ಬೆಂಗಳೂರು, ಜೂ.7-ಯುವ ನಟ ಚಿರಂಜೀವಿ ಸರ್ಜಾ ಅವರು ಭಾನು ವಾರ ಮಧ್ಯಾಹ್ನ ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ.
39 ವರ್ಷ ವಯಸ್ಸಿನ ಚಿರಂಜೀವಿ ಸರ್ಜಾ ಅವರಿಗೆ ಶನಿವಾರ ರಾತ್ರಿ 3 ಬಾರಿ ಮೂರ್ಛೆ ಬಂದಿತ್ತು. ರಾತ್ರಿ ಉಸಿ ರಾಡಲು ಕಷ್ಟಪಡುತ್ತಿದ್ದರು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಿ ವಾಪಸ್ ಕರೆತಂದಿದ್ದರು. ಇಂದು ಮಧ್ಯಾಹ್ನ 3 ಗಂಟೆಗೆ ವೈದ್ಯರ ಅಪಾಯಿಂಟ್‍ಮೆಂಟ್ ನಿಗದಿಯಾಗಿತ್ತು. ಆದರೆ 2.15ರ ಸುಮಾರಿ ನಲ್ಲಿ ಮನೆಯಲ್ಲೇ ಕುಸಿದು ಬಿದ್ದರು. ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿ, 3.45ರ ಸುಮಾರಿನಲ್ಲಿ ಹೃದಯಾ ಘಾತದಿಂದ ಅವರು ಮೃತಪಟ್ಟಿದ್ದಾರೆ.
2009ರಲ್ಲಿ `ವಾಯುಪುತ್ರ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾ ರ್ಪಣೆ ಮಾಡಿದ ಅವರು, `ಗಂಡೆದೆ’, `ಚಿರು’, `ದಂಡಂ ದಶಗುಣಂ’, `ವರದ ನಾಯಕ’, `ರುದ್ರ ತಾಂಡವ’ ಸೇರಿದಂತೆ ಇಲ್ಲಿಯವರೆಗೂ 22 ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಇನ್ನೂ ಐದಾರು ಸಿನಿಮಾಗಳ ಶೂಟಿಂಗ್ ನಡೆಯುತ್ತಿತ್ತು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಶೂಟಿಂಗ್ ಸ್ಥಗಿತಗೊಂಡಿತ್ತು. ಹಿರಿಯ ನಟ ಅರ್ಜುನ್ ಸರ್ಜಾ ಸೋದರಳಿಯನಾದ ಇವರು, ತನ್ನ ಬಾಲ್ಯದ ಗೆಳತಿ, ತಾರಾ ದಂಪತಿ ಸುಂದರ ರಾಜ್ ಮತ್ತು ಪ್ರಮೀಳಾ ಜೋಷಾಯ್ ಪುತ್ರಿ ನಾಯಕ ನಟಿ ಮೇಘನಾ ರಾಜ್ ಅವರನ್ನು ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಮೇಘನಾ ಅವರು ಈಗ 4 ತಿಂಗಳ ಗರ್ಭಿಣಿಯಾಗಿದ್ದು, ಚಿರಂಜೀವಿ ಸರ್ಜಾ ಅವರ ಸಾವು ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ಚಿರಂಜೀವಿ ಸರ್ಜಾ ಮೃತಪಟ್ಟ ವಿಷಯ ಗೊತ್ತಾಗುತ್ತಿದ್ದಂತೆಯೇ ಕನ್ನಡ ಚಿತ್ರರಂಗದ ಹಲವಾರು ನಟ-ನಟಿಯರು ಆಸ್ಪತ್ರೆಗೆ ಬಂದು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಸರ್ಜಾ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ನಾಯಕ ನಟರಾದ ಪುನೀತ್ ರಾಜ್‍ಕುಮಾರ್, ದರ್ಶನ್, ಗಣೇಶ್, ಸುದೀಪ್, ಸೃಜನ್ ಲೋಕೇಶ್, ನಟಿಯರಾದ ತಾರಾ, ಸುಧಾರಾಣಿ, ಅಮೂಲ್ಯ, ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಬನಶಂಕರಿ ರುದ್ರಭೂಮಿಯಲ್ಲಿ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಕನಕಪುರ ರಸ್ತೆಯಲ್ಲಿರುವ ಧ್ರುವಸರ್ಜಾ ಅವರ ಫಾರ್ಮ್‍ನಲ್ಲಿ ಸೋಮವಾರ ಮಧ್ಯಾಹ್ನ 2ರಿಂದ 3 ಗಂಟೆಯೊಳಗೆ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚೆನ್ನೈನಲ್ಲಿದ್ದ ಅರ್ಜುನ್ ಸರ್ಜಾ ರಾತ್ರಿ ವೇಳೆಗೆ ಬೆಂಗಳೂರು ತಲುಪಿದರು.
ನಿನ್ನೆಯವರೆಗೆ ಲವಲವಿಕೆಯಿಂದಲೇ ಇದ್ದ ಚಿರಂಜೀವಿ ಸರ್ಜಾ, ನಿನ್ನೆ ತನ್ನ ಸಹೋದರ ಧ್ರುವ ಸರ್ಜಾ ಜೊತೆ ಇರುವ ಬಾಲ್ಯದ ಹಾಗೂ ಇತ್ತೀಚಿನ ಫೋಟೋ ವನ್ನು ಇನ್‍ಸ್ಟ್ರಾಗ್ರಾಂನಲ್ಲಿ ಅಪ್‍ಲೋಡ್ ಮಾಡಿ `ಅಂದು-ಇಂದು ನಾವೆಲ್ಲರೂ ಒಂದೇ, ನೀವೂ ಏನ್ ಹೇಳ್ತೀರಿ’ ಎಂದು ಬರೆದಿದ್ದರು. ವಿಧಿಯಾಟ ಇಂದು ಮಧ್ಯಾಹ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ.
ಕೋವಿಡ್ ಟೆಸ್ಟ್: ಉಸಿರಾಟ ತೊಂದರೆ ಕಾಣಿಸಿಕೊಂಡು ಹೃದಯಾಘಾತದಿಂದ ಮೃತಪಟ್ಟ ಚಿರಂಜೀವಿ ಸರ್ಜಾ ಅವರ ಗಂಟಲ ದ್ರವವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೂಚನೆ ಮೇರೆಗೆ ಸಂಗ್ರಹಿಸಿ, ಪರೀಕ್ಷೆಗೊಳಪಡಿಸಲಾಗಿ ವರದಿ ನೆಗೆಟೀವ್ ಬಂದಿದೆ ಎಂದು ಮೂಲಗಳು ತಿಳಿಸಿವೆ.