ಅಂತೂ ಬೀದಿಗೆ ಬಂದ ಬಿಜೆಪಿ `ಬಣ’ ಬಲಾಬಲ
News

ಅಂತೂ ಬೀದಿಗೆ ಬಂದ ಬಿಜೆಪಿ `ಬಣ’ ಬಲಾಬಲ

June 18, 2021

ಬೆಂಗಳೂರು, ಜೂ.17(ಕೆಎಂಶಿ)- ಪಕ್ಷ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬದಲಾಯಿಸುವಂತೆ ಆಡಳಿತ ಪಕ್ಷದ ಕೆಲ ಸಚಿವರು, ಶಾಸಕರು ವರಿಷ್ಠರನ್ನು ಆಗ್ರಹಪಡಿಸಿದ್ದಾರೆ.

ಮತ್ತೆ ಕೆಲವರು ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಬೇಡ, ಮುಂದಿನ ಚುನಾವಣೆಯನ್ನು ಅವರ ನಾಯಕತ್ವದಲ್ಲೇ ನಡೆಸೋಣ. ಅವರ ವಿರುದ್ಧದ ಅಪಸ್ವರಕ್ಕೆ ಇಂದೇ ಇತಿಶ್ರೀ ಹಾಡಿ ಎಂದು ಆಗ್ರಹಿಸಿದ್ದಾರೆ. ಇದೆಲ್ಲವೂ ನಡೆದಿದ್ದು, ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲೇ. ಕಳೆದ ಎರಡು ದಿನದಿಂದ ರಾಜ್ಯ ನಾಯಕತ್ವ ಗೊಂದಲಕ್ಕೆ ಪರಿಹಾರ ಕಂಡು ಹಿಡಿಯಲು ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅರುಣ್‍ಸಿಂಗ್ ಅವರ ಮುಂದೆಯೇ ರಾಜ್ಯ ಬಿಜೆಪಿಯ `ಬಣ’ ಅಸಮಾಧಾನ ಸ್ಫೋಟಗೊಂಡಿತು.
ಇಂದು ಇಡೀ ದಿನ ಅರುಣ್‍ಸಿಂಗ್ ಶಾಂತಚಿತ್ತವಾಗಿ ಪಕ್ಷದ ಶಾಸಕರು ಮತ್ತು ಸಚಿವರ ಅಭಿಪ್ರಾಯವನ್ನು ಆಲಿಸಿ, ಅವರ ಮನವಿಗಳನ್ನು ಟಿಪ್ಪಣಿ ಮಾಡಿಕೊಂಡರು. ಅವರು ಎಲ್ಲಿಯೂ ತಮ್ಮ ಅನಿಸಿಕೆ ಯನ್ನು ವ್ಯಕ್ತಪಡಿಸಲಿಲ್ಲ. ಎಲ್ಲರ ಹೇಳಿಕೆಯನ್ನು ಶಾಂತಚಿತ್ತವಾಗಿ ಪಡೆದಿದ್ದಾರೆ. ಕೆಲವು ಶಾಸಕರು ಮೌಖಿಕವಾಗಿ ತಮ್ಮ ಅಭಿಪ್ರಾಯ ಗಳನ್ನು ಹೇಳಿಕೊಂಡರೆ, ಮತ್ತೆ ಕೆಲವರು ಲಿಖಿತವಾಗಿ ಹೇಳಿಕೆ ಸಲ್ಲಿಸಿದ್ದಾರೆ. ಒಟ್ಟಾರೆ ಚಿತ್ರಣ ನೋಡಿದರೆ, ಮೇಲ್ನೋಟಕ್ಕೆ ಮುಖ್ಯ ಮಂತ್ರಿ ಪರ ಬಲ ಹೆಚ್ಚಿದೆ ಎಂದು ಹೊರಗೆ ಕೇಳಿ ಬರುತ್ತಿದೆ. ಆದರೆ ಒಳಗೆ ಮಾತ್ರ ಬದಲಾವಣೆಗೆ ಹೆಚ್ಚು ಒತ್ತಡ ಬಂದಂತಿದೆ. ಬದಲಾವಣೆ ಕೇಳಿದವರು, ಮುಂದೆ ಯಾರನ್ನು ನಾಯಕನನ್ನಾಗಿ ಮಾಡಬೇಕೆಂದು ಹೇಳಿಲ್ಲ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ, ತಕ್ಷಣವೇ ನಾಯಕತ್ವ ಬದಲಾವಣೆ ಮಾಡಿ. ನಾವು ಅಧಿಕಾರದ ಚುಕ್ಕಾಣಿ

ಹಿಡಿಯಬಾರದೆಂದರೆ ಇವರನ್ನೇ ಮುಂದುವರೆಸಿ ಎಂದು ಕೆಲವರು ಕಡ್ಡಿ ಮುರಿದಂತೆ ಹೇಳಿದ್ದಾರೆ. ಮತ್ತೆ ಕೆಲವರು ಇದು ಬಿಜೆಪಿ ಸರ್ಕಾರವಲ್ಲ, ಕುಟುಂಬದ ಸರ್ಕಾರವಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ನಮ್ಮ ಮಾತಿಗೆ ಮನ್ನಣೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ವಿರುದ್ಧವಾಗಿ ಕೆಲವು ಶಾಸಕರು ಮತ್ತು ಸಚಿವರು ಕರ್ನಾಟಕದಲ್ಲಿ ಬಿಜೆಪಿ ಇದ್ದರೆ ಯಡಿಯೂರಪ್ಪ ನವರಿಂದಲೇ, ಅವರಿಂದಲೇ ಸರ್ಕಾರ ಬಂದಿರುವುದು. ಮುಂದಿನ ಚುನಾವಣೆಯನ್ನೂ ಅವರ ನಾಯಕತ್ವದಲ್ಲೇ ನಡೆಸಬೇಕು. ನಾವು ಮತ್ತೇ ಅಧಿಕಾರಕ್ಕೆ ಬರಬೇಕೆಂದರೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಬೇಡಿ ಎಂದು ಒತ್ತಾಯಿಸಿದ್ದಾರೆ. ಬೆರಳೆಣಿಕೆಯಷ್ಟು ಮಂದಿ ತಮ್ಮ ಸ್ವಾರ್ಥಕ್ಕಾಗಿ ಯಡಿಯೂರಪ್ಪನವರನ್ನು ಗುರಾಣಿಯಾಗಿಟ್ಟುಕೊಂಡು ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ. ಅಂತಹವರ ಮೇಲೆ ಇಂದೇ ಶಿಸ್ತುಕ್ರಮ ಕೈಗೊಂಡರೆ, ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯವೇ ಇರುವುದಿಲ್ಲ. ಕೋವಿಡ್-19 ಸಂಕಷ್ಟದಲ್ಲೂ ಯಡಿಯೂರಪ್ಪನವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಇಂತಹವರನ್ನು ಅಧಿಕಾರದಿಂದ ಕೆಳಗಿಳಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಸೊಪ್ಪು ಹಾಕಬೇಡಿ. ಯಡಿಯೂರಪ್ಪನವರ ಬಲದಿಂದಲೇ ಈ ಸರ್ಕಾರ ಬಂದಿದ್ದು. ಅಧಿಕಾರ ಸಿಗದವರು ಇಂತಹ ಕುಚೇಷ್ಟೆ ಮಾಡಿದ್ದಾರೆ. ಅವರನ್ನು ಮುಂದಿಟ್ಟುಕೊಂಡು ಹೋದರೆ, ಪಕ್ಷಕ್ಕೆ ಒಂದು ಸೀಟು ಬರುವುದಿಲ್ಲ. ಅವರ ತಾಳಕ್ಕೆ ತಕ್ಕಂತೆ ಕುಣಿಯಬೇಡಿ. ಜನರ ಮನ್ನಣೆಗೆ ವರಿಷ್ಠರು ಬೆಲೆ ನೀಡಬೇಕು. ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಬೇಡ ಎಂದು ಒತ್ತಾಯಿಸಿದ್ದಾರೆ. ಆ ಬಣ ಈ ಬಣ ತಟಸ್ಥ ಬಣ ಯಾವುದಕ್ಕೂ ಅವಕಾಶ ಕೊಡದ ಅರುಣ್‍ಸಿಂಗ್, ಪ್ರತ್ಯೇಕವಾಗಿ ಒಬ್ಬೊಬ್ಬರನ್ನೇ ಕರೆದು, ಅಭಿಪ್ರಾಯ ಸಂಗ್ರಹಿಸಿದರು. ಸುಮಾರು 50-60ಕ್ಕೂ ಹೆಚ್ಚು ಶಾಸಕರು ಗೌಪ್ಯವಾಗಿ ನಾಯಕತ್ವ ಹಾಗೂ ಸರ್ಕಾರದ ಆಡಳಿತದ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಪಕ್ಷದಲ್ಲಿ ಬಣಗಳಿರುವುದಿಂದು ಬಹಿರಂಗಗೊಂಡಿದೆ.

Translate »