ಇಂದಿನಿಂದ ಮೈಸೂರು ಅರಮನೆ ವೀಕ್ಷಣೆಗೆ ಅವಕಾಶ
ಮೈಸೂರು

ಇಂದಿನಿಂದ ಮೈಸೂರು ಅರಮನೆ ವೀಕ್ಷಣೆಗೆ ಅವಕಾಶ

June 8, 2020

ಮೈಸೂರು, ಜೂ.7(ಎಂಟಿವೈ)-ಲಾಕ್‍ಡೌನ್‍ನಿಂ ದಾಗಿ ಕಳೆದ 76 ದಿನದಿಂದ ಮುಚ್ಚಲ್ಪಟ್ಟಿದ್ದ ಮೈಸೂ ರಿನ ಮುಂಚೂಣಿ ಪ್ರವಾಸಿ ತಾಣ ಅರಮನೆ ನಾಳೆ (ಜೂ.8)ಯಿಂದ ಕೆಲವು ಕಟ್ಟುನಿಟ್ಟಿನ ನಿಯಮ ದೊಂದಿಗೆ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿ ಕೊಡಲಾಗಿದ್ದು. ಈ ತಿಂಗಳ ಅಂತ್ಯದವರೆಗೂ ವಾರ ದಲ್ಲಿ ಕೇವಲ ಐದು ದಿನ ಮಾತ್ರ ತೆರೆದಿರುತ್ತದೆ.

ವಿಶ್ವದ ಅನೇಕ ರಾಷ್ಟ್ರವನ್ನು ಕಂಗೆಡಿಸಿರುವ ಕೊರೊನಾ ಮಹಾಮಾರಿಯಿಂದಾಗಿ ಮೈಸೂರಿನ ಪ್ರವಾಸಿ ತಾಣ ವನ್ನು ಸ್ತಬ್ಧಗೊಳಿಸಿತ್ತು. ಮಾ.22ರಂದು ಜನತಾ ಕಫ್ರ್ಯೂಗೆ ಬಂದ್ ಆಗಿದ್ದ ಮೈಸೂರು ಅರಮನೆ, ಮಾ.24ರಿಂದ ಲಾಕ್‍ಡೌನ್ ಘೋಷಣೆಯಾದ ಬಳಿಕ ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು. ಒಂದರಿಂದ 5ನೇ ಅವಧಿಯ ಲಾಕ್‍ಡೌನ್‍ವರೆಗೂ ಬಂದ್ ಆಗಿತ್ತು. ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ಗೈಡ್‍ಲೈನ್‍ನಲ್ಲಿ ಪ್ರವಾಸಿ ತಾಣಗಳ ಪುನರಾರಂಭಕ್ಕೆ ಅನುಮತಿ ನೀಡಿರುವುದರಿಂದ ಇದೀಗ ನಾಳೆ (ಜೂ.8)ಯಿಂದ ಕೆಲವು ಮುಂಜಾಗ್ರತಾ ಕ್ರಮದೊಂ ದಿಗೆ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ 76 ದಿನಗಳಿಂದ ಮಂಕು ಕವಿದಿದ್ದ ಅರ ಮನೆಯ ಸೌಂದರ್ಯ ಮತ್ತೆ ಕಂಗೊಳಿಸಲಿದೆ.

ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ: ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಪತ್ರ ಕರ್ತರೊಂದಿಗೆ ಮಾತನಾಡಿ, ಲಾಕ್‍ಡೌನ್‍ನಿಂದಾಗಿ ಬಂದ್ ಆಗಿರುವ ಅರಮನೆಯನ್ನು ನಾಳೆಯಿಂದ ಪುನ ರಾರಂಭ ಮಾಡುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಇದರಿಂದ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಅಗತ್ಯ ಕ್ರಮದೊಂದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇಶ, ವಿದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಅರಮನೆಗೆ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿ ಹಾಗೂ ಪ್ರವಾಸಿಗರ ಸುರಕ್ಷತೆ ನಮ್ಮ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸೂಚಿಸಿರುವ ನಿಯಮ ವನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಅರಮನೆ ಆವರಣ ಪ್ರವೇಶಿಸುವ ಪ್ರತಿಯೊಬ್ಬರೂ ಕಡ್ಡಾಯ ವಾಗಿ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು, ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್ ಮಾಡಲಾಗುತ್ತದೆ ಎಂದರು.

ಪ್ರವಾಸಿಗರು ಹಾಗೂ ಸಿಬ್ಬಂದಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಯಾರಿಗಾ ದರೂ ಕೆಮ್ಮು, ನೆಗಡಿ, ಜ್ವರ ಸಮಸ್ಯೆ ಕಂಡು ಬಂದರೆ ಅಂತಹವರ ಆರೋಗ್ಯ ತಪಾಸಣೆಗೊಳಪಡಿಸಲಾಗುತ್ತದೆ. ವಾತಾವರಣದ ಏರುಪೇರಿಂದ ನೆಗಡಿ, ಕೆಮ್ಮು, ಜ್ವರ ಬಂದಿರಬಹುದಾ ಅಥವಾ ಕೊರೊನಾದಿಂದ ಬಂದಿರ ಬಹುದಾ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಲಾಗು ತ್ತದೆ. ಒಂದು ವೇಳೆ ಕೊರೊನಾ ಶಂಕೆ ವ್ಯಕ್ತವಾದರೆ ಕೂಡಲೆ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗು ತ್ತದೆ. ಸ್ಕ್ಯಾನರ್ ವ್ಯವಸ್ಥೆಯುಳ್ಳ ಹ್ಯಾಂಡ್ ಸ್ಯಾನಿಟೈಸರ್ ನೊಂದಿಗೆ ಮೊಬೈಲ್ ಸ್ಯಾನಿಟೈಸರ್ ಬಳಸಲಾಗುತ್ತಿದೆ ಎಂದರು. ಎಲ್ಲೆಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಜೂನ್ ತಿಂಗಳ ಅಂತ್ಯದವ ರೆಗೂ ವಾರದಲ್ಲಿ 5 ದಿನ ಮಾತ್ರ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಶನಿವಾರ, ಭಾನುವಾರ ಸೇರಿದಂತೆ ಸರ್ಕಾರಿ ರಜೆ ದಿನದಂದು ಅರಮನೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲದೆ ಸಂಜೆ ವೇಳೆ ನಡೆಯುತ್ತಿದ್ದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಹಾಗೂ ಅರಮನೆ ದೀಪಾಲಂಕಾರವನ್ನು ಸ್ಥಗಿತಗೊಳಿಸಲಾಗಿದೆ. ನಾಳೆಯಿಂದ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5ವರೆಗೆ ಅರಮನೆ ವೀಕ್ಷಿಸಬಹುದಾಗಿದೆ. ಒಂದು ಗಂಟೆಗೆ 350 ಮಂದಿ ಅರಮನೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಇದರಿಂದ ದಿನಕ್ಕೆ 3500 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ವರಹಾ ಗೇಟ್ ಹಾಗೂ ಜಯರಾಮ-ಬಲರಾಮ(ಕೋಟೆ ಆಂಜನೇಯಸ್ವಾಮಿ ದೇವಾಲಯ) ಗೇಟ್‍ನಿಂದ ಪ್ರವಾಸಿಗರು ಅರಮನೆ ಪ್ರವೇಶಿಸಬಹುದು. ಎರಡೂ ಗೇಟ್ ಬಳಿಯೂ ದ್ವನಿವರ್ಧಕದ ಮೂಲಕ ಕನ್ನಡ, ಇಂಗ್ಲೀಷ್ ಭಾಷೆಯಲ್ಲಿ ಪ್ರವಾಸಿಗರನ್ನು ಜಾಗೃತಿ ಮೂಡಿಸುವ ಆಡಿಯೋ ಪ್ಲೇ ಮಾಡಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಲಗೇಜ್ ಅನ್ನು ವಾಹನದಲ್ಲೇ ಬಿಟ್ಟು ಬರುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಅರಮನೆ ವೀಕ್ಷಣೆ ವೇಳೆ ಯಾವುದೇ ವಸ್ತುಗಳನ್ನು ಮುಟ್ಟದಂತೆ ಜಾಗೃತಿ ಮೂಡಿಸಲಾಗುತ್ತದೆ. ಅರಮನೆ ಆವರಣದಲ್ಲಿ ಎಲ್ಲೆಂದರಲ್ಲಿ ಉಗುಳುವುದು, ಬಳಸಿದ ಮಾಸ್ಕ್ ಎಸೆಯದಂತೆ ಸೂಚನೆ ನೀಡಲಾಗುತ್ತಿದೆ. ಮಾಸ್ಕ್‍ಗಾಗಿ ಪ್ರತ್ಯೇಕ ಡಸ್ಟಿಬಿನ್ ಇಡಲಾಗಿದ್ದು, ಅದರಲ್ಲೇ ಮಾಸ್ಕ್ ಹಾಕುವಂತೆ ಸೂಚನೆ ನೀಡಲಾಗುತ್ತದೆ ಎಂದು ವಿವರಿಸಿದರು.

Translate »