ಯಡಿಯೂರಪ್ಪರಿಗೆ ವಯಸ್ಸಾಗಿದೆ, ಬದಲಿಸಿ ನಿರಾಣಿ, ಯತ್ನಾಳ್, ಬೆಲ್ಲದ್ ಇವರಲ್ಲಿ ಒಬ್ಬರನ್ನು ಸಿಎಂ ಮಾಡಿ: ವಿಶ್ವನಾಥ್
News

ಯಡಿಯೂರಪ್ಪರಿಗೆ ವಯಸ್ಸಾಗಿದೆ, ಬದಲಿಸಿ ನಿರಾಣಿ, ಯತ್ನಾಳ್, ಬೆಲ್ಲದ್ ಇವರಲ್ಲಿ ಒಬ್ಬರನ್ನು ಸಿಎಂ ಮಾಡಿ: ವಿಶ್ವನಾಥ್

June 18, 2021

ಬೆಂಗಳೂರು, ಜೂ.17(ಕೆಎಂಶಿ)-ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರನ್ನು ಬದಲಾಯಿಸಿ, ಹೊಸಬರನ್ನು ಆ ಸ್ಥಾನಕ್ಕೆ ತರ ಬೇಕೆಂದು ಮಾಜಿ ಸಚಿವ ವಿಧಾನಪರಿಷತ್ತು ಸದಸ್ಯ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.

ಅರುಣ್‍ಸಿಂಗ್ ಅವರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಹರಿ ಹಾಯ್ದರು. ಜೆಡಿಎಸ್‍ನಂತೆ ಯಡಿಯೂರಪ್ಪ ಸರ್ಕಾರವೂ ಕುಟುಂಬದ ಇಕ್ಕಳಕ್ಕೆ ಸಿಲುಕಿದೆ. ಇಂತಹ ರಾಕ್ಷಸ ಕಪಿಮುಷ್ಟಿ ಯಿಂದ ಬಿಡಿಸಿ ಎಂದು ನಾನು ವರಿಷ್ಠರಲ್ಲಿ ಮನವಿ ಮಾಡಿದ್ದೇನೆ.

ಮುಖ್ಯಮಂತ್ರಿ ಅವರ ಪುತ್ರ ವಿಜಯೇಂದ್ರ ಎಲ್ಲ ಇಲಾಖೆ ಗಳಲ್ಲೂ ಹಸ್ತಕ್ಷೇಪ ಮಾಡಿ, ಭಾರೀ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇದನ್ನು ಮುಖ್ಯಮಂತ್ರಿಯವರಿಗೆ ಕೇಳಿದರೆ, ವರಿಷ್ಠರಿಗೆ ನೀಡಬೇಕು ಎನ್ನುತ್ತಾರೆ. ಇತ್ತೀಚೆಗೆ ವಿಜಯೇಂದ್ರ ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ರೂ. ಮೌಲ್ಯದ ಟೆಂಡರ್ ಅನ್ನು ಕಾನೂನು ಬಾಹಿರವಾಗಿ ನೀಡಿ, ಶೇ.10ರಷ್ಟು ಭ್ರಷ್ಟಾಚಾರ ನಡೆಸಿದ್ದಾರೆ. ಗುತ್ತಿಗೆ ನೀಡುವುದಕ್ಕೂ ಮುನ್ನ ಸಂಬಂಧಪಟ್ಟ ನೀರಾವರಿ ನಿಗಮದ, ಇಲಾಖೆಯ ಅನುಮತಿಯನ್ನೂ ಪಡೆದಿಲ್ಲ, ಇದು ಒಂದು ಉದಾಹರಣೆ ಅಷ್ಟೆ. ದಿನವೂ ಇಂತಹ ಪ್ರಕರಣಗಳು ಸಾಕಷ್ಟು ನಡೆಯುತ್ತಲೇ ಇರುತ್ತವೆ. ಇಂತಹ ಸರ್ಕಾರ ನಮಗೆ ಬೇಕೇ ಎಂದು ಪ್ರಶ್ನಿಸಿದರು. ಮುಂದೆ ಯಡಿಯೂರಪ್ಪನವರನ್ನು ಬದಲಾಯಿಸಿ, ವೀರಶೈವ ಸಮು ದಾಯಕ್ಕೆ ಸೇರಿದ ಮುರುಗೇಶ್ ನಿರಾಣಿ ಅವರನ್ನೋ, ಬಸನಗೌಡ ಪಾಟೀಲ್ ಯತ್ನಾಳ್ ಇಲ್ಲವೇ ಅರವಿಂದ್ ಬೆಲ್ಲದ್ ಅವರನ್ನು ಸಿಎಂ ಮಾಡಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಮೊದಲು ಕುಟುಂಬ ರಕ್ಕಸ ರಾಜಕಾರಣದಿಂದ ಸರ್ಕಾರವನ್ನು ಬಿಡಿಸಿ, ಸಾಮಾನ್ಯ ಜ್ಞಾನ ಇರುವವರು ಸಿಎಂ ಆಗಲಿ. ಅವರ ವಯೋಮಿತಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಅವರ ಬಲ ಕುಗ್ಗಿದೆ. ಇದನ್ನು ಅವರ ಕುಟುಂಬದವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮೊದಲು ಯಡಿಯೂರಪ್ಪನವರನ್ನು ಬದಲಾವಣೆ ಮಾಡಿ ಎಂದು ಕೇಳಿದ್ದೇನೆ.

Translate »