ಬೆಂಗಳೂರು, ಆ.11(ಕೆಎಂಶಿ)- ಸವಾಲುಗಳ ನಡುವೆ ಯಶಸ್ವಿ ಯಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆದು, ಫಲಿತಾಂಶವೂ ಪ್ರಕಟಗೊಳ್ಳಲು ಕಾರಣ ರಾದ ಎಲ್ಲರಿಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.
ಕೊರೊನಾ ಸವಾಲುಗಳ ನಡುವೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಡ್ಡಿಯಾಗ ಬಾರದು ಎಂದು ರಾಜ್ಯ ಸರ್ಕಾರ ಟೊಂಕ ಕಟ್ಟಿ ನಿಂತು, ಈ ವರ್ಷದ ಜೂನ್ 25ರಿಂದ ಜುಲೈ 3ರವರೆಗೆ, ಅತ್ಯಂತ ಯಶಸ್ವಿಯಾಗಿ ನಡೆಸಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಶೇ.71.80ರಷ್ಟು ಮಕ್ಕಳು ತೇರ್ಗಡೆಯಾಗಿದ್ದಾರೆ. ಆತಂಕಗಳನ್ನು ಮೀರಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ನನ್ನ ಶುಭ ಕಾಮನೆಗಳು. ತಮ್ಮ ಮುಂದಿನ ವಿದ್ಯಾಭ್ಯಾಸವು ಸುಗಮವಾಗಿ ನಡೆಯಲಿ. ತಮಗೆ ಉಜ್ವಲ ಭವಿಷ್ಯ ಲಭಿಸಲಿ. ಫಲಿತಾಂಶದಲ್ಲಿ ಹಿನ್ನಡೆ ಕಂಡ ಮಕ್ಕಳು ಧೈರ್ಯಗೆಡದೆ ಮತ್ತಷ್ಟು ಪರಿಶ್ರಮ, ಆತ್ಮವಿಶ್ವಾಸದಿಂದ ಸಿದ್ಧತೆ ನಡೆಸಿ, ಪೂರಕ ಪರೀಕ್ಷೆಗಳನ್ನು ಎದುರಿಸಿ, ಉತ್ತೀರ್ಣ ರಾಗಲಿ. ಪರೀಕ್ಷೆಗೆ ಹಾಜರಾದ ಎಲ್ಲಾ ಮಕ್ಕಳ ಪೋಷಕರಿಗೆ, ಪರೀಕ್ಷೆ ಯನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಶಿಕ್ಷಕ ವೃಂದಕ್ಕೆ ನಾನು ಆಭಾರಿ. ಹಿಂದೆಂದೂ ಕಾಣದ, ಕೇಳರಿಯ ದಂತಹ ಕೊರೊನಾ ಸವಾಲಿನ ಪರಿಸ್ಥಿತಿಗಳಲ್ಲಿ ಪರೀಕ್ಷೆ ಬರೆಯಲು ಮಕ್ಕಳನ್ನು ಸಿದ್ಧಗೊಳಿಸಿದ ತಮ್ಮೆಲ್ಲರ ಕೊಡುಗೆಗೆ ಹಾಗೂ ರಾಜ್ಯ ಸರ್ಕಾರದ ಮೇಲಿನ ತಮ್ಮ ವಿಶ್ವಾಸಕ್ಕೆ ನಾನು ಋಣಿ.
ಸರ್ಕಾರ ಈ ನಿಟ್ಟಿನಲ್ಲಿ ಅವಿರತ ಪ್ರಯತ್ನ ನಡೆಸಿ, ಇಡೀ ದೇಶ ಕರ್ನಾಟಕದತ್ತ ನೋಡುವಂತೆ ಮಾಡಿದೆ. ಕೊರೊನಾ ಸಾಂಕ್ರಾಮಿಕ ಸೋಂಕು ಇಡೀ ಜಗತ್ತನ್ನೇ ಬಾಧಿಸುತ್ತಿದ್ದು, ವಿಶ್ವದ ಬಹುತೇಕ ದೇಶಗಳು ಇದರಿಂದ ಸಾಕಷ್ಟು ಬಾಧೆಗೆ ಒಳಗಾಗಿವೆ.
ಭಾರತವೂ ಕೂಡ ಕಳೆದ ಕೆಲವು ತಿಂಗಳುಗಳಿಂದ ಕೊರೊನಾ ವಿರುದ್ಧ ಸಮರವನ್ನೇ ಸಾರಿದ್ದು, ದೇಶದ ನಾಗರಿಕರ ಸಹಕಾರ ಗಳಿಂದ, ವೈರಾಣು ನಿಯಂತ್ರಿಸಲು ನಿರ್ಣಾಯಕ ಹೋರಾಟ ನಡೆಸುತ್ತಿದೆ. ರಾಜ್ಯ ಸರ್ಕಾರವೂ ಎಲ್ಲಾ ರೀತಿಯಲ್ಲಿ ಸಾಂಕ್ರಾಮಿಕ ನಿಯಂತ್ರಣಕ್ಕೆ ಪ್ರಯತ್ನ ನಡೆಸುತ್ತಲೇ ಇದೆ. ಇದಕ್ಕೆ ಸಾರ್ವಜನಿಕರ ಸಹಕಾರ ಕೋರುತ್ತಾ, ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ಜನ ಮೆಚ್ಚುವಂತೆ ಯಶಸ್ವಿಯಾಗಿ ನಡೆಸಿದ ಇಡೀ ಆಡಳಿತ ಯಂತ್ರಕ್ಕೆ ಮತ್ತೊಮ್ಮೆ ನನ್ನ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.