ಭಕ್ತಾದಿಗಳ ಪ್ರವೇಶಕ್ಕೆ ಧಾರ್ಮಿಕ ಕೇಂದ್ರಗಳು ಸಜ್ಜು
ಮೈಸೂರು

ಭಕ್ತಾದಿಗಳ ಪ್ರವೇಶಕ್ಕೆ ಧಾರ್ಮಿಕ ಕೇಂದ್ರಗಳು ಸಜ್ಜು

June 8, 2020

ಬೆಂಗಳೂರು, ಜೂ.7-ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ವಿಧಿಸ ಲಾಗಿದ್ದ ಲಾಕ್‍ಡೌನ್ ಬಹುತೇಕ ಸಡಿಲ ಗೊಂಡಿದ್ದು, ಸೋಮವಾರದಿಂದ ರಾಜ್ಯದಲ್ಲಿ ಮಾಲ್, ಹೋಟೆಲ್, ರೆಸ್ಟೋರೆಂಟ್, ದೇವ ಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂ ಡೇಶ್ವರಿ ದೇವಸ್ಥಾನ, ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಸ್ಥಾನ ಸೇರಿದಂತೆ ನಗರ ಮತ್ತು ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರ ಗಳಲ್ಲಿ ಪೂರ್ವ ಸಿದ್ಧತೆ ಪೂರ್ಣಗೊಂ ಡಿದ್ದು, ಭಕ್ತಾದಿಗಳು ದೇವರ ದರ್ಶನ ಮಾಡಲು ಸಜ್ಜುಗೊಳಿಸಲಾಗಿದೆ.

ಧಾರ್ಮಿಕ ಕೇಂದ್ರಗಳು ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿದ್ದರೂ, ಹಲವಾರು ನಿರ್ಬಂಧಗಳನ್ನು ವಿಧಿಸಲಾ ಗಿದೆ. ಧಾರ್ಮಿಕ ಕೇಂದ್ರಗಳಲ್ಲಿ ಸಾಮಾ ಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಾಕ್ಸ್‍ಗಳನ್ನು ಬರೆಯಲಾಗಿದೆ. ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಸ್ಯಾನಿಟೈಸ್ ಮಾಡ ಲಾಗಿದೆ. ಪ್ರವೇಶ ದ್ವಾರದಲ್ಲಿ ಭಕ್ತಾದಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಧಾರ್ಮಿಕ ಕೇಂದ್ರ ಗಳ ಎಲ್ಲಾ ಸಿಬ್ಬಂದಿಗೂ ಈಗಾಗಲೇ ಆರೋಗ್ಯ ತಪಾಸಣೆ ನಡೆಸಲಾಗಿದೆ. ಕೊರೊನಾ ತಡೆ ಜಾಗೃತಿ ಫಲಕಗಳನ್ನು ಅಳವಡಿಸಲಾಗಿದೆ. ಅದೇ ರೀತಿ ಮಾಲ್‍ಗಳು, ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳನ್ನು ಸಿದ್ಧತೆ ಮಾಡಿ ಕೊಳ್ಳಲಾಗಿದೆ. ಮಾಲ್‍ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್‍ಗಳನ್ನು ರಚಿಸಲಾಗಿದ್ದು, ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಲ್ಲಾ ಸಿಬ್ಬಂದಿಗೂ ಆರೋಗ್ಯ ತಪಾಸಣೆ ಯನ್ನು ಮಾಡಲಾಗಿದೆ. ಹೋಟೆಲ್‍ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಟೇಬಲ್‍ಗಳನ್ನು ವ್ಯವಸ್ಥಿತವಾಗಿ ಜೋಡಿಸಲಾಗಿದೆ. ಪ್ರವೇಶ ದ್ವಾರದಲ್ಲಿರುವ ಸಿಬ್ಬಂದಿಗೆ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ನೀಡುವ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ. ಪಾಲಿಕೆಯ ಆರೋಗ್ಯಾಧಿಕಾರಿಗಳು ಹಲವೆಡೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ದೇವಾಲಯಗಳು ಹಾಗೂ ಚರ್ಚ್ ಮತ್ತು ಮಸೀದಿಗಳಲ್ಲಿ ಭಾನುವಾರ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದುದು ಕಂಡು ಬಂತು. ಆಯಾಯ ಆಡಳಿತ ಮಂಡಳಿಗಳು ಜವಾಬ್ದಾರಿ ವಹಿಸಿಕೊಂಡು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ, ಎಲ್ಲವೂ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಂಡಿವೆ.

ದೇಗುಲ, ಚರ್ಚ್, ಮಸೀದಿಗಳಲ್ಲಿ ಸಿದ್ಧತೆ
ಮೈಸೂರು, ಜೂ.7(ಆರ್‍ಕೆಬಿ)- ಕೊರೊನಾ ಹಿನ್ನೆಲೆಯ ಲಾಕ್ ಡೌನ್ ನಿಯಮಗಳನ್ನು ಸಡಿಲಿಸಿದ್ದರಿಂದ ಮಂದಿರ, ಮಸೀದಿ, ಚರ್ಚ್ ಗಳನ್ನು ಸೋಮವಾರದಿಂದ ತೆರೆಯಲು ಅನುಮತಿ ದೊರೆತಿದ್ದು, ಮೈಸೂರಿನ ಪ್ರಮುಖ ದೇವಾ ಲಯಗಳು, ಚರ್ಚ್ ಹಾಗೂ ಮಸೀದಿಗಳಲ್ಲಿ ಸರ್ಕಾರದ ಮಾರ್ಗ ಸೂಚಿಯಂತೆಯೇ ಎಲ್ಲಾ ಸಿದ್ಧತೆ ಗಳನ್ನು ಮಾಡಲಾಗಿದೆ. ಮುಖ್ಯ ವಾಗಿ, ಸ್ಯಾನಿಟೈಸರ್, ಮಾಸ್ಕ್ ಬಳಕೆ ಕಡ್ಡಾಯಗೊಳಿಸಿದ್ದು, ಭಕ್ತರ ನಡುವೆ ಅಂತರ ಕಾಯ್ದು ಕೊಳ್ಳಲು 4-5 ಅಡಿಗೊಂದರಂತೆ ವೃತ್ತ/ಬಾಕ್ಸ್ ಗಳನ್ನು ಗುರುತು ಮಾಡಲಾಗಿದೆ. ಈಗಾಗಲೇ ಚಾಮುಂಡಿಬೆಟ್ಟ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಒಂಟಿಕೊಪ್ಪಲ್ ವೆಂಕಟರಮಣ ಸ್ವಾಮಿ ದೇವಸ್ಥಾನ, ಯೋಗಾನರಸಿಂಹಸ್ವಾಮಿ ದೇವಸ್ಥಾನs ಸೇರಿದಂತೆ ಮೈಸೂರು ನಗರದ ಎಲ್ಲಾ ದೇವಾಲಯಗಳಲ್ಲೂ ಜನರು ಅಂತರ ಕಾಯ್ದು ಕೊಂಡು ದೇವರ ದರ್ಶನ ಪಡೆಯಲುಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೈಸೂರಿನ ಪ್ರಮುಖವಾದ ಸಂತ ಫಿಲೋಮಿನಾ ಮತ್ತಿತರ ಚರ್ಚ್‍ಗಳಲ್ಲಿ ಹಾಗೂ ಹಲವು ಮಸೀದಿಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡೇ ಪ್ರಾರ್ಥನೆ ಸಲ್ಲಿಸಲು ಪೇಂಟ್‍ನಿಂದ ಬಾಕ್ಸ್ ಗುರುತುಗಳನ್ನು ಹಾಕಲಾಗಿದೆ. ಸಂತ ಫಿಲೋಮಿನಾ ಚರ್ಚ್‍ನ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಇಡಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ. ಹೊರಹೋಗುವುದಕ್ಕೆ ಪ್ರತ್ಯೇಕ ದ್ವಾರದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಬೆಂಚ್‍ನಲ್ಲಿ ಇಬ್ಬರಷ್ಟೇ ಕುಳಿತು ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ. ಮುಖ್ಯ ಹಾಲ್‍ನ ಸಾಮಥ್ರ್ಯಕ್ಕೆ ತಕ್ಕಷ್ಟು ಭಕ್ತರಿಗೆ ಮಾತ್ರ ಒಳಪ್ರವೇಶ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮೈಸೂರಿನ ಮಂಡಿ ಮೊಹಲ್ಲಾ, ಅಶೋಕ ರಸ್ತೆಯ ಆಜûಂ-ಇ-ಮಸ್ಜಿದ್‍ನಲ್ಲಿಯೂ ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಪ್ರಾರ್ಥನೆಗೆ ಸಿದ್ಧತೆ ಕೈಗೊಳ್ಳಲಾಗಿದೆ. 4-5 ಅಡಿಗೊಂದರಂತೆ ಬಾಕ್ಸ್ ಗುರುತು ಮಾಡಲಾಗಿದ್ದು, ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸ್ಯಾನಿಟೈಸರ್, ಮಾಸ್ಕ್ ಬಳಕೆ ಕಡ್ಡಾಯಗೊಳಿಸಲಾಗಿದೆ.

`ಚರ್ಚ್‍ಗಳಿಗೆ ಬೆಳಿಗ್ಗೆಯಿಂದಲೇ ಪ್ರವೇಶ’: ಸರ್ಕಾರದ ನಿಯಮಗಳಂತೆಯೇ ಸಂತ ಫಿಲೋಮಿನಾ ಚರ್ಚ್ ಸೇರಿದಂತೆ ಮೈಸೂರಿನಲ್ಲಿನ ಚರ್ಚ್‍ಗಳಲ್ಲಿ ಸೋಮವಾರದಿಂದ ಸಾರ್ವಜನಿಕರಿಗೆ ಪ್ರವೇಶ ನೀಡಲಾಗುತ್ತದೆ ಎಂದು ಮೈಸೂರು ಬಿಷಪ್ ಕೆ.ಎ.ವಿಲಿಯಂ ತಿಳಿಸಿದ್ದಾರೆ. ಮೊದಲು ಪ್ರಾರ್ಥನೆ ನಡೆಯಲಿದೆ. ಬಲಿಪೂಜೆ ನಂತರ ಬೆಳಿಗ್ಗೆ 5.30ರಿಂದ ಸಾರ್ವಜನಿಕರಿಗೆ ಪ್ರವೇಶ ಅವಕಾಶ. ಚರ್ಚ್ ಹೊರಭಾಗದಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಇದೆ. ಚರ್ಚ್ ಒಳಭಾಗ ಅಂತರ ಕಾಯ್ದುಕೊಳ್ಳಲು ಗುರುತು ಹಾಕಲಾಗಿದೆ. ಒಮ್ಮೆಗೆ 50 ಜನರಿಗಷ್ಟೇ ಪ್ರವೇಶ. ಕ್ಯಾಂಡಲ್ ಹಚ್ಚಲು, ಮೂರ್ತಿಗಳನ್ನು ಮುಟ್ಟಿ ನಮಸ್ಕರಿಸಲು ಅವಕಾಶವಿಲ್ಲ. ಅಂತರ ಕಾಯ್ದುಕೊಂಡು ಸಾಮೂಹಿಕ ಪ್ರಾರ್ಥನೆ ಮಾಡಬಹುದು. ವೈಯಕ್ತಿಕ ಸಂಭಾಷಣೆ, ಕಷ್ಟಗಳ ನಿವೇದÀನೆಗೂ ಅವಕಾಶವಿಲ್ಲ ಎಂದು ಬಿಷಪ್ ತಿಳಿಸಿದ್ದಾರೆ.

`ಮೊದಲ ನಮಾಜ್ ವೇಳೆಗೇ ಮಸೀದಿ ಪ್ರವೇಶ’: ಸೋಮವಾರ ಬೆಳಿಗ್ಗೆ 5.25ರ ಮೊದಲ ನಮಾಜ್‍ನೊಂದಿಗೆ ಮೈಸೂರಿನ ಮಸೀದಿಗಳಲ್ಲಿ ಭಕ್ತರಿಗೆ ಪ್ರವೇಶ ಆರಂಭವಾಗಲಿದೆ ಎಂದು ಮೈಸೂರಿನ ಸರ್ಖಾಜಿ ಮೊಹಮ್ಮದ್ ಉಸ್ಮಾನ್ ಷರೀಫ್ ಸಾಹೇಬ್ ಭಾನುವಾರ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಸರ್ಕಾರದ ಮಾರ್ಗಸೂಚಿ ಯಂತೆಯೇ ಮಸೀದಿಗೆ ಬರುವವರಿಗೆ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ. ಅದಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳಲು ಅವಕಾಶವಾಗುವಂತೆ ಬಣ್ಣದಲ್ಲಿ ಗುರುತು ಮಾಡಲಾಗಿದೆ. ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವಂತೆ ಎಲ್ಲರಿಗೂ ಸೂಚಿಸಲಾಗಿದೆ ಎಂದರು

ದತ್ತಪೀಠ, ವೆಂಕಟೇಶ್ವರ ದೇಗುಲ ಬೆಳಗ್ಗೆ 7ಕ್ಕೆ ಪ್ರವೇಶಾವಕಾಶ
ಮೈಸೂರಿನ ಊಟಿ ರಸ್ತೆಯಲ್ಲಿರುವ ಅವಧೂತ ದತ್ತ ಪೀಠದ ದತ್ತಾತ್ರೇಯ ದೇವಾಲಯ ಮತ್ತು ಶ್ರೀ ವೆಂಕ ಟೇಶ್ವರ ದೇವಾಲಯ ಸೋಮವಾರದಿಂದ ಬಾಗಿಲು ತೆರೆಯಲಿದ್ದು, ಪ್ರತಿದಿನ ಬೆಳಗ್ಗೆ 7ರಿಂದ 10ರವರೆಗೆ, ಸಂಜೆ 6ರಿಂದ 7.30ರವರೆಗೆ ದೇಗುಲ ಪ್ರವೇಶಕ್ಕೆ ಅವಕಾಶವಿದೆ. ಮಾರ್ಗಸೂಚಿ ಪ್ರಕಾರವೇ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ದತ್ತಪೀಠದ ಪ್ರಕಟಣೆ ತಿಳಿಸಿದೆ.

ದೇವಾಲಯಕ್ಕೆ ಬಂದು, ಹೊರ ಹೋಗುವವರೆಗೂ ಮಾಸ್ಕ್ ಧರಿಸುವುದು ಕಡ್ಡಾಯ. ಪ್ರವೇಶ ದ್ವಾರದ ಬಳಿಯೇ ಸ್ಯಾನಿಟೈಸರ್ ಬಳಸಬೇಕು. ಅಂತರ ಕಾಯ್ದು ಕೊಳ್ಳುವ ಸಲುವಾಗಿ ಬಾಕ್ಸ್ ಗುರುತು ಹಾಕಲಾಗಿದ್ದು, ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಕ್ವಾರಂ ಟೈನ್ ಮುದ್ರೆ ಇರುವವರಿಗೆ, ಕೊರೊನಾ ಸೋಂಕು ಲಕ್ಷಣ ಇರುವವರಿಗೆ ಹಾಗೂ 10 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವರಿಗೆ ದೇವಾಲಯದೊಳಗೆ ಪ್ರವೇಶವಿಲ್ಲ. ಭಕ್ತರು ಪಾದರಕ್ಷೆಗಳನ್ನು ತಮ್ಮ ವಾಹನದಲ್ಲೇ ಬಿಟ್ಟು ಬರಬೇಕು. ದೇವಾ ಲಯ ಪ್ರವೇಶಕ್ಕೆ ಮುನ್ನ ಕೈಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ದೇವಾ ಲಯದಲ್ಲಿ ತೀರ್ಥ, ಪ್ರಸಾದ ಇರುವುದಿಲ್ಲ. ಕುಳಿತು ಧ್ಯಾನ ಮಾಡಲು ಅವಕಾಶವಿಲ್ಲ. ದೇವರ ದರ್ಶನದ ಬಳಿಕ ಕೂಡಲೇ ದೇಗುಲದಿಂದ ಹೊರಡಬೇಕು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪ್ರತಿ ಭಾನುವಾರ ಬೆಳಿಗ್ಗೆ 9 ಗಂಟೆಗೆ ದರ್ಶನ ನೀಡುವರು. ಶುಕವನ, ಬೋನ್ಸಾಯ್ ವನ, ವಿಶ್ವಂ ಸಂಗ್ರಹಾಲಯ ತೆರೆದಿರುವುದಿಲ್ಲ. ಭಕ್ತರು ಆಶ್ರಮದಲ್ಲಿ ರಾತ್ರಿ ತಂಗಲು ಅವಕಾಶವಿಲ್ಲ. ಭಕ್ತರು ದೇವಾಲಯದ ಸಿಬ್ಬಂದಿಯೊಡನೆ ಸಹಕರಿಸಬೇಕು ಎಂದು ದತ್ತಪೀಠದ ಪ್ರಕಟಣೆ ತಿಳಿಸಿದೆ.

Translate »