ಡಿಸೆಂಬರ್ ಗೆ ದೋಸ್ತಿ ಖತಂ?
ಮೈಸೂರು

ಡಿಸೆಂಬರ್ ಗೆ ದೋಸ್ತಿ ಖತಂ?

June 27, 2019

ಬೆಂಗಳೂರು, ಜೂ. 26 (ಕೆಎಂಶಿ)-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಡಿಸೆಂಬರ್‍ನಲ್ಲಿ ಅಂತ್ಯಗೊಳಿಸಿ, ಮಧ್ಯಂತರ ಚುನಾವಣೆಗೆ ತೆರಳಲು ರಾಜ್ಯ ಪ್ರದೇಶ ಕಾಂಗ್ರೆಸ್ ಮುಂದಾಗಿದೆ.

ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಕೆ.ಸಿ.ವೇಣುಗೋಪಾಲ್, ಸಿಎಲ್‍ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಾಯಕತ್ವದಲ್ಲಿ ಪಕ್ಷದ ಹಿರಿಯ ನಾಯಕರ ಜೊತೆ ಪಕ್ಷ ಸಂಘಟನೆ ಕುರಿತಂತೆ ಇಂದು ನಡೆದ ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಗಿದೆ. ಕುಮಾರಸ್ವಾಮಿ ಅವರಿಗೆ ಪೂರ್ಣ ಅಧಿಕಾರಾವಧಿ ನೀಡಿದರೆ, ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ನಿರ್ನಾಮ ಮಾಡುತ್ತಾರೆ. ಅವರು ಲೋಕಸಭಾ ಚುನಾವಣೆಯಲ್ಲಿ ಮಾಡಿದ ವೆಚ್ಚ ದಂಗುಬಡಿಸಿದೆ. ಅವರಿಗೆ ಪೂರ್ಣ ಅವಧಿ ಅಧಿಕಾರ ನೀಡಿದರೆ, ಕಾಂಗ್ರೆಸ್ ಕತೆ ಮುಗಿಯುತ್ತದೆ. ಹಣದಿಂದ ಬಿಜೆಪಿ ಜೊತೆ ನೇರವಾಗಿ ಸೆಣಸುತ್ತಾರೆ.

ಒಂದೆಡೆ ಆರ್ಥಿಕ ಸಂಪನ್ಮೂಲ ಕ್ರೊಢೀಕರಿಸಿಕೊಂಡರೆ, ಮತ್ತೊಂದೆಡೆ ಸರ್ಕಾರವನ್ನು ಜನರ ಬಳಿಗೆ ತೆಗೆದುಕೊಂಡು ಹೋಗಿ ನಾಯಕ ರಾಗಲು ಹೊರಟಿದ್ದಾರೆ. ಕುಮಾರಸ್ವಾಮಿ ಕಳೆದ ಎರಡು-ಮೂರು ವಾರಗಳಿಂದ ಆಡಳಿತಕ್ಕೆ ಚುರುಕು ಕೊಟ್ಟು, ಸರ್ಕಾರದ ಪಥ ವನ್ನೇ ಬದಲಾಯಿಸುತ್ತಿದ್ದಾರೆ. ಅಲ್ಲದೆ, ಗ್ರಾಮ ವಾಸ್ತವ್ಯ ಹೂಡುವ ಮೂಲಕ ಜನರ ಮನೆ ಬಾಗಿಲಿಗೆ ತೆರಳುತ್ತಿದ್ದಾರೆ, ಇದು ನಮಗೆ ಕಷ್ಟವಾಗಬಹುದು ಎಂದಿದ್ದಾರೆ. ಇದನ್ನು ಮನಗಂಡು ಕುಮಾರ ಸ್ವಾಮಿಗೆ ಹೆಚ್ಚು ಅವಧಿ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಕೂಡದು. ಈಗಲೇ ಚುನಾವಣೆಗೆ ತೆರಳಿದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನಾವು ವಿರೋಧಿ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಅದರ ಬದಲು ಸಮ್ಮಿಶ್ರ ಸರ್ಕಾರಕ್ಕೆ ಇನ್ನೂ ಆರು ತಿಂಗಳ ಅವಕಾಶ ನೀಡಿ, ಪಕ್ಷ ಸಂಘಟನೆ ಮಾಡಿಕೊಂಡು ಚುನಾವಣೆಗೆ ತೆರಳಲು ಸಿದ್ಧರಾಗೋಣ ಎಂಬ ಅಭಿಪ್ರಾಯಕ್ಕೆ ಬಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಇಷ್ಟೊಂದು ಹೀನಾಯವಾಗಿ ಸೋಲಲು ಜೆಡಿಎಸ್‍ನೊಂದಿಗಿನ ಮೈತ್ರಿಯೇ ಕಾರಣ ಎಂದು ಕೆಲವರು ವಾದ ಮಾಡಿದರೆ, ಮತ್ತೆ ಕೆಲವರು ಪಕ್ಷದ ಅಹಿಂದ ಮತಗಳು ಈ ಬಾರಿ ಬಿಜೆಪಿ ಕೈ ಹಿಡಿದಿವೆ ಎಂದರು. ಲಿಂಗಾಯತರ ಪಕ್ಷ ಎಂದು ಹಣೆಪಟ್ಟಿ ಕಟ್ಟಿದ್ದ ಬಿಜೆಪಿ ಇಂದು ಅಹಿಂದ ಪಕ್ಷವಾಗಿ ಮಾರ್ಪಟ್ಟಿದೆ, ಉತ್ತರ ಕರ್ನಾಟಕ ಭಾಗದಲ್ಲಿ 15 ರಿಂದ 20 ಪರ್ಸೆಂಟ್ ವೀರಶೈವ ಮತಗಳು ನಮಗೆ ಲಭ್ಯವಾಗುತ್ತಿತ್ತು, ಆದರೆ ಈ ಚುನಾವಣೆಯಲ್ಲಿ ಸಾರಾಸಗಟಾಗಿ ಬಿಜೆಪಿಗೆ ಬಿದ್ದಿವೆ. ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಂಡ ಒಂದೇ ಕಾರಣಕ್ಕೆ ನಮ್ಮನ್ನು ಅಹಿಂದ ಮತ್ತು ವೀರಶೈವರು ದೂರವಿಟ್ಟರು. ಒಂದು ವೇಳೆ ಫ್ರೆಂಡ್ಲಿ ಫೈಟ್ ನಡೆದಿದ್ದರೆ, ಎರಡೂ ಪಕ್ಷಗಳಿಗೂ ಲಾಭವಾ ಗುತ್ತಿತ್ತು, ಇತ್ತ ಪಕ್ಷದ ಮುಖಂಡರುಗಳು ಗಮನಹರಿಸಲೇ ಇಲ್ಲ.

ಎಲ್ಲಕ್ಕೂ ಮಿಗಿಲಾಗಿ ಉಭಯ ಪಕ್ಷದ ಕೆಲವು ನಾಯಕರು ಬೆನ್ನಿಗೆ ಚೂರಿ ಹಾಕಿದ್ದೂ ಸೋಲಿಗೆ ಕಾರಣ ಎಂದು ಖಾರವಾಗಿ ತಿಳಿಸಿದ್ದಾರೆ. ಇದಕ್ಕೆ ಪರ್ಯಾಯವಾಗಿ ನಾವು ಸಂಘಟನಾತ್ಮಕವಾಗಿ ರಾಜ್ಯಾದ್ಯಂತ ಕಾರ್ಯಕರ್ತರ ಸಭೆಗಳನ್ನು ಈಗಿನಿಂದಲೇ ನಡೆಸಿ, ಡಿಸೆಂಬರ್‍ಗೆ ಚುನಾವಣೆಗೆ ತಯಾರಾಗಬೇಕು. ಅಹಿಂದ ಮುಂದಿಟ್ಟುಕೊಂಡು ಸಭೆಗಳನ್ನು ಮಾಡಿದರೆ, ಅದು ಒಂದು ವರ್ಗ ಮತ್ತು ಒಬ್ಬ ನಾಯಕರಿಗೆ (ಸಿದ್ದ ರಾಮಯ್ಯ ಹೆಸರು ಪ್ರಸ್ತಾಪಿಸದೇ) ಪ್ರಯೋಜನವಾಗುತ್ತದೆ, ಇಂತಹ ಸಭೆಗಳು ಬೇಡ, ಪಕ್ಷದ ವತಿಯಿಂದಲೇ ಎಲ್ಲ ವರ್ಗದ ಸಂಘಟನೆ ಸಭೆ ನಡೆಯಲಿ ಎಂದು ವರಿಷ್ಠರನ್ನು ಒತ್ತಾಯಿಸಿದ್ದಾರೆ. ಪ್ರತಿ ಲೋಕಸಭಾ ಕ್ಷೇತ್ರದ ಸೋಲಿಗೆ ಕಾರಣಗಳನ್ನು ತಿಳಿದುಕೊಂಡಿರುವ ನಾಯಕರು, ವಿಧಾನಸಭಾ ಚುನಾ ವಣೆಯಲ್ಲಿ ಇದನ್ನು ಎದುರಿಸಲು ನಾವು ಯಾವ ಕಾರ್ಯತಂತ್ರ ರೂಪಿಸ ಬೇಕು ಎಂಬುದರ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್‍ಗೆ ಹೊಸ ಸ್ವರೂಪ ನೀಡುವಲ್ಲಿ ಯುವಕರು ಮತ್ತು ಸಮರ್ಥರಿಗೆ ಪಕ್ಷದ ಹುದ್ದೆಗಳನ್ನು ನೀಡಬೇಕೆಂಬ ಅನಿಸಿಕೆ ಹೊಂದಿ ದ್ದಾರೆ. ಇದೇ ಕಾರಣಕ್ಕೆ ಅಧ್ಯಕ್ಷ, ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ, ಉಳಿದ ಸಮಿತಿಗಳನ್ನು ವಿಸರ್ಜಿಸಲಾಗಿದೆ, ಹೊಸ ಕಾರ್ಯಕಾರಿ ಸಮಿತಿ ಹೇಗಿರಬೇಕು ಎಂಬುದರ ಬಗ್ಗೆ ಅಭಿಪ್ರಾಯವನ್ನು ಪಡೆದುಕೊಂಡಿದ್ದಾರೆ.

Translate »