ದೇಶದ ರಕ್ಷಣಾ ವ್ಯವಸ್ಥೆ ಬಲಪಡಿಸಲು ಶ್ರಮಿಸುತ್ತಿದ್ದರು…
ಕೊಡಗು

ದೇಶದ ರಕ್ಷಣಾ ವ್ಯವಸ್ಥೆ ಬಲಪಡಿಸಲು ಶ್ರಮಿಸುತ್ತಿದ್ದರು…

December 9, 2021

ಮಡಿಕೇರಿ: ಸಿಡಿಎಸ್ ಬಿಪಿನ್ ರಾವತ್ ಮತ್ತವರ ಪತ್ನಿ ಹಾಗೂ ಇಡೀ ಅಧಿ ಕಾರಿಗಳ ತಂಡ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಸುದ್ದಿ ತೀವ್ರ ಆಘಾತ ತಂದಿದೆ ಎಂದು ನಿವೃತ್ತ ಮೇಜರ್ ಜನರಲ್ ಅರ್ಜುನ್ ಮುತ್ತಣ್ಣ ಸಂತಾಪ ಸೂಚಿಸಿದ್ದಾರೆ.

ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಿಷ್ಟಪಡಿಸಲು ಬಿಪಿನ್ ರಾವತ್ ಶ್ರಮ ವಹಿಸುತ್ತಿದ್ದ ಸಂದರ್ಭವೇ ಅವರ ದುರ್ಮರಣ ವಾಗಿದ್ದು ಸಹಜವಾಗಿಯೇ ದೇಶಕ್ಕೆ ದೊಡ್ಡ ನಷ್ಟ ತಂದಿದೆ. ಲಡಾಕ್ ವಿವಾದದಂತಹ ಸಂದರ್ಭ ಬಿಪಿನ್ ರಾವತ್ ಅವರಂತಹ ಹಿರಿಯ ಸೇನಾಧಿಕಾರಿಗಳ ಅಗತ್ಯವಿರುತ್ತದೆ ಎಂದು ಮೇ.ಜ. ಅರ್ಜುನ್ ಮುತ್ತಣ್ಣ ಸ್ಮರಿಸಿದರು.

ಅವರು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಏರ್ ಫೋರ್ಸ್ ನೆಲೆಯಿಂದ ಎರಡೆರಡು ಬಾರಿ ಪರಿಶೀಲನೆಗೆ ಒಳಗಾಗಿ ಹಾರಾಟ ನಡೆಸಿದೆ. ಅದರಲ್ಲೂ ಹಿರಿಯ ಅಧಿಕಾರಿಗಳು ಪ್ರಯಾಣಿಸುವ ಹೆಲಿಕಾಫ್ಟರ್‍ನ ಪೈಲೆಟ್‍ಗಳು ಕೂಡ ತುಂಬಾ ಅನುಭವಿಗಳಾಗಿರುತ್ತಾರೆ. ಅವರ ಹೆಲಿಕಾಫ್ಟರ್ ಪತನವಾಗಿರುವುದು ಮಹಾ ದುರಂತವೇ ಸರಿ ಎಂದು ವಿಷಾದಿಸಿದರು.

ನಾನು ಮತ್ತು ಬಿಪಿನ್ ರಾವತ್ ಅವರು ಕಾಶ್ಮೀರದಲ್ಲಿ ಬ್ರಿಗೇಡಿಯರ್ ಹುದ್ದೆಯಲ್ಲಿ ಜೊತೆಯಲ್ಲಿಯೇ ಸೇವೆ ಸಲ್ಲಿಸಿದ್ದೇವೆ ಎಂದು ಮಾಹಿತಿ ಹಂಚಿಕೊಂಡ ಮೇ.ಜ. ಅರ್ಜುನ್ ಮುತ್ತಣ್ಣ, ಅವರು ನನಗೂ ನನ್ನ ಕುಟುಂಬಕ್ಕೂ ತುಂಬಾ ಆತ್ಮೀಯರಾಗಿ ದ್ದರು. ಬಿಪಿನ್ ರಾವತ್ ಅವರು ನನ್ನ ಬ್ಯಾಚ್ ಮೇಟ್ ಕೂಡ ಆಗಿದ್ದರು. ಅವರ ನಿಧನ ತುಂಬಲಾರದ ದು:ಖ ತಂದಿದೆ. ಬಿಪಿನ್ ಲೆಫ್ಟಿನೆಂಟ್ ಜನರಲ್ ಆಗಿದ್ದ ಸಂದರ್ಭವೂ ಅವರ ಹೆಲಿಕಾಫ್ಟರ್ ಅಪಘಾತಕ್ಕೀಡಾಗಿತ್ತು. ಆ ಸಂದರ್ಭ ಹೆಲಿಕಾಪ್ಟರ್ 200 ಅಡಿ ಮೇಲಿಂದ ನೆಲಕ್ಕೆ ಬಿದ್ದಿತ್ತು. ಆ ಅಪಘಾತದಲ್ಲಿ ಬಿಪಿನ್ ರಾವತ್ ಸಹಿತ ಹೆಲಿಕಾಪ್ಟರ್‍ನಲ್ಲಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದರು ಎಂದು ವಿವರಿಸಿದರು. ಮುಂದಿನ ಸಿಡಿಎಸ್ ಹುದ್ದೆಗೆ ಅರ್ಹರಾದ ಸೇನಾಧಿಕಾರಿಯನ್ನು ಕೇಂದ್ರ ಸರಕಾರ ಗುರುತು ಮಾಡುತ್ತದೆ. ಮುಂದಿನ 10 ದಿನಗಳಲ್ಲಿ ಈ ಕಾರ್ಯ ನಡೆಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Translate »