ದೆಹಲಿ, ಕೇರಳ ಮಾದರಿ ರಾಜ್ಯದ ಸರ್ಕಾರಿ ಶಾಲೆ ಅಭಿವೃದ್ಧಿ
ಮೈಸೂರು

ದೆಹಲಿ, ಕೇರಳ ಮಾದರಿ ರಾಜ್ಯದ ಸರ್ಕಾರಿ ಶಾಲೆ ಅಭಿವೃದ್ಧಿ

June 27, 2019

ಬೆಂಗಳೂರು, ಜೂನ್ 26(ಕೆಎಂಶಿ)- ರಾಜ್ಯದ ಸರ್ಕಾರಿ ಶಾಲೆಗಳನ್ನು ದೆಹಲಿ ಹಾಗೂ ಕೇರಳ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.

ಇಲಾಖೆ ಅಧಿಕಾರ ವಹಿಸಿಕೊಂಡ ಎರಡು ದಿನಗಳಲ್ಲೇ ಅಧಿಕಾರಿಗಳ ಜೊತೆ ಸುದೀರ್ಘ ಸಮಾಲೋಚನೆ ನಡೆಸಿ, ಸುದ್ದಿಗಾರರಿಗೆ ಇಂದು ಮಾಹಿತಿ ನೀಡಿ ದರು. ಎರಡು ರಾಜ್ಯಗಳ ಮಾದರಿ ಶಾಲೆ ಗಳ ಕಾರ್ಯ ವೈಖರಿಯನ್ನು ಪರಿಶೀಲಿ ಸಲು ನಾನೇ ಖುದ್ದಾಗಿ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು. ಈ ಶಾಲೆಗಳು ರಾಷ್ಟ್ರಕ್ಕೆ ಮಾದರಿಯಾಗಿವೆ. ನಮ್ಮ ಶಾಲೆಗಳ ಅಭಿವೃದ್ಧಿಗೆ ವಾರ್ಷಿಕ ಸಾವಿರಾರು ಕೋಟಿ ರೂ. ವೆಚ್ಚ ಮಾಡುತ್ತಿದ್ದೇವೆ, ಆದರೆ ಮಾದರಿ ಶಾಲೆಗಳ ಗುಣ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗಿಲ್ಲ. ಖಾಸಗಿ ಆಂಗ್ಲ ಶಾಲೆಗಳಿಗಿಂತ ದೆಹಲಿ, ಕೇರಳದ ಸರ್ಕಾರಿ ಶಾಲೆಗಳು ಒಂದು ಹೆಜ್ಜೆ ಮುಂದಿವೆ. ಆದ್ದ ರಿಂದಲೇ ಆ ರಾಜ್ಯಗಳು ಶೇಕಡಾ 100ರಷ್ಟು ಸಾಕ್ಷರತೆ ಹೊಂದಿವೆ. ರಾಜ್ಯದ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಉತ್ತಮ ದರ್ಜೆಗೆ ಏರಿಸುವ ಅನಿವಾರ್ಯತೆ ಇದ್ದು, ಈ ಅಂಶವನ್ನು ಗಮನ ದಲ್ಲಿಟ್ಟುಕೊಂಡು ಹೊಸ ಹೆಜ್ಜೆ ಇಟ್ಟಿದ್ದೇವೆ. ಗ್ರಾಮೀಣ ಪ್ರದೇಶಗಳ ಜನರೂ ಖಾಸಗಿ ಶಾಲೆಗಳ ಕಡೆ ಮಾರು ಹೋಗುತ್ತಿದ್ದು, ಮಕ್ಕಳನ್ನು ಆ ಶಾಲೆಗಳಿಗೆ ಸೇರಿಸುವುದು ಒಂದು ರೀತಿಯಲ್ಲಿ ಫ್ಯಾಷನ್ ಆಗಿದೆ ಎಂದು ಅವರು ವಿಷಾದಿಸಿದರು. ಇದೇ ಕಾರಣಕ್ಕಾಗಿ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಳ ಮಾಡುವ ಅಗತ್ಯವಿದ್ದು ಹೊಸ ಕಟ್ಟಡಗಳು, ಶೌಚಾಲಯ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಅನಿವಾರ್ಯತೆ ಇದೆ. ಈ ವರ್ಷ ಇದೇ ಕಾರ್ಯಕ್ಕಾಗಿ 1200 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇದೇ ರೀತಿ ಕಾರ್ಪೊರೇಟ್ ಸೆಕ್ಟರ್‍ನ ನೆರವು ಪಡೆದು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನ ಮುಂದುವರಿದಿದ್ದು ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಹಲವು ಕಾರ್ಪೊ ರೇಟ್ ಕಂಪನಿಗಳು ಸರ್ಕಾರಿ ಶಾಲೆಯನ್ನು ದತ್ತು ಪಡೆದಿವೆ ಎಂದರು.

Translate »