ಲಸಿಕೆ ಹಾಕುವುದರಲ್ಲಿ, ಕೋವಿಡ್ ಪರೀಕ್ಷೆಯಲ್ಲಿ ಶಾಸಕ ರಾಮದಾಸರಿಂದ `ಪಕ್ಷ’ಪಾತ: ಆರೋಪ
ಮೈಸೂರು

ಲಸಿಕೆ ಹಾಕುವುದರಲ್ಲಿ, ಕೋವಿಡ್ ಪರೀಕ್ಷೆಯಲ್ಲಿ ಶಾಸಕ ರಾಮದಾಸರಿಂದ `ಪಕ್ಷ’ಪಾತ: ಆರೋಪ

June 18, 2021

ಮೈಸೂರು,ಜೂ.17(ಎಂಟಿವೈ)- ಮೈಸೂರಿನ ಕೆ.ಆರ್. ಕ್ಷೇತ್ರದಲ್ಲಿ ಶಾಸಕ ಎಸ್.ಎ.ರಾಮದಾಸ್ ಕೋವಿಡ್ ಪರೀಕ್ಷೆ ಹಾಗೂ ಲಸಿಕೆ ನೋಂದಣಿಗೆ ಸರ್ಕಾರಿ ಸವಲತ್ತು ಬಳಸಿ ಕೊಂಡು ಮತಗಟ್ಟೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಬಳಸಿ ಕೊಂಡು ಅಧಿಕಾರ ದುರ್ಬಳಕೆಯೊಂದಿಗೆ, ಕ್ಷೇತ್ರದ ಜನರ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆರೋಪಿಸಿದ್ದಾರೆ.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಆರ್.ಕ್ಷೇತ್ರದಲ್ಲಿ ಎಲ್ಲರಿಗೂ ಲಸಿಕೆ ಕೊಡಿಸುವುದಾಗಿ, ರಾಜ್ಯದ 224 ಶಾಸಕರಲ್ಲಿ ಯಾರೂ ಹೇಳದ ಸುಳ್ಳನ್ನು ಕೆ.ಆರ್.ಕ್ಷೇತ್ರದ ಶಾಸಕರು ಹೇಳಿದ್ದಾರೆ. ಲಸಿಕೆ ದಾಸ್ತಾನು ಇಲ್ಲದೆ ಪರದಾಡುತ್ತಿದ್ದರೂ ಶಾಸಕ ಎಸ್.ಎ.ರಾಮದಾಸ್ ಲಸಿಕೆ ಬಗ್ಗೆ ಜನರಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಮೈಸೂರು ಸೇರಿದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರು ಸೂಕ್ತ ಚಿಕಿತ್ಸೆ ಸಿಗದೆ ಪರದಾಡು ವಂತಹ ಸ್ಥಿತಿ ನಿರ್ಮಾಣವಾಗಿದೆ. ಹಲವು ಮಂದಿ ಸೋಂಕಿ ತರು ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಇದೀಗ ಲಸಿಕೆ ಹಾಗೂ ಕೋವಿಡ್ ಪರೀಕ್ಷೆ ಹೆಸರಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ರಾಮದಾಸ್ ಮುಂದಾಗಿರುವುದು ಖಂಡನೀಯ ಎಂದರು. ಆರಂಭದಿಂದಲೂ ಬಿಜೆಪಿ ಸರ್ಕಾರ ಹಾಗೂ ಆ ಪಕ್ಷದ ಶಾಸಕರು ಸೋಂಕಿತರ ಹಿತ ಕಾಯು ವಲ್ಲಿ ವಿಫಲವಾಗಿದ್ದಾರೆ. ಕೊರೊನಾ ಸುರಕ್ಷ ಸಾಮಗ್ರಿ, ವೈದ್ಯಕೀಯ ಪರಿಕರ ಖರೀದಿಯಲ್ಲಿ ಮಿತಿ ಮೀರಿದ ಭ್ರಷ್ಟಾ ಚಾರ ನಡೆಸಿ, ಬೆಡ್ ಬ್ಲಾಕಿಂಗ್ ದಂಧೆÉ, ಲಸಿಕೆ ದಂಧೆÉ ನಡೆಸಿದ್ದಾರೆ. ಇದೀಗ ಮೈಸೂರಿನ ಕೆ.ಆರ್.ಕ್ಷೇತ್ರ ದಲ್ಲಿ ಲಸಿಕೆಗೆ ನೋಂದಣಿ ಹಾಗೂ ಕೋವಿಡ್ ಪರೀಕ್ಷೆ ಹೆಸರಲ್ಲಿ ಜನ ರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಸೋಮಶೇಖರ್ ಕಿಡಿಕಾರಿದರು.

ಇಡೀ ಕ್ಷೇತ್ರದ ಜನರಿಗೆ ಲಸಿಕೆ ಹಾಕಿಸುತ್ತೇನೆ, ಎಲ್ಲರೂ ಮನೆ ಸಮೀಪದ ಬೂತ್‍ಗಳಿಗೆ ಬನ್ನಿ ಎಂದಿದ್ದಾರೆ. ಇಂತಹ ವಂಚನೆ, ದ್ರೋಹ ಎಲ್ಲೂ ನಡೆದ ಉದಾಹರಣೆಯಿಲ್ಲ. ನಗರದಲ್ಲಿ ಲಸಿಕೆಯ ಸಂಗ್ರಹವೇ ಇಲ್ಲದಿರುವಾಗ ಎಲ್ಲರಿಗೂ ಎಲ್ಲಿಂದ ಕೊಡಿಸುತ್ತಾರೆ. ಸುಳ್ಳು ಹೇಳಿ ಜನರನ್ನು ಏಕೆ ತಪ್ಪು ದಾರಿಗೆಳೆಯುತ್ತಿದ್ದಾರೆ. ಸರ್ಕಾರಿ ಸವಲತ್ತುಗಳನ್ನು ಬಳಸಿಕೊಂಡು ಲಸಿಕೆ ಕಾರ್ಯಕ್ರಮಕ್ಕೆ ಮುಂದಾಗಿದ್ದೀರಿ. ಆದರೆ ಎಲ್ಲ ಕಡೆ ಬಿಜೆಪಿಯ ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರನ್ನೇ ಕೂರಿಸಿಕೊಂಡು ಪಕ್ಷದ ಕಾರ್ಯಕ್ರಮದಂತೆ ಮಾಡಲಾಗು ತ್ತಿದೆ. ಕೋವಿಡ್ ವಿಚಾರದಲ್ಲಿ ರಾಜಕೀಯ ಮಾಡಬಾರದು. ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಈಗಾಗಲೇ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು ಜನರ ಒಳಿತಿಗಾಗಿ ಆಂಬುಲೆನ್ಸ್, ಔಷಧಿ, ಆಕ್ಸಿಜನ್ ಕಾನ್ಸಂ ಟ್ರೇಟರ್, ವೆಂಟಿಲೇಟರ್ ಸೇರಿದಂತೆ ಇನ್ನಿತರ ಪರಿಕರ ನೀಡಿದ್ದಾರೆ. ಪಾಲಿಕೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಅಧಿ ಕಾರದಲ್ಲಿದೆ. ಆ ಎರಡೂ ಪಕ್ಷದವರನ್ನು ಬದಿಗೊತ್ತಿ ಕೇವಲ ತಮ್ಮದೇ ಪಕ್ಷದ ಬೂತ್ ಮಟ್ಟದ ಅಧ್ಯಕ್ಷರನ್ನು ಕೂರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಪಾಲಿಕೆ ಸದಸ್ಯ ಜೆ.ಗೋಪಿ ಮಾತನಾಡಿ, ಜಿಲ್ಲಾಡಳಿತ, ಪಾಲಿಕೆ ಸಿಬ್ಬಂದಿಗಳನ್ನು ಬಳಸಿಕೊಂಡು ಲಸಿಕೆ ಪಡೆಯು ವವರ ಹೆಸರು ನೋಂದಣಿ ಮಾಡಲಾಗುತ್ತಿದೆ. ಆದರೆ, ಬೂತ್‍ಗಳಲ್ಲಿ ಅವರ ಪಕ್ಷದ ಅಧ್ಯಕ್ಷರನ್ನು ಕೂರಿಸಿಕೊಂಡು ನೋಂದಣಿ ಮಾಡಿಸಿಕೊಳ್ಳುವ ಮೂಲಕ ಪಕ್ಷದ ಕಾರ್ಯಕ್ರಮ ದಂತೆ ಬಿಂಬಿಸುತ್ತಿದ್ದಾರೆ. ಇದು ಖಂಡನೀಯ. ಈ ಕಾರ್ಯ ಕ್ರಮದ ಸಂಬಂಧ ನಡೆಸಿದ ಪೂರ್ವಭಾವಿ ಸಭೆಗೆ ಬಿಜೆಪಿ ಹೊರತುಪಡಿಸಿದರೆ ಪಕ್ಷದ ಬೇರೆ ಸದಸ್ಯರನ್ನು ಸಭೆಗೆ ಆಹ್ವಾನಿಸಿಲ್ಲ. ಲಸಿಕೆ ಹಾಕಿಸುವುದಕ್ಕೆ, ಕೋವಿಡ್ ಪರೀಕ್ಷೆ ನಡೆಸುವುದಕ್ಕೆ ನಮ್ಮ ಸಹಕಾರವಿದೆ. ಈಗಾಗಲೇ ನಾವೇ ನಮ್ಮ ವಾರ್ಡ್‍ಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ತಮ್ಮ ಪಕ್ಷದ ವಾರ್ಡ್ ಸಮಿತಿ ಅಧ್ಯಕ್ಷರನ್ನು ಮತಗಟ್ಟೆಯಲ್ಲಿ ಕೂರಿಸುವುದು ಎಷ್ಟು ಸರಿ. ಬದಲಾಗಿ ಅಧಿಕಾರಿಗಳನ್ನು ಕೂರಿಸುವಂತೆ ಮನವಿ ಮಾಡಿದ್ದರೂ, ಅದಕ್ಕೆ ಕಿವಿಗೊಟ್ಟಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯೆ ವೀಣಾ, ಸೇವಾದಳದ ಅಧ್ಯಕ್ಷ ಗಿರೀಶ್, ಯೂತ್ ಕಾಂಗ್ರೆಸ್ ನಗರಾಧ್ಯಕ್ಷ ಹ್ಯಾರಿಸ್, ಕಾರ್ಯದರ್ಶಿ ಮನೋಜ್, ಐಟಿ ಸೆಲ್ ಅಧ್ಯಕ್ಷÀ ನಿರಾಲ್ ಶಾ, ಗುಣಶೇಖರ್ ಇದ್ದರು.

Translate »