ತಮಿಳುನಾಡಿಗೆ ಪತ್ರ ಬರೆದಿದ್ದೇ ತಪ್ಪು: ಬಿಎಸ್‍ವೈ ವಿರುದ್ಧ ವಾಟಾಳ್ ಆಕ್ರೋಶ
ಮೈಸೂರು

ತಮಿಳುನಾಡಿಗೆ ಪತ್ರ ಬರೆದಿದ್ದೇ ತಪ್ಪು: ಬಿಎಸ್‍ವೈ ವಿರುದ್ಧ ವಾಟಾಳ್ ಆಕ್ರೋಶ

July 8, 2021

ಮೈಸೂರು, ಜು.7(ಆರ್‍ಕೆಬಿ)- ರಾಜ್ಯದ ಪ್ರಮುಖ ಮೇಕೆದಾಟು ಯೋಜನೆಯ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಅವರಿಗೆ ಪತ್ರ ಬರೆದಿದ್ದು ತಪ್ಪು. ಪತ್ರ ಬರೆಯುವ ಅವಶ್ಯಕತೆ ಏನಿತ್ತು? ಪತ್ರ ಬರೆಯುವ ಮೂಲಕ ರಾಜ್ಯದ ಹಿತಕ್ಕೆ ಧಕ್ಕೆ ತಂದಿದ್ದಾರೆ. ಕನ್ನಡಿಗರ ಹಿತ ಕಡೆಗಣಿಸಿದ್ದಾರೆ. ಪತ್ರ ಬರೆಯುವ ಮೂಲಕ ಕನ್ನಡಿಗರಿಗೆ ಅಗೌರವವಾಗುವಂತೆ ಮಾಡಿ ದ್ದಾರೆ ಎಂದು ಕನ್ನಡ ಚಳವಳಿಯ ನಾಯಕ, ಮಾಜಿ ಶಾಸಕ ವಾಟಾಳ್ ನಾಗರಾಜ್ ಮುಖ್ಯಮಂತ್ರಿ ಯಡಿ ಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ)ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಅವರು, ರಾಜ್ಯದ ಉದ್ದೇಶಿತ ಮೇಕೆದಾಟು ಯೋಜನೆಯ ವಿರುದ್ಧ ಹೇಳಿಕೆ ನೀಡು ವಂತೆ ಮಾಡಿದ್ದೇ ಯಡಿಯೂರಪ್ಪ. ಅವರು ಪತ್ರ ಬರೆದಿದ್ದರಿಂದಲೇ ಅವರಿಂದ ಯೋಜನೆಗೆ ಅಡ್ಡಿ ಯಾಗುವಂತಾಯಿತು. ಯೋಜನೆ ಕೈಗೆತ್ತಿಕೊಳ್ಳುವು ದನ್ನು ಬಿಟ್ಟು ಪತ್ರ ಬರೆಯುವ ಅಗತ್ಯವೇನಿತ್ತು? ಯಾರು ಏನೇ ಹೇಳಲಿ, ಯೋಜನೆಯನ್ನು ಮುಖ್ಯಮಂತ್ರಿಗಳು ವಿಳಂಬ ಮಾಡದೆ ತಕ್ಷಣ ಕೈಗೆತ್ತಿ ಕೊಳ್ಳಬೇಕು ಎಂದು ಆಗ್ರಹಿಸಿದರು.

ಮೇಕೆದಾಟು ಯೋಜನೆ ವಿಳಂಬವಾಗಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯವರೇ ಹೊಣೆಗಾರರು. ಇವ ರ್ಯಾರಿಗೂ ಜವಾಬ್ದಾರಿ ಇಲ್ಲ. ಮುಖ್ಯಮಂತ್ರಿಯಾಗಬೇಕು, ದರ್ಬಾರ್ ಮಾಡಬೇಕು ಎಂಬುದೇ ಅವರ ಆಸಕ್ತಿ. ರಾಜ್ಯದ ಬಗ್ಗೆ ಸ್ವಲ್ಪವೂ ಚಿಂತನೆ ಇಲ್ಲ ಎಂದು ಟೀಕಿಸಿದರು.
ಮೇಕೆದಾಟು ಯೋಜನೆ ಆರಂಭಿಸುವುದಾಗಿ ಹೇಳಿಕೆ ನೀಡಿ ರುವ ಮುಖ್ಯಮಂತ್ರಿ ಯಡಿ ಯೂರಪ್ಪ ವಿರುದ್ಧ ಹರಿಹಾಯ್ದ ಅವರು, ಸುಮ್ಮನೆ ಹೇಳಿಕೆ ನೀಡಿದರೆ ಪ್ರಯೋಜನವಿಲ್ಲ. ಅದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ? ನೀಲಿನಕ್ಷೆ ತಯಾರಾಗಿದೆಯೇ? ಎಷ್ಟು ಸಾವಿರ ಕೋಟಿ ಹಣ ಅಂದಾಜಿಸಿದ್ದೀರಿ? ಯಾವಾಗ ಕಾಮಗಾರಿ ಆರಂಭಿಸುತ್ತೀರಿ? ಎಲ್ಲಿಂದ ಆರಂಭಿಸುತ್ತೀರಿ ಎಂಬುದೆಲ್ಲವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ತಮಿಳುನಾಡು ಹೆಜ್ಜೆ ಹೆಜ್ಜೆಗೂ ಅಡ್ಡಿ ಮಾಡುತ್ತಿದೆ. ಅದನ್ನು ಲೆಕ್ಕಕ್ಕಿಟ್ಟುಕೊಳ್ಳದೇ ಆದಷ್ಟು ಶೀಘ್ರ ಶಂಕು ಸ್ಥಾಪನೆ ನೆರವೇರಿಸಬೇಕು ಎಂದು ಆಗ್ರಹಿಸಿದರು.

ತಮಿಳುನಾಡಿನಲ್ಲಿ ಕಾಲುವೆಗಳ ಜೋಡಣೆಗೆ ದೊಡ್ಡ ಕಾಮಗಾರಿ ಮಾಡುತ್ತಿದ್ದಾರೆ. ಅದು ಆರು ತಿಂಗಳ ಹಿಂದೆಯೇ ಕಾಮಗಾರಿ ಶುರುವಾಗಿದೆ. ಕೇಂದ್ರದಲ್ಲಿರುವ ನಿಮ್ಮದೇ ಬಿಜೆಪಿ ಸರ್ಕಾರ ತಮಿಳುನಾಡಿಗೆ ಹಣ ನೀಡಿದೆ. ಇದೆಲ್ಲವೂ ಮುಖ್ಯ ಮಂತ್ರಿಗಳಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.
ಮೇಕೆದಾಟು ಕಾಮಗಾರಿ ಶೀಘ್ರ ಆರಂಭಕ್ಕೆ ಆಗ್ರಹಿಸಿ ಜುಲೈ 11ರಂದು ಭಾನುವಾರ ರಾಮ ನಗರಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡ ಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕನ್ನಡ ಚಳವಳಿಯ ತಾಯೂರು ವಿಠಲಮೂರ್ತಿ, ಮೂಗೂರು ನಂಜುಂಡಸ್ವಾಮಿ, ಹೆಚ್.ಆರ್.ಪಾರ್ಥಸಾರಥಿ, ಮಹಮದ್ ಜಿಯಾ, ಕುಮಾರ್ ಉಪಸ್ಥಿತರಿದ್ದರು.

Translate »