ಮೈಸೂರು,ಡಿ.2(ಪಿಎಂ)-ಜನತೆ ಸಮಸ್ಯೆ ಪರಿಹರಿ ಸಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ. ಶಾಸಕ ರಿಗೆ ಕ್ಷೇತ್ರಗಳನ್ನೇನು ಬರೆದುಕೊಡಲಾಗಿದೆಯೇ? ಇವರು ಜನತೆ ಸಮಸ್ಯೆ ನಿವಾರಿಸಿದ್ದರೆ ಜಿಲ್ಲಾಧಿಕಾರಿಗಳು ಜನರ ಬಳಿಗೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ನಡೆ ಬೆಂಬಲಿಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಹಲವು ಶಾಸಕರ ಮುಸುಕಿನ ಗುದ್ದಾಟಕ್ಕೆ ಸಂಬಂಧಿಸಿದಂತೆ ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿನ ತಮ್ಮ ಕಚೇರಿ ಬಳಿ ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲಾಧಿ ಕಾರಿಗಳು ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಾವು ಬೆಂಬಲಿಸಬೇಕು. ಸರಳ ದಸರಾ ಮಹೋತ್ಸವ ಉತ್ತಮವಾಗಿ ನೆರವೇರಿಸಿದ್ದಾರೆ. ಕೊರೊನಾ ಸೋಂಕು ಕೂಡ ಜಿಲ್ಲೆಯಲ್ಲಿ ಇಳಿಮುಖವಾಗುವಂತೆ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾಧಿ ಕಾರಿಯಾಗಿ ಬಂದ ಕೆಲವೇ ದಿನಗಳಲ್ಲಿ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ನಿವಾರಿಸಲು ಮುಂದಾಗಿದ್ದಾರೆ. ಅದಕ್ಕೆ ಬೆಂಬಲ ನೀಡಬೇಕೇ ಹೊರತು ವಿರೋಧಿಸುವು ದಲ್ಲ. ಗ್ರಾಪಂ ಚುನಾವಣೆ ಬಳಿಕ ನಾನು ಕೂಡ ಜನರ ಬಳಿಗೆ ಹೋಗುತ್ತೇನೆ. ನಾನು ಇವರ ಅಪ್ಪಣೆ ಕೇಳೋಕೆ ಆಗುತ್ತಾ? ಎಂದು ಪ್ರಶ್ನಿಸಿದರು. ಇವರು (ಶಾಸಕರು) ಮೂರ್ನಾಲ್ಕು ಬಾರಿ ಗೆದ್ದರಲ್ಲ. ಜನರ ಸಮಸ್ಯೆ ನಿವಾರಿಸಿದ್ದರೆ, ಡಿಸಿಯವರು ಜನತೆ ಬಳಿಗೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ. ಇವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಂಎಲ್‍ಎ, ಎಂಪಿ ಗಳಿಗೆ ಕ್ಷೇತ್ರ ಬರೆದುಕೊಡಲಾಗಿದೆಯೇ? ಅಂದು ಕೆಡಿಪಿ ಸಭೆಯಲ್ಲಿ ವಸ್ತುನಿಷ್ಠವಾಗಿ ಜಿಲ್ಲಾಧಿಕಾರಿಗಳನ್ನು ಪ್ರಶ್ನೆ ಮಾಡ ಬಹುದಿತ್ತು. ಆದರೆ ಮೂರನೇ ಮಹಾರಾಣಿ ಎಂದು ವೈಯಕ್ತಿಕ ಟೀಕೆ ಏಕೆ ಮಾಡಬೇಕು? ರಾಜಕಾರಣಿಗಳು ಎಂದರೆ ಅಧಿಕಾರಿಗಳ ಬಗ್ಗೆ ಏನು ಬೇಕಾದರೂ ಮಾತ ನಾಡಬಹುದೇ? ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಣೆ ಹಾಗೂ ನ್ಯಾಯಾಂಗ ಈ ಎರಡರ ವಿಶೇಷಾಧಿಕಾರ ಇರುವುದು ಜಿಲ್ಲಾಧಿಕಾರಿ ಒಬ್ಬರಿಗೆ ಮಾತ್ರ. ನಾಲ್ಕೈದು ಮಂದಿ ಶಾಸಕರು ಸುದ್ದಿಗೋಷ್ಠಿ ಮಾಡಿ ಏನು ಎದುರಿಸುತ್ತೀರಾ? ಜನರಿಗಾಗಿ ಒಳ್ಳೆಯ ಕೆಲಸ ಮಾಡಲು ಶಿಷ್ಟಾಚಾರದ ಅಗತ್ಯವಿಲ್ಲ. ಜೊತೆಗೆ ಹಕ್ಕುಚ್ಯುತಿ ಮಂಡಿಸುತ್ತೇವೆ ಎನ್ನುತ್ತಾರೆ. ಇವರೆಲ್ಲಾ ಎರಡ್ಮೂರು ಬಾರಿ ಶಾಸಕರು, ಪರಿಷತ್ ಸದಸ್ಯರಾಗಿದ್ದಾರೆ. ಹಕ್ಕುಚ್ಯುತಿ ಎಂದ ರೇನು? ಇದಕ್ಕೆ ಸಂಬಂಧಿಸಿದ ಪುಸ್ತಕ ಓದಿದ್ದೀರಾ? ಓದಿ ಹಕ್ಕುಚ್ಯುತಿ ಎಂದರೆ ಗೊತ್ತಾಗುತ್ತದೆ. ನಿಮ್ಮ ಸಂವಿಧಾನಾತ್ಮಕ ಕರ್ತವ್ಯವಾದ ಅಧಿವೇಶನಕ್ಕೆ ಹೋಗುವ ವೇಳೆ ನಿಮ್ಮನ್ನು ಉದ್ದೇಶಪೂರ್ವಕವಾಗಿ ತಡೆದರೆ ಆಗ ಮಾತ್ರ ಹಕ್ಕುಚ್ಯುತಿ ಮಂಡಿಸಬಹುದು. ಜಿಲ್ಲಾಧಿಕಾರಿಗಳು ಜನತೆಗೆ ಸ್ಪಂದಿಸಲು ಯಾರೂ ಅಡಚಣೆ ಮಾಡಲಾಗದು ಎಂದರು.
ಪ್ರತಾಪ್ ಸಿಂಹ ಹಿಂದಿನ ಹುಣಸೂರು ಪ್ರಕರಣ ನೆನಪಿಸಿ ಕೊಳ್ಳಲೆಂಬ ಶಾಸಕ ಸಾ.ರಾ.ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದ ಸಂಸದರು, ಸಂಸದನಾಗಿ ಕ್ಷೇತ್ರಕ್ಕೆ ಹೋಗುತ್ತಿದ್ದ ನನ್ನನ್ನು ತಡೆದರು. ಎಎಸ್‍ಪಿ ಕಾಲಿನ ಮೇಲೆ ಕಾರು ಹತ್ತಿಸಿದ್ದಾ ರೆಂದು ಸುಳ್ಳು ಪ್ರಕರಣ ದಾಖಲಿಸಿದ್ದರು. 1800 ಕೆಜಿ ಇನೋವಾ ಕಾರು ಕಾಲಿನ ಮೇಲೆ ಹತ್ತಿದರೆ ಕಾಲು ಉಳಿಯುತ್ತದೆಯೇ? ಎಂದು ಪ್ರಶ್ನಿಸಿದರಲ್ಲದೆ, ಈಗ
ಹುಣಸೂರಿನಲ್ಲಿ ಹನುಮ ಜಯಂತಿ ಚೆನ್ನಾಗಿ ನಡೆಯುತ್ತಿದೆ. ಎಲ್ಲವನ್ನೂ ಸರಿಪಡಿಸಿ ದ್ದೇವೆ. ಸುಮ್ಮನೆ ಗೊಂದಲ ಸೃಷ್ಟಿ ಮಾಡಬೇಡಿ ಎಂದು ಸಾ.ರಾ.ಮಹೇಶ್ ವಿರುದ್ಧ ಕಿಡಿಕಾರಿದರು. ಲವ್ ಜಿಹಾದ್ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಯಾಗಲಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸದರು, ಲವ್ ಜಿಹಾದ್‍ನಿಂದ ಬಹಳಷ್ಟು ಮಂದಿ ನೊಂದಿದ್ದಾರೆ. ಅವರು ತಮಗಾದ ದೌರ್ಜನ್ಯ ಹೇಳಿಕೊಂಡಿದ್ದಾರೆ. ಒತ್ತಾಯಪೂರ್ವಕ ಮತಾಂತರ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ಆಧರಿಸಿ ಉತ್ತರ ಪ್ರದೇಶ ಸರ್ಕಾರ `ಲವ್ ಜಿಹಾದ್ ನಿಷೇಧ ಕಾಯ್ದೆ’ ಜಾರಿಗೆ ಸುಗ್ರೀ ವಾಜ್ಞೆ ಹೊರಡಿಸಿದೆ. ಈ ಸುಗ್ರೀವಾಜ್ಞೆ ಎಲ್ಲಾ ರಾಜ್ಯಗಳಿಗೆ ಮೇಲ್ಪಂಕ್ತಿ ಆಗಬೇಕು. ನಮ್ಮ ರಾಜ್ಯ ಸರ್ಕಾರವೂ ಈ ಕಾನೂನು ಜಾರಿಗೊಳಿಸಲು ತ್ವರಿತ ಕ್ರಮ ವಹಿಸಬೇಕು ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಲವ್ ಜಿಹಾದ್ ನಿಷೇಧ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿರುವ ಸಂಬಂಧ ಪ್ರತಿಕ್ರಿಯಿಸಿದ ಸಂಸದರು, ಸಿದ್ದರಾಮಯ್ಯ ಕಾನೂನು ಪದವೀಧರರು. ಅವರು ಇಂತಹ ಒಂದು ಕಾಯ್ದೆಗೆ ಕೋರ್ಟ್ ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂಬುದನ್ನು ಮನಸಿನಲ್ಲಿಟ್ಟುಕೊಂಡರೆ ಒಳ್ಳೆಯದಿತ್ತು ಎಂದು ತಿಳಿಸಿದರು. ಈ ವಿಚಾರದಲ್ಲಿ ಬಿಜೆಪಿಯ ಎಲ್ಲರದು ಒಂದೇ ನಿಲುವು ಆಗಿದೆಯೇ? ಎಂಬುದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಪ್ರೀತಿ -ಪ್ರೇಮದ ಹೆಸರಿನಲ್ಲಿ ಕೆಟ್ಟ ಉದ್ದೇಶ ಈಡೇರಿಸಿಕೊಳ್ಳುವ ಪ್ರಕರಣಗಳು ಸಾಬೀತಾದ ಹಿನ್ನೆಲೆಯಲ್ಲಿ ಕಳೆದ 10 ವರ್ಷಗಳಿಂದಲೂ ಬಿಜೆಪಿ, ಸಂಘ ಪರಿವಾರ ಇಂತಹ ಒಂದು ಕಾಯ್ದೆಯ ಪರ ದನಿ ಎತ್ತುತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂಬರುವ ಅಧಿವೇಶನದಲ್ಲಿ ಈ ಕುರಿತಂತೆ ಕ್ರಮ ವಹಿಸಬೇಕು ಎಂದರು.
ಸಿದ್ದರಾಮಯ್ಯ ಗೆಲುವಿನ ರಹಸ್ಯವೇ ಇದು!
ಅವರ ಮಾತಲ್ಲೇ ಈಗ ಸತ್ಯ ಬಯಲಾಗಿದೆ ಒಳ್ಳೆ ಕೆಲಸ ಮಾಡಿದ್ದಕ್ಕೆ
ಜನ ಮತ್ತೆ ನನ್ನ, ಜಿ.ಟಿ.ದೇವೇಗೌಡರನ್ನ ಕೈಹಿಡಿದರು; ಸಂಸದ ಸಿಂಹ
ಮೈಸೂರು, ಡಿ.2(ಪಿಎಂ)-ಕಳೆದ ಲೋಕಸಭಾ ಚುನಾವಣೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಹಣದ ಮೂಲಕ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಪ್ರಯತ್ನಿಸಿರು ವುದು ಈಗ ಅವರ ಮಾತಿನಿಂದಲೇ ಸ್ಪಷ್ಟವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅಲೆ ಹಾಗೂ ನಾನು ಮಾಡಿದ ಒಳ್ಳೆ ಕೆಲಸದಿಂದ ಕ್ಷೇತ್ರದ ಜನತೆ ಮತ್ತೆ ನನ್ನ ಹಾಗೂ ಜಿ.ಟಿ.ದೇವೇಗೌಡರನ್ನು ಕೈಹಿಡಿದರು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿ ಎದುರಿಸಿದ ಕಳೆದ ಲೋಕಸಭಾ ಚುನಾವಣೆ ವೇಳೆ ಮೈಸೂರು-ಕೊಡಗು ಕ್ಷೇತ್ರಕ್ಕೆ ಸಂಬಂಧಿಸಿದಂತೆ `ಶಾಸಕ ಜಿ.ಟಿ.ದೇವೇಗೌಡರು ನಮ್ಮಿಂದ ಹಣ ಪಡೆದು, ಬಿಜೆಪಿ ಪರ ಕೆಲಸ ಮಾಡಿದರು’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯರ ಹಣ, ಪ್ರಧಾನಿ ಮೋದಿಯವರ ವರ್ಚಸ್ಸಿನ ಮುಂದೆ ಏನೂ ಮಾಡಲಾಗಿಲ್ಲ. ಇತ್ತೀಚೆಗೆ ನಡೆದ ವಿಧಾನಸಭಾ ಉಪಚುನಾವಣೆ ಸಂಬಂಧ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಭಾರೀ ಆರೋಪ ಮಾಡುತ್ತಿದ್ದರು. ಆದರೆ ಈಗ ಅವರೇ ಚುನಾವಣೆಯಲ್ಲಿ ಹಣ ಹಂಚಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದರು.
ಜಿ.ಟಿ.ದೇವೇಗೌಡರು `ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಕಾರ್ಯಕರ್ತರಿಗೆ ಹಣ ನೀಡಲಾಗಿದೆ. ಅದನ್ನು ನನ್ನ ಮೂಲಕ ನೀಡಿಲ್ಲ. ವೈಯಕ್ತಿಕವಾಗಿಯೂ ನಾನು ಹಣ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ವೈಯಕ್ತಿಕವಾಗಿ ಕೊಟ್ಟಿರುವ ರೀತಿಯಲ್ಲಿ ಬಿಂಬಿಸಲು ಹೊರಟಿರುವುದನ್ನು ಗಮನಿಸಿದರೆ ಅವರ ರಾಜಕೀಯ ಬಂಡವಾಳವೇ ಹಣ ಎಂದಾಯಿತು. ಕೆಲಸ ಮಾಡದವರು ಹಣದ ಮೂಲಕ ಮುಂದುವರೆಯುತ್ತಾರೆ. 2018ರ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅದನ್ನೇ ಮಾಡಲು ಹೊರಟರು. ಆದರೆ ಒಳ್ಳೆಯ ಕೆಲಸ ಮಾಡಿದ್ದ ಜಿ.ಟಿ.ದೇವೇಗೌಡರಿಗೆ ಭಾರೀ ಅಂತರದ ಗೆಲುವು ನೀಡಿದರು. ಮತ್ತೆ 2019ರ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಣದ ಮೂಲಕ ಗೆಲ್ಲಬೇಕೆಂದು ಪ್ರಯತ್ನಪಟ್ಟರೂ ಮೋದಿ ಅಲೆ ಮುಂದೆ ಅದು ನಡೆಯಲಿಲ್ಲ ಎಂದರು.