ಮಳೆಗೆ ಮುನ್ನ ಆಗಸದಲ್ಲೊಂದು ಕೌತುಕತೆ!
ಮೈಸೂರು

ಮಳೆಗೆ ಮುನ್ನ ಆಗಸದಲ್ಲೊಂದು ಕೌತುಕತೆ!

November 18, 2021

ಮೈಸೂರು,ನ.17(ಎಂಕೆ)-ನೀಲಿ ಆಕಾಶದಲ್ಲಿ ಕೆಂಬಣ್ಣದ ಮೇಘ ಮಾಲೆ, ಕೆಲ ಹೊತ್ತಲ್ಲೆ ಸುರಿಸಿತು ಭಾರೀ ಮಳೆ… ಮುಸ್ಸಂಜೆ ವೇಳೆಯಲ್ಲಿ ಕ್ಯಾಮರಾ ಕಣ್ಣಿಗೆ ಕಂಡದ್ದು ಮನಮೋಹಕ ದೃಶ್ಯ…!

ಹಲವಾರು ದಿನಗಳಿಂದ ಮೈಸೂರಿನಲ್ಲಿ ಸುರಿಯುತ್ತಿರುವ ಮಳೆ ಬುಧವಾರವೂ ಮುಂದುವರೆದಿದ್ದು, ಮಳೆ ಆರಂಭಕ್ಕೂ ಮುನ್ನ ಆಕಾಶದಲ್ಲಿ ಕಂಡ ಕೆಂಬಣ್ಣ ನೋಡುಗರ ಕಣ್ಮನ ಸೆಳೆಯಿತು. ಮಳೆಗಾಲದಲ್ಲಿ ಆಗಾಗ ಕಾಣುವ ‘ಕಾಮನಬಿಲ್ಲು’, ಧ್ರುವ ಪ್ರದೇಶಗಳಲ್ಲಿ ಕಾಣುವ ‘ಆರೋರ’(ಆಗಸದಲ್ಲಿ ಕಾಣಬರುವ ವರ್ಣರಂಜಿತ ಬೆಳಕು) ನೋಡುವುದೇ ಆನಂದ.

ಸೂರ್ಯನ ಬೆಳಕಿಗೆ ಏಳು ಬಣ್ಣಗಳಿದ್ದು, ಮೋಡಗಳಿಂದ ಸುರಿಯುವ ಮಳೆ ನೀರು ಬಣ್ಣಗಳನ್ನು ಚದುರಿಸಿದಾಗ ಏಳು ಬಣ್ಣಗಳು ಬೇರ್ಪಟ್ಟು ‘ಕಾಮನ ಬಿಲ್ಲು’ ಮಾರ್ಪಡುತ್ತದೆ. ಆರೋರಾ ಧ್ರುವಪ್ರದೇಶಗಳಲ್ಲಿ ರಾತ್ರಿಯ ಹೊತ್ತು ಆಗಸದಲ್ಲಿ ಕಾಣಬರುವ ವರ್ಣರಂಜಿತ ಬೆಳಕಿನಾಟ. ಇದೊಂದು ನೈಸ ರ್ಗಿಕ ವಿದ್ಯಮಾನವಾಗಿದೆ. ಉತ್ತರ ಧ್ರುವ ಪ್ರದೇಶದಲ್ಲಿ ಕಾಣುವ ಇಂತಹ ಬಣ್ಣದ ಬೆಳಕಿನಾಟವನ್ನು ಆರೋರಾ ಬೋರಿಯಾ ಲಿಸ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಆರೋರಾ ಬೋರಿಯಾಲಿಸ್ ಹಸಿರು ಬಣ್ಣದ ಹೊಳಪಿನೊಂದಿಗೆ ಕೂಡಿರು ತ್ತದೆ. ಕೆಲವೊಮ್ಮೆ ಕೆಂಪು ಬಣ್ಣವು ಸಹ ಇದರಲ್ಲಿರುವುದುಂಟು.

ಮೊದಲ ನೋಟಕ್ಕೆ ಇದು ಬೇರ್ಯಾವುದೋ ದಿಕ್ಕಿನಲ್ಲಿ ಜರಗು ತ್ತಿರುವ ಸೂರ್ಯೋದಯದಂತೆ ಭಾಸವಾಗುವುದು. ಆರೋರಾ ಬೋರಿಯಾಲಿಸ್ ಅನ್ನು ನಾರ್ದರ್ನ್ ಲೈಟ್ಸ್ (ತೆಂಕಣ ಬೆಳಕು) ಎಂದು ಸಹ ಕರೆಯಲಾಗುತ್ತದೆ. ಇದನ್ನು ನೋಡಲು ಖಗೋಳ ವಿಜ್ಞಾನಿಗಳು ಮತ್ತು ಆಸಕ್ತರು ದ್ರೂವಿಯ ದೇಶ ಗಳಿಗೆ ಹೋಗಿ ಅಧ್ಯಯನವನ್ನು ನಡೆಸುತ್ತಾರೆ. ಇವನ್ನು ನೋಡಲು ನಯನ ಮನೋಹರವಾಗಿರುತ್ತದೆ ಎಂದು ಮೈಸೂರು ಸೈನ್ಸ್ ಫೌಂಡೇಷನ್ ಕಾರ್ಯದರ್ಶಿ ಜಿ.ಬಿ. ಸಂತೋಷ್‍ಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »