ವೈದ್ಯರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ  ಮಾಡದಿರಿ: ವೈದ್ಯಾಧಿಕಾರಿಗಳ ಸಂಘ ಬೇಸರ
ಮೈಸೂರು

ವೈದ್ಯರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡದಿರಿ: ವೈದ್ಯಾಧಿಕಾರಿಗಳ ಸಂಘ ಬೇಸರ

June 1, 2021

ಮೈಸೂರು,ಮೇ 31(ಎಂಕೆ)- ಮೈಸೂರು ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ಅಮರನಾಥ್ ಅವರನ್ನು ಕೆಲವು ಜನಪ್ರತಿನಿಧಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ವೈದ್ಯರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ದೇವಿ ಆನಂದ್ ಬೇಸರ ವ್ಯಕ್ತಪಡಿಸಿದರು.

ನಗರದ ನಜರ್‍ಬಾದ್‍ನಲ್ಲಿರುವ ವೈದ್ಯರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 29ರಂದು ನಡೆದ ಕೋವಿಡ್ ನಿಯಂತ್ರಣ ಸಾಮಾನ್ಯ ಸಭೆಯಲ್ಲಿ ಕೆಲವು ಜನಪ್ರತಿನಿಧಿಗಳು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಔಷಧಿಗಳನ್ನು ತರಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳ ಸಮ್ಮುಖ ದಲ್ಲಿ ವೈದ್ಯರೊಬ್ಬರನ್ನು ನಿಂದಿಸುವುದು ಅವರ ಆತ್ಮಸ್ಥೈರ್ಯ ಕುಗ್ಗಿಸುತ್ತದೆ. ಕೊರೊನಾ ಮೊದಲ ಅಲೆ ಸಂದರ್ಭದಲ್ಲಿಯೂ ತಾಲೂಕು ಆರೋಗ್ಯಾಧಿಕಾರಿಯೊಬ್ಬರು ಆತ್ನಹತ್ಯೆ ಮಾಡಿ ಕೊಂಡಿದ್ದರು. ಮತ್ತೆ ಅಂತಹ ಘಟನೆ ನಡೆಯಲು ಅವಕಾಶ ಕೊಡಬೇಡಿ ಎಂದು ಮನವಿ ಮಾಡಿದರು.

ಮೇ 24ರಂದು ಸರ್ಕಾರದಿಂದ ಔಷಧಿ-ಮಾತ್ರೆಗಳನ್ನು ಖರೀದಿಸುವ ಸಂಬಂಧ ನೋಟಿಸ್ ಹೊರಡಿಸಿದ್ದರೂ ಹಣ ಬಿಡುಗಡೆಯಾಗದೆ ಇರುವಾಗ ಖರೀದಿ ಮಾಡುವುದಾದರು ಹೇಗೆ? ಕೊರೊನಾ ಸೋಂಕು ನಿಯಂತ್ರಣಕ್ಕೆ ವೈದ್ಯಕೀಯ ಸಿಬ್ಬಂದಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಯ ಕೊರತೆ ನಡುವೆಯೂ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರನ್ನು ನಿಂದಿಸುವುದು ಸರಿಯಲ್ಲ. ಇದೇ ರೀತಿ ಮುಂದುವರೆದರೆ ವೈದ್ಯರು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಮೈಸೂರು ಕೊರೊನಾ ಮುಕ್ತ ಜಿಲ್ಲೆಯಾಗಲು ವೈದ್ಯರು ಶ್ರಮಿಸಿದ್ದಾರೆ. ಕೊರೊನಾ ಲಸಿಕೆ ನೀಡುವಲ್ಲಿಯೂ ದೇಶದಲ್ಲಿಯೇ ಮೈಸೂರು ಮೊದಲ ಸ್ಥಾನದಲ್ಲಿದೆ. ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿದ್ದರೂ ಕೊರೊನಾ ಸೊಂಕು ತಡೆಗೆ ಅವಿರತವಾಗಿ ಕೆಲಸ ಮಾಡಲಾಗುತ್ತಿದೆ. ಕೊರೊನಾ ವಾರಿಯರ್ಸ್‍ಗಳಾದ ವೈದ್ಯರನ್ನು ಪ್ರೋತ್ಸಾಹಿಸಬೇಕೇ ಹೊರತು ನಿಂದಿಸುವುದಲ್ಲ ಎಂದು ಕಿಡಿಕಾರಿದರು.

ಆರೋಗ್ಯ ಇಲಾಖೆಗೆ ಅನುದಾನ ನೀಡಿಲ್ಲ: ಸೋಂಕಿತರ ಚಿಕಿತ್ಸೆಗೆ ಬೇಕಾದ-ಔಷಧಿ-ಮಾತ್ರೆಗಳ ಕೊರತೆ ಎಷ್ಟಿದೆ? ಎಷ್ಟು ಪೂರೈಕೆ ಯಾಗಬೇಕು ಎಂಬುದರ ಮಾಹಿತಿ ನೀಡುವುದು, ಲಭ್ಯವಿರುವ ಔಷಧಿಗಳನ್ನು ಅಗತ್ಯವಿರುವಲ್ಲಿಗೆ ಒದಗಿಸುವ ಕೆಲಸವನ್ನು ಡಿಹೆಚ್‍ಓ ಸೇರಿ ತಾಲೂಕು ಮಟ್ಟದ ಆರೋಗ್ಯಾಧಿಕಾರಿಗಳು ಮಾಡುತ್ತಿದ್ದಾರೆ. ಔಷಧಿ-ಮಾತ್ರೆಗಳ ಕೊರತೆ ಉಂಟಾದರೆ ಖರೀದಿ ಮಾಡಲೆಂದು ಇಲ್ಲಿಯವರೆಗೆ ಆರೋಗ್ಯ ಇಲಾಖೆಗೆ ಯಾವುದೇ ಮಾಹಿತಿ ನೀಡಿಲ್ಲ. ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಎಲ್ಲಾ ಖರ್ಚುವೆಚ್ಚವನ್ನು ಎಸ್‍ಡಿಆರ್‍ಎಫ್ ಫಂಡ್ ಮೂಲಕವೇ ಖರ್ಚು ಮಾಡಲಾಗುತ್ತಿದೆ ಎಂದರು. ಸಂಘದ ಪದಾಧಿಕಾರಿಗಳಾದ ಡಾ.ಶ್ರೀನಿವಾಸ್, ಡಾ.ಶಿವಶಂಕರ್, ಡಾ.ಕೇಶವಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.

Translate »