ಮೈಸೂರು,ಡಿ.7(ಪಿಎಂ)-ತರಗತಿಗಳು ಪ್ರಾರಂಭವಾಗಿ ಎರಡು ತಿಂಗಳಾಗುತ್ತಿದ್ದರೂ ಹಾಸ್ಟೆಲ್‍ನ ಮೆಸ್ ಆರಂಭಿಸಿ, ಊಟದ ವ್ಯವಸ್ಥೆ ಮಾಡಲು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಮಹಾರಾಣಿ ವಿಜ್ಞಾನ ಕಾಲೇ ಜಿನ ವಿದ್ಯಾರ್ಥಿನಿಯರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ವಿದ್ಯಾರ್ಥಿನಿಯರು, ಅ.18 ರಿಂದ ಕಾಲೇಜಿನ ತರಗತಿಗಳು ಆರಂಭ ವಾಗಿವೆ. ಹಾಗಾಗಿ ಅಧಿಕೃತವಾಗಿ ಹಾಸ್ಟೆಲ್‍ಗೆ ಪ್ರವೇಶ ಪಡೆದಿಲ್ಲವಾದರೂ ದ್ವಿತೀಯ, ಅಂತಿಮ ವರ್ಷದ ಬಿಎಸ್‍ಸಿ ಹಾಗೂ ಎಂಎಸ್‍ಸಿ ವಿದ್ಯಾರ್ಥಿನಿಯರು ಕಾಲೇಜಿನ ಹಾಸ್ಟೆಲ್‍ನಲ್ಲಿದ್ದೇವೆ. ನಮಗೆ ಹಾಸ್ಟೆಲ್‍ನಲ್ಲಿ ಉಳಿದುಕೊಳ್ಳಲು ಅನುಮತಿ ನೀಡಲಾಗಿದೆ. ಆದರೆ ಈವರೆಗೂ ಹಾಸ್ಟೆಲ್‍ನಲ್ಲಿ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿ ಸಿಲ್ಲ ಎಂದು ದೂರಿದರು. ಕೊಡಗು, ಚಾಮ ರಾಜನಗರ, ಹಾಸನ, ಮಂಡ್ಯ ಮಾತ್ರವಲ್ಲದೆ, ಬೆಂಗಳೂರು
ಮೂಲದವರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರೂ ಹಾಸ್ಟೆಲ್‍ನಲ್ಲಿ ಉಳಿದುಕೊಂಡಿ ದ್ದಾರೆ. ಹಾಸ್ಟೆಲ್‍ನಲ್ಲಿ ಪ್ರಸ್ತುತ ಸುಮಾರು 200 ವಿದ್ಯಾರ್ಥಿನಿಯರಿದ್ದೇವೆ. ಇದುವರೆಗೆ ಹೋಟೆಲ್‍ನಲ್ಲಿ ಊಟ ಮಾಡುತ್ತಿದ್ದು, ಇದರಿಂದ ಬಹುತೇಕ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರಾಗಿ, ಅನಾರೋಗ್ಯಕ್ಕೆ ತುತ್ತಾಗಿದ್ದೇವೆ. ವಿದ್ಯಾಭ್ಯಾಸಕ್ಕೂ ಇದರಿಂದ ತೊಂದರೆಯಾಗಿದೆ. ಎಲ್ಲಾ ವಿದ್ಯಾರ್ಥಿನಿಯರು ದಿನದ ಮೂರೂ ಹೊತ್ತು ಹೋಟೆಲ್‍ನಲ್ಲಿಯೇ ತಿನ್ನುವಷ್ಟು ಸ್ಥಿತಿವಂತರಲ್ಲ. ಜೊತೆಗೆ ಹಾಸ್ಟೆಲ್ ನಿರ್ವಹಣೆಯೂ ಸಮರ್ಪಕವಾಗಿಲ್ಲ. ಸ್ವಚ್ಛತೆ ಇಲ್ಲ ವಾಗಿದ್ದು, ಹಾಸ್ಟೆಲ್ ಆವರಣದಲ್ಲಿ ಗಿಡ-ಗಂಟಿ ಬೆಳೆದು ನಿಂತಿವೆ ಆಕ್ರೋಶ ವ್ಯಕ್ತಪಡಿಸಿದರು.
ಹಾಸ್ಟೆಲ್ ನಿವಾಸಿಯಾದ ಬಿಎಸ್‍ಸಿ ಅಂತಿಮ ವರ್ಷದ ವಿದ್ಯಾರ್ಥಿನಿ ಯಶಸ್ವಿನಿ ಮಾತನಾಡಿ, ಅ.18ರಿಂದ ಹಾಸ್ಟೆಲ್‍ನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿ, ವಾರದೊಳಗೆ ಮೆಸ್ ತೆರೆಯಲು ಕ್ರಮ ವಹಿಸುವುದಾಗಿ ತಿಳಿಸಿದ್ದರು. ಆದರೆ 2 ತಿಂಗಳು ಆಗುತ್ತಿದ್ದರೂ ಮೆಸ್ ಆರಂಭಿಸಲು ಕ್ರಮ ವಹಿಸಿಲ್ಲ. ಅಡುಗೆ ಟೆಂಡರ್ ಸಂಬಂಧ ಸಮಸ್ಯೆಯಾಗಿದೆ. ಹಾಗಾಗಿ ತಿಂಗಳವರೆಗೆ ಸಮಯ ಬೇಕಾಗುತ್ತದೆ ಎಂದು ಪ್ರಾಂಶುಪಾಲರು ತಿಳಿಸಿದ್ದರು. ಆದರೆ ಹೇಳಿದ ಸಮಯವೂ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಿಂಗಳಿಗೆ 1,500 ರೂ. ಒಳಗೆ ಗುಣಮಟ್ಟದ ಆಹಾರ ನೀಡಲಾಗುತ್ತಿತ್ತು. ನಮ್ಮದೇ ಆವರಣದಲ್ಲಿರುವ ಕಲಾ ವಿಭಾಗದ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ 2 ಸಾವಿರ ರೂ. ಒಳಗೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ನಾವೂ 2 ಸಾವಿರ ರೂ. ಪಾವತಿಸು ತ್ತೇವೆ ಎಂದರೂ ಯಾವುದೇ ಕ್ರಮ ವಹಿಸಿಲ್ಲ. ಹಾಗಾಗಿ ಹೋಟೆಲ್‍ನಿಂದ ದಿನಕ್ಕೆ ಕನಿಷ್ಠ 90 ರೂ.ವರೆಗೆ ವೆಚ್ಚ ಮಾಡಿ ಆಹಾರ ತರಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಸ್ಥಳಕ್ಕೆ ಶಾಸಕ ಎಲ್.ನಾಗೇಂದ್ರ ಭೇಟಿ: ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ನಮ್ಮ ಸಮಸ್ಯೆ ಆಲಿಸಬೇಕೆಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದು ಕುಳಿತಿದ್ದರು. ಜಿಲ್ಲಾಧಿಕಾರಿ ಗಳು ವಿಡೀಯೋ ಕಾನ್ಫರೆನ್ಸ್ ಒಂದರಲ್ಲಿದ್ದು, ಅವರು ಸ್ಥಳಕ್ಕೆ ಆಗಮಿಸುವ ಸಾಧ್ಯತೆ ಇಲ್ಲವೆಂದು ಸ್ಥಳದಲ್ಲಿದ್ದ ಪೊಲೀಸರು ಮನವೊಲಿಸಿದರು ವಿದ್ಯಾರ್ಥಿನಿಯರು ಪಟ್ಟು ಬಿಡದೇ ಪ್ರತಿಭಟನೆ ಮುಂದುವರೆಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಎಲ್.ನಾಗೇಂದ್ರ, ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು. ಮುಖ್ಯವಾಗಿ ಮೆಸ್ ತೆರೆದು ಊಟದ ವ್ಯವಸ್ಥೆಯಾಗಬೇಕು. ಜೊತೆಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ವಿದ್ಯಾರ್ಥಿನಿಯರು ಶಾಸಕರಲ್ಲಿ ಮನವಿ ಮಾಡಿದರು.
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರೊಂದಿಗೆ ಮಾತನಾಡಿದ ಶಾಸಕರು, ಟೆಂಡರ್ ಪ್ರಕ್ರಿಯೆಗೆ ಶೀಘ್ರ ಅನುಮತಿ ನೀಡಬೇಕೆಂದು ತಿಳಿಸಿದರಲ್ಲದೆ, 15 ದಿನಗಳ ಕಾಲ ತಾತ್ಕಾಲಿಕ ವಾಗಿ ಊಟದ ವ್ಯವಸ್ಥೆ ಮಾಡಲು ಕ್ರಮ ಕೈಗೊಂಡರು. ಸ್ಥಳೀಯ ಕೇಟರಿಂಗ್ ವ್ಯಕ್ತಿಯೊಬ್ಬ ರನ್ನು ಸ್ಥಳಕ್ಕೆ ಕರೆಸಿದ ಶಾಸಕರು, ಪ್ರತಿ ದಿನಕ್ಕೆ ವಿದ್ಯಾರ್ಥಿಯೊಬ್ಬರಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟಕ್ಕೆ 60 ರೂ.ನಂತೆ ಆಹಾರ ಒದಗಿಸಲು ವ್ಯವಸ್ಥೆ ಮಾಡಿದರು. ಬಳಿಕ ವಿದ್ಯಾರ್ಥಿನಿಯರು ಪ್ರತಿಭಟನೆ ಕೈಬಿಟ್ಟರು.