂರು

ಕುಸಿಯುವ ಭೀತಿಯಲ್ಲಿ ಆಲನಹಳ್ಳಿ ಸರ್ಕಾರಿ ಶಾಲೆ

December 3, 2018

ಬೈಲಕುಪ್ಪೆ: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ 6 ದಶಕ ಗಳಿಂದ ನಿರ್ವಹಣೆ ಇಲ್ಲದೆ ಸರ್ಕಾರಿ ಶಾಲೆಯೊಂದು ಕುಸಿಯುವ ಭೀತಿಯಲ್ಲಿದ್ದು, ಆತಂಕದಲ್ಲಿ ಪಾಠ ಪ್ರವಚನ ನಡೆಯುವಂತಾಗಿದೆ.

ತಾಲೂಕಿನ ಆಲನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿಯುವ ಭೀತಿಯಲ್ಲಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಯಾವ ಸಂದರ್ಭದಲ್ಲಿ ಅನಾಹುತ ಸಂಭವಿಸುತ್ತದೋ ಎಂಬ ಭಯದಲ್ಲಿ ದಿನ ಕಳೆಯುತ್ತಿದ್ದಾರೆ. 1958ರಲ್ಲಿ ಕೇವಲ ಒಂದು ಕೊಠಡಿ ಕಟ್ಟಡವಾಗಿ ಆರಂಭವಾದ ಈ ಶಾಲೆಯು ವರ್ಷ ಕಳೆದಂತೆ ಹಾಗೂ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಅನುಗುಣವಾಗಿ ಇದೇ ಗ್ರಾಮದ ನಿವೃತ್ತ ಯೋಧ ಟಿ.ಪ್ರಭಾಕರ್ ತಮ್ಮ ತಾಯಿ, ತಂದೆ ಹೆಸರಿನಲ್ಲಿ 1982ನೇ ಸಾಲಿನಲ್ಲಿ ಮತ್ತೆರಡು ಕೊಠಡಿಗಳನ್ನು ಕೊಡುಗೆಯಾಗಿ ನಿರ್ಮಿಸಿಕೊಟ್ಟರು. ಆದರೆ ನಂತರದಲ್ಲಿ ಹಂತ ಹಂತವಾಗಿ ಸರ್ಕಾರದ ವಿವಿಧ ಯೋಜನೆಯಡಿ ಒಟ್ಟು 6 ಪ್ರತ್ಯೇಕ ಕೊಠಡಿಯ ಪೈಕಿ 5 ಕೊಠಡಿ ಆರ್‍ಸಿಸಿಯಿಂದ ನಿರ್ಮಾಣ ವಾಗಿದ್ದರೂ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದ ಶಿಥಿಲಗೊಂಡಿದೆ. ಅಲ್ಲದೆ ಉಳಿದ ಕೊಠಡಿಗಳ ಮೇಲ್ಛಾವಣಿಗೆ ಅಳವಡಿಸಿರುವ ಮರದ ಸಾಮಗ್ರಿ ಗೆದ್ದಲು ಹಿಡಿದು ಕುಸಿಯುವ ಭೀತಿಯಲ್ಲಿದೆ. ಮಳೆ ಬಂದರೆ ನೀರು ಸೋರಿ, ಕೊಠಡಿಗಳೇ ಜಲಾವೃತವಾಗುವುದಂತೂ ಸಾಮಾನ್ಯವಾಗಿದೆ.
1ನೇ ತರಗತಿಯಿಂದ 8ನೇ ತರಗತಿಯವರೆಗೆ ವ್ಯಾಸಂಗ ಮಾಡಲು ಅವಕಾಶವಿರುವ ಈ ಶಾಲೆಯಲ್ಲಿ ಒಟ್ಟು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಕೇವಲ 2 ಶೌಚಾಲಯಗಳು ಮಾತ್ರ ಇದ್ದು, ಶಾಲೆ ಮೂಲ ಸೌಕರ್ಯದಿಂದಲೂ ವಂಚಿತವಾಗಿದೆ. ಅಲ್ಲದೆ ವಿದ್ಯಾರ್ಥಿಗಳು ಪೀಠೋಪಕರಣವಿಲ್ಲದೆ, ನೆಲದಲ್ಲೇ ಕುಳಿತು ಪಾಠ ಕೇಳಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ಶಾಲೆಗೆ ವಿಶಾಲವಾದ ಖಾಲಿ ಜಾಗವಿದ್ದರೂ ಕಾಂಪೌಂಡ್ ಸೌಲಭ್ಯ ಇಲ್ಲ್ಲ. ಮುಖ್ಯೋ ಪಾಧ್ಯಾಯ ಧನಪಾಲ್ ಸೇರಿದಂತೆ ಒಟ್ಟು 7 ಮಂದಿ ಶಿಕ್ಷಕರಿದ್ದರೂ ದೈಹಿಕ ಶಿಕ್ಷಕರ ಭಾಗ್ಯವೇ ಈ ಶಾಲೆಗೆ ದೊರೆತಿಲ್ಲ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನ ಹರಿಸದಿರುವುದು ಬೇಸರದ ಸಂಗತಿಯಾಗಿದೆ. ಆಲನಹಳ್ಳಿ ಸುತ್ತಲೂ ಇರುವ ಕೊರ್ಲಹೊಸಳ್ಳಿ, ಭೂತನಹಳ್ಳಿ ಕೊಪ್ಪಲು, ಹಕ್ಕೆಮಾಳ ಸೇರಿದಂತೆ 5 ಗ್ರಾಮಗಳ ಮಕ್ಕಳ ಶಿಕ್ಷಣಕ್ಕೆ ಈ ಶಾಲೆಯೇ ಆಧಾರವಾಗಿದ್ದು, ಶಿಕ್ಷಣ ಮತ್ತು ಕ್ರೀಡೆಯಲ್ಲಿ ಉತ್ತಮ ಸ್ಥಾನದಲ್ಲಿರುವ ಈ ಶಾಲೆಯ ಉಳಿವಿಗೆ ಗಮನ ಹರಿಸಬೇಕಿದ್ದು, ಅಗತ್ಯ ಮೂಲ ಸೌಲಭ್ಯಗೆ ಒದಗಿಸಲು ಶಾಸಕ ಕೆ.ಮಹದೇವ್ ಮುಂದಾಗಬೇಕಿದೆ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಜೆ.ಸ್ವಾಮಿ ಮನವಿ ಮಾಡಿದ್ದಾರೆ.

Translate »