ಕನಕಪುರದಲ್ಲಿ ವಿಶ್ವದಲ್ಲೇ ಅತೀ ಎತ್ತರದ ವಿವೇಕಾನಂದ ಪ್ರತಿಮೆ ಸ್ಥಾಪನೆ: ವಿ.ಸೋಮಣ್ಣ
ಮೈಸೂರು

ಕನಕಪುರದಲ್ಲಿ ವಿಶ್ವದಲ್ಲೇ ಅತೀ ಎತ್ತರದ ವಿವೇಕಾನಂದ ಪ್ರತಿಮೆ ಸ್ಥಾಪನೆ: ವಿ.ಸೋಮಣ್ಣ

May 31, 2020

ಬೆಂಗಳೂರು, ಮೇ 30(ಕೆಎಂಶಿ)-ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ವಿಧಾನಸಭಾ ಕ್ಷೇತ್ರ ಕನಕಪುರದಲ್ಲಿ ವಿಶ್ವದಲ್ಲೇ ಅತೀ ಎತ್ತರದ ಯೇಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿ ರುವ ಬೆನ್ನಲ್ಲೇ ರಾಜ್ಯ ಸರ್ಕಾರ ಸ್ವಾಮಿ ವಿವೇಕಾನಂದರ ಬೃಹತ್ ಪ್ರತಿಮೆ ನಿರ್ಮಿಸಲು ತೀರ್ಮಾನಿಸಿದೆ.

ಉದ್ದೇಶಿತ ಯೇಸು ಪ್ರತಿಮೆ ಸ್ಥಾಪನೆಗೊಳ್ಳುವ ಪ್ರದೇಶದ ಸಮೀಪದಲ್ಲೇ ಅಂದರೆ ಪ್ರವಾಸಿ ತಾಣ ಮುತ್ಯಾಲಮಡುವುನಲ್ಲಿ ಈ ಪ್ರತಿಮೆ ನಿರ್ಮಾಣವಾಗಲಿದೆ. ಸುಮಾರು 100 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ 120 ಅಡಿ ಎತ್ತರದ ವಿವೇಕಾನಂದರ ಸುಂದರ ಪ್ರತಿಮೆ ಸ್ಥಾಪನೆಗೊಳ್ಳಲಿದೆ. ಗುಜರಾತ್‍ನ ಸರ್ದಾರ್ ವಲ್ಲಭ್‍ಬಾಯ್ ಪಟೇಲ್‍ರ ಮಾದರಿಯಲ್ಲೇ ಈ ಪ್ರತಿಮೆ ನಿರ್ಮಾಣವಾಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಪ್ರಕಟಿಸಿದ್ದಾರೆ.

ಮುತ್ಯಾಲಮಡುವು ಪ್ರವಾಸೋದ್ಯಮ ಕೇಂದ್ರ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ವಸತಿ ಸಚಿವರು ತಮ್ಮದಲ್ಲದ ಇಲಾಖೆಯ ವಿಷಯವನ್ನು ಪ್ರಕಟಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿಯೂ ಇವರಿಗೆ ಬರುವುದಿಲ್ಲ. ಅಂತೂ ಕರ್ನಾಟಕದಲ್ಲಿ ಬೃಹತ್ ಪ್ರತಿಮೆಗಳ ಸ್ಥಾಪನೆಗೆ ಪೈಪೋಟಿ ನಡೆದಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ 120 ಅಡಿಗೂ ಹೆಚ್ಚು ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಈಗಾಗಲೇ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕಳೆದ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಲಸಂಗಮದಲ್ಲಿ ಬೃಹತ್ ಬಸವಣ್ಣ ಪ್ರತಿಮೆ ನಿರ್ಮಿಸುವ ತೀರ್ಮಾನ ಕೈಗೊಂಡಿದ್ದಾರೆ.

Translate »