ಹಾರಂಗಿ ಬಳಿ ಅಕ್ರಮ ಶ್ರೀಗಂಧ ಸಾಗಾಟ ಮಾಲು ಸಮೇತ ವಾಹನ ವಶ; ಆರೋಪಿಗಳು ಪರಾರಿ
ಕೊಡಗು

ಹಾರಂಗಿ ಬಳಿ ಅಕ್ರಮ ಶ್ರೀಗಂಧ ಸಾಗಾಟ ಮಾಲು ಸಮೇತ ವಾಹನ ವಶ; ಆರೋಪಿಗಳು ಪರಾರಿ

December 4, 2018

ಕುಶಾಲನಗರ:  ಸಮೀಪದ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಶ್ರೀಗಂಧದ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿ ಗಳು ಕಾರ್ಯಾಚರಣೆ ನಡೆಸಿ ಮಾಲು ಸಮೇತ ಬೈಕ್ ವಶಪಡಿಸಿಕೊಂಡಿದ್ದಾರೆ.

ಅತ್ತೂರು ಶಾಖೆಯ ಗುಡ್ಡೆಹೊಸೂರು – ಹಾರಂಗಿಗೆ ಹೋಗುವ ರಸ್ತೆಯಲ್ಲಿ ಬೈಕ್ ನಲ್ಲಿ ಶ್ರೀಗಂಧದ ತುಂಡುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಾಗಿಸುತ್ತಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದಿಗಳು ದಾಳಿ ಮಾಡಿದಾಗ ಶ್ರೀಗಂಧದ ತುಂಡುಗಳನ್ನು ಹಾಗೂ ಬೈಕ್ ಅನ್ನು ಬಿಟ್ಟು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳನ್ನು ಹೇರೂರು ಗ್ರಾಮದ ದಿ. ಕುಮಾರ ಎಂಬುವರ ಮಗ ಮಧು (33 ವರ್ಷ) ಹಾಗೂ ಕೋಡಿಮನೆ ಉತ್ತಯ್ಯ ಎಂಬುವರ ಮಗ ಅನ್ನಿ ಆಲಿಯಾಸ್ ರವೀದ್ರ (32 ವರ್ಷ) ಎಂದು ಗುರುತಿಸಲಾಗಿದೆ. ರೂ.. 1 ಲಕ್ಷ ಮೌಲ್ಯದ 20 ಕೆ.ಜಿ.ಶ್ರೀಗಂಧ ಹಾಗೂ ಬೈಕ್ ಅನ್ನು ವಶಪಡಿಸಿಕೊಂಡಿರುವ ಅರಣ್ಯ ಸಿಬ್ಭಂದಿಗಳು ಈ ಇಬ್ಬರ ವಿರುದ್ಧ ಕೇಸು ದಾಖಲು ಮಾಡಿಕೊಂಡಿದ್ದಾರೆ. ಪರಾರಿ ಯಾಗಿರುವ ಆರೋಪಿಗಳ ಪತ್ತೆಗೆ ಅರಣ್ಯ ಸಿಬ್ಬಂದಿಗಳು ಕ್ರಮ ಕೈಗೊಂಡಿದ್ದಾರೆ. ಕುಶಾಲ ನಗರ ವಲಯ ಅರಣ್ಯಾಧಿಕಾರಿ ಸಿ.ಆರ್. ಅರುಣ್ ಮಾರ್ಗದರ್ಶನದಲ್ಲಿ ಅತ್ತೂರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ, ಅರಣ್ಯ ರಕ್ಷಕರಾದ ವಿ.ಎಸ್.ಮಂಜೇಗೌಡ, ಮಹಾಂತೇಶ್, ಅರಣ್ಯ ವೀಕ್ಷಕ ಗಣೇಶ್, ಆರ್.ಆರ್.ಟಿ. ತಂಡದ ಬಿ.ವಿ.ರವಿ ಮತ್ತು ಪದ್ಮ ನಾಭ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »