ನಾಲೆಗಳಿಗೆ ನೀರು; ವಿವಿಧೆಡೆ ಭತ್ತದ ಕೃಷಿ ಚುರುಕು
ಹಾಸನ

ನಾಲೆಗಳಿಗೆ ನೀರು; ವಿವಿಧೆಡೆ ಭತ್ತದ ಕೃಷಿ ಚುರುಕು

August 6, 2018

ರಾಮನಾಥಪುರ: ಸತತ ಮಳೆಯಿಂದ ಹೇಮಾವತಿ, ಹಾರಂಗಿ ಜಲಾಶಯ ಭರ್ತಿಯಾಗಿದ್ದು, ನಾಲೆಗಳಿಗೆ ನೀರು ಬಿಟ್ಟಿರುವುದರಿಂದ ಅರಕಲಗೂಡಿನ ವಿವಿಧ ಹೋಬಳಿಗಳ ವ್ಯಾಪ್ತಿಗಳಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ರೈತರ ಭತ್ತ ಬೆಳೆಯುವ ಆಸೆ ಚಿಗುರೊಡೆದಿದೆ.

ನಾಲೆಗಳಿಗೆ ಹರಿದ ನೀರು: ಕೊಡಗು ಸೇರಿದಂತೆ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೊಡಗಿನ ಹಾರಂಗಿ ಮತ್ತು ಗೊರೂರಿನ ಹೇಮಾವತಿ ಜಲಾಶಯ ಭರ್ತಿಯಾಗಿದ್ದು, ಕಟ್ಟೇಪುರ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಬಿಡಲಾಗಿದೆ. ಹೀಗಾಗಲೇ ಕೆಲವು ಕೆರೆ-ಕಟ್ಟೆಗಳು ತುಂಬಿವೆ. ಇದ ರಿಂದ ತಾಲೂಕಿನ ರಾಮನಾಥಪುರ ಕೊಣನೂರು, ದೊಡ್ಡಮಗ್ಗೆ ಹೋಬಳಿ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುವ ರೈತರ ಆಸೆ ಹೆಚ್ಚಿಸಿದೆ. ಬಿತ್ತನೆ, ನಾಟಿ ಕಾರ್ಯವೂ ಚುರುಕುಗೊಂಡಿದೆ.

ಭರದಿಂದ ಸಾಗಿದ ಕೃಷಿ ಕಾರ್ಯ: ಕಳೆದ ವರ್ಷ ಹಾರಂಗಿ ಜಲಾಶಯ, ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆಯ ಜಲಾಶಯಗಳಲ್ಲಿ ನೀರಿನ ಕೊರತೆಯಿಂದಾಗಿ ಜಲಾಶಯಗಳ ಕಾಲುವೆಗಳ ಅಚ್ಚುಕಟ್ಟು ಭಾಗದ ಭತ್ತದ ಜಮೀನುಗಳಿಗೆ ಸಮರ್ಪಕವಾಗಿ ನೀರು ದೊರೆಯದೆ ಸಾವಿರಾರು ಎಕರೆಯಲ್ಲಿ ನಾಟಿ ಮಾಡಿದ್ದ ಭತ್ತದ ಬೆಳೆಯು ಒಣಗಿ ರೈತರು ಕಂಗಾಲಾಗಿದ್ದರು. ಜಾನುವಾರುಗಳಿಗೆ ಮೇವಿಗೂ ತತ್ವಾರವಾಗಿತ್ತು. ಆದರೆ ಈ ಬಾರಿ ಅವಧಿಗೂ ಮುನ್ನ ಜಲಾಶಯಗಳು ಭರ್ತಿಯಾಗಿರುವುದರಿಂದ ಭತ್ತದ ಕೃಷಿಗೆ ಭೂಮಿ ಹದಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಭತ್ತ ಕೃಷಿಗೆ ಉತ್ತಮ ವಾತಾವರಣ: ಅರಕಲಗೂಡು ತಾಲೂಕಿನ ವ್ಯಾಪ್ತಿಯಲ್ಲಿ ಅನೇಕ ವರ್ಷಗಳ ನಂತರ ವಾಡಿಕೆಗಿಂತಲೂ ಹೆಚ್ಚಿನ ಮಳೆಯು ಸುರಿಯುತ್ತಿರುವುದದಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಈಗಾಗಲೇ ಬಿತ್ತನೆ ಮಾಡಿದ್ದ ಹೊಗೆಸೊಪ್ಪು, ನೆಲಗಡಲೆ, ಅಲ ಸಂದೆ ಮತ್ತು ಆಲೂಗೆಡ್ಡೆ ಬೆಳೆ ಹಾನಿಯಾಗಿದೆ. ಆದರೆ ಭತ್ತದ ಕೃಷಿಗೆ ಈ ಬಾರಿ ಉತ್ತಮ ವಾತಾವರಣವಿರು ವುದರಿಂದ ಸಸಿಮಡಿ ಸಿದ್ಧಪಡಿಸಿ ಕೊಂಡು ಕೃಷಿಕರು ಉತ್ಸಾಹದಿಂದ ನಾಟಿ ಕಾರ್ಯಕ್ಕೆ ತಯಾರಾಗುತ್ತಿದ್ದಾರೆ.

ರಾಜಮುಡಿ, ರಾಜಭೋಗಕ್ಕೆ ಬೇಡಿಕೆ: ಕಳೆದ ವರ್ಷ ನಾಲೆ ಗಳಲ್ಲಿ ಅಗತ್ಯದಷ್ಟು ನೀರು ಹರಿಯದ ಕಾರಣ ಭತ್ತದ ಬೆಳೆ ವಿಫಲವಾಗಿ ಭತ್ತವೂ ಇಲ್ಲ ಹುಲ್ಲು ಇಲ್ಲದೇ ದನಕರುಗಳ ಮೇವಿಗೂ ಪರದಾಡಿದ್ದನ್ನು ಮನಗಂಡಿರುವ ಈ ಭಾಗದ ರೈತರು ತಮ್ಮ ಜಮೀನಿನಲ್ಲಿ ಎಲ್ಲಾ ಭತ್ತದ ತಳಿಗಳಿಗಿಂತ ಹೆಚ್ಚು ಉದ್ದವಾಗಿ ಬೆಳೆಯುವ ಮತ್ತು ಹೆಚ್ಚು ಬೇಡಿಕೆಯ ಅಕ್ಕಿಯ ಉತ್ಪಾದನೆಯ ರಾಜಮುಡಿ ಮತ್ತು ರಾಜ ಭೋಗ ಬಿತ್ತನೆ ಮಾಡಲು ಉತ್ಸುಕರಾಗಿದ್ದು, ಹೆಚ್ಚಿನ ಬೆಲೆಯನ್ನು ತೆತ್ತು ಬೀಜ ಖರೀದಿಸಿ ಸಸಿ ಮಡಿ ಸಿದ್ಧಪಡಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ರಾಜಮುಡಿ, ರಾಜಭೋಗ ಭತ್ತದ ಬೀಜಕ್ಕೆ ಬೇಡಿಕೆ ಹೆಚ್ಚಿದೆ.

ನಾಲೆ ಕೊನೆ ಭಾಗಕ್ಕೆ ನೀರು ಕೊರತೆ: ರಾಮನಾಥಪುರ ಕೊಣನೂರು, ದೊಡ್ಡಮಗ್ಗೆ ಹೋಬಳಿ ವ್ಯಾಪ್ತಿ ಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುವ ರೈತರು ಅನೇಕ ವಿವಿಧ ಸಮಸ್ಯೆಗಳ ನಡುವೆಯು ಭತ್ತ ಬೆಳೆಯಲು ಉತ್ಸುಕರಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರ ಗದ್ದೆಗಳಿಗೆ ನಾಲೆಯ ಕೊನೆ ಭಾಗದಲ್ಲಿ ನೀರಿನ ಕೊರತೆ ಎದುರಾಗದಂತೆ ಸಂಬಂಧಪಟ್ಟವರು ಗಮನಹರಿಸಿದರೆ ಅನುಕೂಲವಾಗಲಿದೆ. ಅಂತೂ ಇಂತು ವರುಣನ ಕೃಪೆಯಿಂದ ಈ ಬಾರಿ ಜಲಾಶಯಗಳು ತುಂಬಿದ್ದು, ನಾಲೆಗಳಿಗೆ ನೀರು ಹರಿಸುತ್ತಿರುವುದರಿಂದ ಭತ್ತ ಬೆಳೆಯುವ ರೈತರು ಸಂತಸಗೊಂಡಿದ್ದಾರೆ.

Translate »