ಮೋದಿ ಸರ್ಕಾರದ ಮೇಲೆ ವಿಶ್ವ ವಿಶ್ವಾಸ; ಭಾರತದಲ್ಲಿ ವಿದೇಶಿ ಕಂಪನಿಗಳಿಂದ ಮೂರು ತಿಂಗಳಲ್ಲಿ 2,000 ಕೋಟಿ ಡಾಲರ್ ಹೂಡಿಕೆ
ಮೈಸೂರು

ಮೋದಿ ಸರ್ಕಾರದ ಮೇಲೆ ವಿಶ್ವ ವಿಶ್ವಾಸ; ಭಾರತದಲ್ಲಿ ವಿದೇಶಿ ಕಂಪನಿಗಳಿಂದ ಮೂರು ತಿಂಗಳಲ್ಲಿ 2,000 ಕೋಟಿ ಡಾಲರ್ ಹೂಡಿಕೆ

July 19, 2020

ಸಾಂಕ್ರಾಮಿಕ ಕೊರೊನಾ ಭೀತಿ ಮಧ್ಯೆಯೂ ಬಹಳಷ್ಟು ದೇಶಗಳಿಗೆ ಭಾರತವೇ ಹೂಡಿಕೆಗೆ ವಿಶ್ವಾಸಾರ್ಹ
ಬೆಂಗಳೂರು, ಜು.18- ಕೊರೊನಾದಂತಹ ಮಾರಣಾಂತಿಕ ಸಾಂಕ್ರಾಮಿಕ ಸೋಂಕಿನ ವ್ಯಾಪಕ ಹರಡುವಿಕೆ, ಲಕ್ಷಾಂತರ ಮಂದಿಯ ದಾರುಣ ಸಾವು ಹಾಗೂ ಸಿರಿವಂತ ದೇಶಗಳಲ್ಲಿ ಆರ್ಥಿಕ ಕುಸಿತವಾಗಿರುವ ಸಂದರ್ಭದಲ್ಲೂ ಬಹಳಷ್ಟು ದೇಶಗಳ ದೊಡ್ಡ ದೊಡ್ಡ ಕಂಪನಿಗಳಿಗೆ ಭಾರತವೇ ಅತ್ಯಂತ ಸುರಕ್ಷಿತ ಹಾಗೂ ಅಚ್ಚುಮೆಚ್ಚಿನ ತಾಣ ಎನಿಸಿದೆ. ಹಾಗಾಗಿಯೇ ಕಳೆದ ಮೂರು ತಿಂಗಳಲ್ಲಿ ವಿಶ್ವದ ದಿಗ್ಗಜ ಕಂಪೆನಿಗಳು ಭಾರತದಲ್ಲಿ ಒಟ್ಟು 20 ಶತಕೋಟಿ ಡಾಲರ್ (1.50 ಲಕ್ಷ ಕೋಟಿ ರೂ.) ಬಂಡವಾಳ ಹೂಡಿಕೆ ಮಾಡಿವೆ!

ಕಳೆದ ಏಪ್ರಿಲ್‍ನಿಂದೀಚೆಗೆ ಗೂಗಲ್, ವಾಲ್‍ಮಾರ್ಟ್, ಫಾಕ್ಸ್‍ಕಾನ್, ಫೇಸ್‍ಬುಕ್, ಕ್ವಾಲಕಂ ವೆಂಚರ್ಸ್, ಥಾಮ್ಸನ್, ವಿ ವರ್ಕ್ ಗ್ಲೋಬಲ್, ಹಿಟಾಚಿ, ಕಿಯಾ ಮೋಟಾರ್ಸ್, ಸೌದಿ ಅರೇಬಿಯಾದ ಪಿಐಎಫ್, ಹ್ಯುಂಡೈ ಮೊಬಿಸ್, ಎಸ್‍ಜಿಎಸ್, ಆಕ್ಸ್‍ಟ್ರಿಯಾ, ಎಫ್5, ಸುಜುಕಿ, ಸ್ಯಾಮ್ಸಂಗ್ ಮೊದಲಾದ ವಿಶ್ವದ ಮುಂಚೂಣಿ ಕಂಪನಿಗಳು ಭಾರತದ ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಒಂದೂವರೆ ಲಕ್ಷ ಕೋಟಿ ರೂ.ಗೂ ಅಧಿಕ ಹೂಡಿಕೆ ಮಾಡಿವೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮತ್ತು ಭಾರತ ಉದ್ಯಮ ಕ್ಷೇತ್ರದ ಮೇಲೆ ವಿವಿಧ ದೇಶಗಳು, ಅಲ್ಲಿನ ಬೃಹತ್ ಉದ್ಯಮ ಸಂಸ್ಥೆಗಳು ವ್ಯಕ್ತಪಡಿಸುತ್ತಿರುವ ವಿಶ್ವಾಸ, ನಂಬಿಕೆಗೆ ಸಾಕ್ಷಿಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಗೂಗಲ್ 1000 ಕೋಟಿ ಡಾಲರ್, ಫೇಸ್‍ಬುಕ್ 570 ಕೋಟಿ ಡಾಲರ್, ಸೌದಿ ಅರೇಬಿಯಾದ ಪಿಐಎಫ್ 160 ಕೋಟಿ ಡಾಲರ್, ವಾಲ್‍ಮಾರ್ಟ್ 120 ಕೋಟಿ ಡಾಲರ್, ಕಂಪ್ಯೂಟರ್ ತಯಾರಿಕಾ ದಿಗ್ಗಜ ಕಂಪನಿ ಆಪಲ್‍ಗೆ ಮುಖ್ಯ ಪೂರೈಕೆದಾರನಾಗಿರುವ ಫಾಕ್ಸ್‍ಕಾನ್ ಕಂಪನಿ 100 ಕೋಟಿ ಡಾಲರ್, ಥಾಮ್ಸನ್ 14.28 ಕೋಟಿ ಡಾಲರ್, ವಿ ವರ್ಕ್ ಗ್ಲೋಬಲ್ 10 ಕೋಟಿ ಡಾಲರ್, ಕಿಯಾ ಮೋಟಾರ್ಸ್ 5.40 ಕೋಟಿ ಡಾಲರ್, ಹಿಟಾಚಿ 1.59 ಕೋಟಿ ಡಾಲರ್, ಕ್ವಾಲಕಂ ವೆಂಚರ್ಸ್ 970 ಲಕ್ಷ ಡಾಲರ್‍ಗೂ ಅಧಿಕ ಬಂಡವಾಳ ತೊಡಗಿಸಿವೆ.

Translate »