ಕೊಡಗಿನಲ್ಲಿ ಚತುಷ್ಪಥ ಹೆದ್ದಾರಿ, ರೈಲ್ವೆ ಮಾರ್ಗ ಅನುಷ್ಠಾನ ವಿರೋಧಿಸಿ ಡಿ.8ರಂದು ಬೃಹತ್ ರ್ಯಾಲಿ
ಕೊಡಗು

ಕೊಡಗಿನಲ್ಲಿ ಚತುಷ್ಪಥ ಹೆದ್ದಾರಿ, ರೈಲ್ವೆ ಮಾರ್ಗ ಅನುಷ್ಠಾನ ವಿರೋಧಿಸಿ ಡಿ.8ರಂದು ಬೃಹತ್ ರ್ಯಾಲಿ

December 4, 2018

ಮಡಿಕೇರಿ: ಕೊಡಗು ಜಿಲ್ಲೆಯನ್ನು ವಿನಾಶ ಮಾಡಲು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಮಾರ್ಗಗಳನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗುತ್ತಿದ್ದು, ಈ ಯೋಜನೆ ವಿರೋಧಿಸಿ ಡಿ.8 ರಂದು ಮಡಿಕೇರಿಯಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ ತಿಳಿಸಿದೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಸಂಚಾಲಕ ಕರ್ನಲ್ ಸಿ.ಪಿ. ಮುತ್ತಣ್ಣ, ಮೈಸೂರು -ಕುಶಾಲನಗರ-ಮಡಿಕೇರಿ ಮೂಲಕ 4 ಪಥಗಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲು ಕೇಂದ್ರ ಸರಕಾರ ಯೋಜನೆ ರೂಪಿಸಿದೆ. ಅದ ರೊಂದಿಗೆ 2 ರೈಲ್ವೆ ಮಾರ್ಗಗಳ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಈ ಯೋಜನೆಗೆ 10 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿ ಟ್ಟಿದೆ. ಈ 2 ಯೋಜನೆಗಳು ಕೊಡಗು ಜಿಲ್ಲೆ ಯನ್ನು ಸರ್ವನಾಶ ಮಾಡಲಿದ್ದು, ಈ ಬಗ್ಗೆ ಜಿಲ್ಲೆಯ ಜನರು ಹೋರಾಟ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಮಾರಕ ಯೋಜನೆಯನ್ನು ವಿರೋಧಿಸಿ ಡಿ.8 ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಿಂದ ಗಾಂಧಿ ಮೈದಾನ ದವರೆಗೆ ಬೃಹತ್ ರ್ಯಾಲಿ ಆಯೋಜಿಸಿರುವುದಾಗಿ ತಿಳಿಸಿದರು. 2015-16ರಲ್ಲಿ ಮೈಸೂರುನಿಂದ ಕೋಜಿಕೋಡ್‍ಗೆ 400 ಕೆ.ವಿ. ಹೈಟೆನ್ಷನ್ ವಿದ್ಯುತ್ ಮಾರ್ಗ ಅಳವಡಿಸಲು ಜಿಲ್ಲೆಯಲ್ಲಿ 5400 ಮರಗಳನ್ನು ಕಡಿದು ಹಾಕಲಾಗಿದೆ. 2005 ರಿಂದ 2015ರ 10 ವರ್ಷಗಳ ಅವಧಿಯಲ್ಲಿ ಕೊಡಗಿನ 2800 ಎಕರೆ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಪರಿವರ್ತಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಹವಾಮಾನ ಮತ್ತು ಪ್ರಕೃತಿಯಲ್ಲಿ ಭಾರಿ ಏರುಪೇರುಗಳಾಗಿದ್ದು, ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಕರ್ನಲ್ ಮುತ್ತಣ್ಣ ಹೇಳಿದರು.

ಮಡಿಕೇರಿ ಮತ್ತು ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ದಲ್ಲಿ ನೂರಾರು ಮಂದಿ ನಿರ್ಗತಿಕರಾಗಿದ್ದಾರೆ. ಇಂತಹ ಕುಟುಂಬಗಳ ನೆರವಿಗೆ ಮುಂದಾಗದ ಸರಕಾರಗಳು ಮಾರಕ ಯೋಜನೆಗಾಗಿ 10 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಯೋಜನೆ ಜಾರಿಗೆ ಭಾರಿ ಉತ್ಸುಕತೆ ತೋರುತ್ತಿದೆ ಎಂದು ಆಪಾದಿಸಿದರು. ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತರ ಬದುಕು ಕಟ್ಟಿಕೊಡಲು ಆಸಕ್ತಿ ಏಕೆ ತೋರಲಿಲ್ಲ ಎಂದು ಪ್ರಶ್ನಿಸಿದ ಕರ್ನಲ್ ಮುತ್ತಣ್ಣ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಉತ್ಸುಕತೆ ತೋರುತ್ತಿರುವ ಹಿಂದೆ ಬಹು ಕೋಟಿ ಕಮಿಷನ್ ದಂಧೆಯ ಸತ್ಯ ಅಡಗಿದೆ ಎಂದು ಆರೋಪಿಸಿದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನಿಯ ಮಾವಳಿಯಂತೆ 10 ಸಾವಿರ ವಾಹನಗಳು ಪ್ರತಿನಿತ್ಯ ಸಂಚರಿಸಿದರೆ ಮಾತ್ರವೇ ಆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಬಹುದು. ಆದರೆ ಮೈಸೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇರಳ ಸರಕಾರ ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ ಎಂದೂ ಕರ್ನಲ್ ಮುತ್ತಣ್ಣ ದೂರಿದರು. ಈ ಹಿಂದೆ ಮೈಸೂರಿನಲ್ಲಿ ರೈಲ್ವೆ ವಿರೋಧಿ ಪ್ರತಿಭಟನೆ ನಡೆಸಿದ ಸಂದರ್ಭ ಸಂಸದ ಪ್ರತಾಪ್‍ಸಿಂಹ ಒಂದು ಮರವನ್ನು ಕೂಡ ಕಡಿಯದೆ ಹೆದ್ದಾರಿ ನಿರ್ಮಿಸುವುದಾಗಿ ಹೇಳಿದ್ದರು. ಆದರೆ ಮರ ಕಡಿಯದೆ 4 ಪಥÀದ ರಸ್ತೆಯನ್ನು ಹೇಗೆ ನಿರ್ಮಿಸಲು ಸಾಧ್ಯ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕೆಂದು ಕರ್ನಲ್ ಮುತ್ತಣ್ಣ ಆಗ್ರಹಿಸಿದರು.

ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆಯ ಅಧ್ಯಕ್ಷ ರಾಜೀವ್ ಬೋಪಯ್ಯ ಮಾತನಾಡಿ, ರೈಲು ಮಾರ್ಗ ಮತ್ತು ಚತುಷ್ಪಥ ಹೆದ್ದಾರಿ ನಿರ್ಮಾಣವಾದರೆ ಕೊಡಗು ಜಿಲ್ಲೆ ಸಂಪೂರ್ಣ ಅಭಿವೃದ್ಧಿಯಾಗಲಿದೆ ಎಂಬ ಭಾವನೆ ಜಿಲ್ಲೆಯ ಕೆಲವು ಜನರಲ್ಲಿದೆ. ಆದರೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಇಂದಿಗೂ ರಸ್ತೆ, ವಿದ್ಯುತ್, ಕುಡಿಯುವ ನೀರು ಮಾತ್ರವಲ್ಲದೆ ಆಸ್ಪತ್ರೆಗಳಲ್ಲಿ ವೈದ್ಯರು ಲಭ್ಯವಿಲ್ಲ. ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರನ್ನು ತಿರುಗಿಯೂ ನೋಡದ ಸರಕಾರಗಳು ಜಿಲ್ಲೆಯನ್ನು ನಾಶ ಮಾಡುವ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೈಟೆನ್ಷನ್ ಮಾರ್ಗ ನಿರ್ಮಿಸುವ ಸಂದರ್ಭ ಕೊಡಗಿಗೆ ಕರೆಂಟ್ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಕೊಡಗಿನಲ್ಲಿ ಹೈಟೆನ್ಷನಿಂದ ಒಂದು ಬಲ್ಬು ಕೂಡ ಉರಿಯಲಿಲ್ಲ. ಕರಿಕೆಯಲ್ಲಿ ಜಲವಿದ್ಯುತ್ ಘಟಕ ನಿರ್ಮಿಸಿ ಸುಳ್ಯಕ್ಕೆ ವಿದ್ಯುತ್ ನೀಡಲಾಗುತ್ತಿದೆ. ಈಗ ನಿರ್ಮಿಸಲು ಹೊರಟಿ ರುವ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೇ ಮಾರ್ಗ ದಿಂದ ಕೊಡಗಿಗೆ ಯಾವುದೇ ಪ್ರಯೋಜನವಿಲ್ಲ. ಜಿಲ್ಲೆಯ ಪರಿಸರ, ಕಾಫಿ, ಕರಿಮೆಣಸು, ಏಲಕ್ಕಿ ಬೆಳೆಗಳನ್ನು ನಾಶ ಮಾಡಲು ಹುನ್ನಾರ ನಡೆಸಲಾ ಗುತ್ತಿದ್ದು, ಇದರ ಹಿಂದೆ ಕೇರಳ ರಾಜ್ಯದ ಕೈವಾಡ ಅಡಗಿದೆ ಎಂದು ರಾಜೀವ್ ಬೋಪಯ್ಯ ಆರೋಪಿಸಿದರು. ಸಂಸದ ಪ್ರತಾಪ್ ಸಿಂಹ ಭೂಗರ್ಭ ಶಾಸ್ತ್ರಜ್ಞರು, ಪರಿಸರ ತಜ್ಞರು ಮತ್ತು ಜಿಲ್ಲೆಯ ಸಂಘ-ಸಂಸ್ಥೆಗಳ ಪ್ರಮುಖರನ್ನು ಒಂದೆಡೆ ಸೇರಿಸಿ ಸಭೆ ನಡೆಸಲಿ. ಆ ಸಭೆಯಲ್ಲಿ ಯೋಜನೆಯ ಕುರಿತು ಮಾಹಿತಿ ನೀಡಿ ಸಾಧಕ-ಬಾಧಕಗಳನ್ನು ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸಲಿ ಎಂದು ರಾಜೀವ್ ಬೋಪಯ್ಯ ಸಲಹೆ ನೀಡಿದರು.

ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಮಾತನಾಡಿದರು. ಸುದ್ದಿಗೋಷ್ಟಿಯಲ್ಲಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಸದಸ್ಯ ರಾಯ್ ಬೋಪಣ್ಣ ಉಪಸ್ಥಿತರಿದ್ದರು.

Translate »