ಬಿಪಿನ್ ರಾವತ್‍ರಿಗೆ ಕೊಡಗಿನ ಆತ್ಮೀಯ ನಂಟು
ಕೊಡಗು

ಬಿಪಿನ್ ರಾವತ್‍ರಿಗೆ ಕೊಡಗಿನ ಆತ್ಮೀಯ ನಂಟು

December 9, 2021

ಮಡಿಕೇರಿ, ಡಿ.8- ಹೆಲಿಕಾಪ್ಟರ್ ಪತನ ಗೊಂಡು ದುರ್ಮರಣ ಹೊಂದಿದ ಸಿಡಿಎಸ್ ಬಿಪಿನ್ ರಾವತ್ ಅವರು ಸೈನಿಕರ ನಾಡು ಕೊಡಗಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಬಗ್ಗೆ ಅಪಾರ ಗೌರವ ಹೊಂದಿ ದ್ದರು. ಹಾಗಾಗಿ 4 ಬಾರಿ ಕೊಡಗಿಗೆ ಭೇಟಿ ನೀಡಿದ್ದರು. ಜನರಲ್ ತಿಮ್ಮಯ್ಯ ಮ್ಯೂಸಿ ಯಂಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಅವರು, ಗೋಣಿಕೊಪ್ಪದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಪ್ರತಿಮೆಗಳನ್ನು ಸ್ಥಾಪಿಸಲು ಕಾರಣಕರ್ತರಾಗಿದ್ದರು. ಅಲ್ಲದೆ ದೆಹಲಿಯ ಪೆರೇಡ್ ಗ್ರೌಂಡ್‍ಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರು ನಾಮಕರಣಕ್ಕೂ ಇವರೇ ಕಾರಣರು. ಇಂತಹ ಬಿಪಿನ್ ರಾವತ್ ದುರ್ಮರಣದಿಂದಾಗಿ ಕೊಡಗು ಜಿಲ್ಲೆಯಲ್ಲೂ ಸೂತಕದ ವಾತಾವರಣ ಉಂಟಾಗಿದೆ.

ಸದರನ್ ಕಮಾಂಡ್ ಇನ್ ಚೀಫ್ (ಸೇನಾ ದಕ್ಷಿಣ ವಲಯ) ಆಗಿದ್ದ ಬಿಪಿನ್ ರಾವತ್ ಅವರು 2017ರಲ್ಲಿ ವಿರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ ಸದರನ್ ಕಮಾಂಡ್ ಆಯೋಜಿಸಿದ್ದ ರಾಷ್ಟ್ರೀಯ ರಕ್ಷಣಾ ಪಡೆಗಳ ಗಾಲ್ಫ್ ಕ್ರೀಡಾ ಕೂಟದಲ್ಲಿ ಪಾಲ್ಗೊಂಡಿದ್ದರು. ಅದು ಅವರ ಕೊಡಗಿನ ಮೊದಲ ಭೇಟಿಯಾಗಿತ್ತು.

ಈ ಸಂದರ್ಭ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಪದಾಧಿಕಾರಿಗಳು ಬಿಪಿನ್ ರಾವತ್ ಅವರನ್ನು ಭೇಟಿ ಮಾಡಿ ಮಾಜಿ ಸೈನಿಕರ ಸಮಸ್ಯೆಗಳ ಕುರಿತು ಚರ್ಚಿಸಿದ್ದರು. ಈ ಸಂದರ್ಭ ತಮ್ಮ ಮುಂದಿನ ಭೇಟಿಯ ವೇಳೆ ಅಂದು ಭೂ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರನ್ನು ಕೊಡ ಗಿಗೆ ಕರೆ ತರುವುದಾಗಿ ಭರವಸೆ ನೀಡಿ ದ್ದರು. ಅದರಂತೆ 2017ರ ಆಗಸ್ಟ್ 6ರಂದು ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಜೊತೆ ಮಡಿಕೇರಿಗೆ ಆಗಮಿಸಿದ ಬಿಪಿನ್ ರಾವತ್ ಮಾಜಿ ಸೈನಿಕರ ಸಮ್ಮೇಳನ ನಡೆಸುವ ಮೂಲಕ ಮಾಜಿ ಸೇನಾಧಿಕಾರಿಗಳು ಮತ್ತು ಮಾಜಿ ಸೈನಿಕರ ಕುಂದು ಕೊರತೆಗಳನ್ನು ಪರಿಹರಿ ಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು.

ಇದೇ ಸಂದರ್ಭ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂನ ಪ್ರಮುಖರು ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಹಾಗೂ ಸೇನಾಧಿಕಾರಿ ಬಿಪಿನ್ ರಾವತ್ ಅವರನ್ನು ಭೇಟಿ ಮಾಡಿ, ದೆಹಲಿ ಪರೇಡ್ ಗ್ರೌಂಡ್ ಹೆಸರನ್ನು ಬದಲಿಸಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರನ್ನು ಇಡುವಂತೆ ಮನವಿ ಮಾಡಿದ್ದರು. ಜನರಲ್ ತಿಮ್ಮಯ್ಯ ಮ್ಯೂಸಿಯಂ ಬಗ್ಗೆಯೂ ಮಾಹಿತಿ ನೀಡಿದ್ದರು. ಬಳಿಕ ಕಾಮಗಾರಿ ನಡೆಯು ತ್ತಿದ್ದ ಜನರಲ್ ತಿಮ್ಮಯ್ಯ ಮ್ಯೂಸಿಯಂ ಅನ್ನು ಬಿಪಿನ್ ರಾವತ್ ಅವರು ವೀಕ್ಷಿಸಿ, ಸ್ಥಳದಲ್ಲೇ ಲಕ್ಷ ರೂ. ಅನುದಾನ ನೀಡಿ, ಅದನ್ನು ಜನರಲ್ ತಿಮ್ಮಯ್ಯ ಮ್ಯೂಸಿ ಯಂ ಕಾಮಗಾರಿಗೆ ಬಳಸಿಕೊಳ್ಳುವಂತೆ ಸೂಚಿಸಿದ್ದರು. ಆದರೆ ಮ್ಯೂಸಿಯಂ ಸರ ಕಾರದ ಅನುದಾನದಲ್ಲಿ ನಿರ್ಮಾಣವಾಗು ತ್ತಿದೆ ಎಂದು ಫೋರಂ ಪ್ರಮುಖರು ಮಾಹಿತಿ ನೀಡಿದಾಗ ಆ ಹಣವನ್ನು ಗೋಣಿಕೊಪ್ಪ ದಲ್ಲಿ ನಿರ್ಮಿಸಲು ಯೋಜಿಸಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಪ್ರತಿಮೆಗಳಿಗೆ ಬಳಸಿಕೊಳ್ಳುವಂತೆ ಮನವಿ ಮಾಡಿದ್ದರು.

ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರು ನಿವೃತ್ತಿಯಾಗುವ ಮುನ್ನ ಬಿಪಿನ್ ರಾವತ್ ಒತ್ತಾಯದ ಮೇರೆಗೆ ‘ದೆಹಲಿ ಪರೇಡ್ ಗ್ರೌಂಡ್’ ಎಂಬ ಹೆಸರನ್ನು ಬದಲಿಸಿ ಅದಕ್ಕೆ ‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪರೇಡ್ ಗ್ರೌಂಡ್’ ಎಂದು ಮರುನಾಮ ಕರಣ ಮಾಡಿದರು. ಬಳಿಕ ಸೇವಾ ಹಿರಿತನ ದಿಂದ ಬಿಪಿನ್ ರಾವತ್ ಭೂ ಸೇನೆಯ ಜನರಲ್ ಹುದ್ದೆ ಅಲಂಕರಿಸಿದರು. 2019ರ ಏಪ್ರಿಲ್ 4 ರಂದು 3ನೇ ಬಾರಿಗೆ ಕೊಡಗಿಗೆ ಆಗಮಿಸಿದ್ದ ಬಿಪಿನ್ ರಾವತ್, ಗೋಣಿ ಕೊಪ್ಪದ ಕಾವೇರಿ ಕಾಲೇಜು ಹೊರ ಆವರಣದಲ್ಲಿ ಫೋರಂ ವತಿಯಿಂದ ನಿರ್ಮಿಸ ಲಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಗಳನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಅವರ ಪತ್ನಿ ಮಧುಲಿಕಾ ಕೂಡ ಜೊತೆಯಲ್ಲಿದ್ದು, ಸಾರ್ವಜನಿಕ ವಾಗಿ ಕಾಣಿಸಿಕೊಂಡಿದ್ದರು.

ಮ್ಯೂಸಿಯಂಗೆ ಯುದ್ಧ ಸಲಕರಣೆ ಕೊಡುಗೆ: ಜನರಲ್ ತಿಮ್ಮಯ್ಯ ಸ್ಮಾರಕ ಭವನವನ್ನು ವಾರ್ ಮೆಮೋರಿಯಲ್ ಆಗಿ ಪರಿವರ್ತಿಸಲು ಫೋರಂ ಮುಂದಾ ಗಿತ್ತು. ಈ ಕುರಿತು ಜನರಲ್ ಬಿಪಿನ್ ರಾವತ್ ಅವರ ಗಮನ ಸೆಳೆದಿದ್ದ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಮತ್ತು ಸಂಚಾಲಕ ಮೇಜರ್ ನಂದಾ, ಒಂದು ಯುದ್ಧ ಟ್ಯಾಂಕರ್, ವಿವಿಧ ರೆಜಿ ಮೆಂಟ್‍ಗಳ ಬಂದೂಕುಗಳನ್ನು ವಾರ್ ಮೆಮೋರಿಯಲ್‍ಗೆ ನೀಡುವಂತೆ ಮನವಿ ಮಾಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಜನರಲ್ ಬಿಪಿನ್ ರಾವತ್ “ಹಿಮ್ಮತ್” ಹೆಸರಿನ ಯುದ್ದ ಟ್ಯಾಂಕರ್, 30 ಬಗೆಯ ಬಂದೂಕುಗಳನ್ನು ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿ ಜನರಲ್ ತಿಮ್ಮಯ್ಯ ವಾರ್ ಮೆಮೋರಿಯಲ್‍ಗೆ ಕೊಡುಗೆಯಾಗಿ ನೀಡಿದ್ದರು.

ರಾಷ್ಟ್ರಪತಿಗಳನ್ನು ಕರೆ ತಂದರು: ಜನರಲ್ ತಿಮ್ಮಯ್ಯ ಮ್ಯೂಸಿಯಂನ ಕಾಮಗಾರಿ ಮುಕ್ತಾಯವಾಗಿ ಅಧಿಕೃತವಾಗಿ ಸಾರ್ವಜನಿಕ ರಿಗೆ ಲೋಕಾರ್ಪಣೆ ಮಾಡುವ ಸಂದರ್ಭ ಜನರಲ್ ಬಿಪಿನ್ ರಾವತ್ ಅವರು ದೇಶದ ಸಿಡಿಎಸ್ ಹುದ್ದೆಗೇರಿದ್ದರು. ಈ ಸಂದರ್ಭ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂನ ಪ್ರಮುಖರು ಸಿಡಿಎಸ್ ಬಿಪಿನ್ ರಾವತ್ ಅವರನ್ನು ಸಂಪರ್ಕಿಸಿ ಮ್ಯೂಸಿಯಂ ಉದ್ಘಾಟನೆ ಮಾಡುವಂತೆ ಮನವಿ ಮಾಡಿದ್ದರು. ಇದನ್ನು ನಯವಾ ಗಿಯೇ ತಿರಸ್ಕರಿಸಿದ್ದ ಬಿಪಿನ್ ರಾವತ್ ಅವರು ಜನರಲ್ ತಿಮ್ಮಯ್ಯ ಅವರು ಮಹಾ ಯೋಧ, ಹೀಗಾಗಿ ರಕ್ಷಣಾ ಪಡೆಗಳ ಸರ್ವೋಚ್ಛ ನಾಯಕರಾದ ರಾಷ್ಟ್ರಪತಿಗಳನ್ನು ಕಾರ್ಯಕ್ರಮಕ್ಕೆ ಕರೆತರು ವುದಾಗಿ ಭರವಸೆ ನೀಡಿದ್ದರು.
ಅದರಂತೆ 2021ರ ಫೆಬ್ರವರಿ 6ರಂದು ಸಿಡಿಎಸ್ ಬಿಪಿನ್ ರಾವತ್ ಅವರು ಪತ್ನಿ ಮಧುಲಿಕ ಅವರೊಂದಿಗೆ ಮಡಿಕೇರಿಗೆ ಆಗಮಿಸಿ ಜನರಲ್ ತಿಮ್ಮಯ್ಯ ಮ್ಯೂಸಿ ಯಂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಜನರಲ್ ತಿಮ್ಮಯ್ಯ ಅವರ ಕುರಿತು ಜನರಲ್ ಮೌಂಟ್ ಬ್ಯಾಟನ್ ಜನರಲ್ ಚಿಬ್ಬರ್ ಅವರಿಗೆ ಬರೆದ ಪತ್ರವನ್ನು ಫೋರಂಗೆ ಹಸ್ತಾಂತರಿಸುವ ಮೂಲಕ ಅಮೂಲ್ಯ ಕೊಡುಗೆಯನ್ನು ನೀಡಿದ್ದರು.

Translate »