ಯುವ ಸಮುದಾಯ ವೀರ ಸಾವರ್ಕರ್ ಆದರ್ಶ ಮೈಗೂಡಿಸಿಕೊಂಡರೆ ದೇಶ ಬಲಿಷ್ಠ
ಮೈಸೂರು

ಯುವ ಸಮುದಾಯ ವೀರ ಸಾವರ್ಕರ್ ಆದರ್ಶ ಮೈಗೂಡಿಸಿಕೊಂಡರೆ ದೇಶ ಬಲಿಷ್ಠ

May 29, 2020

ಮೈಸೂರು, ಮೇ 28(ಪಿಎಂ)- ವೀರ ಸಾವರ್ಕರ್ ಅವರ ಆದರ್ಶಗಳನ್ನು ಯುವ ಸಮುದಾಯ ಮೈಗೂಡಿಸಿಕೊಂಡರೆ ನಮ್ಮ ದೇಶ ಬಲಿಷ್ಠವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿ ಅಭಿಪ್ರಾಯಪಟ್ಟರು.

ಮೈಸೂರಿನ ಶಿವರಾಂಪೇಟೆಯ ಶ್ರೀ ತ್ರಿಪುರ ಭೈರವಿ ಮಠದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ವೀರ ಸಾವರ್ಕರ್ ಯುವ ಬಳಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿನಾಯಕ ದಾಮೋದರ್ ಸಾವರ್ಕರ್ ಅವರ 137ನೇ ಜಯಂತಿ ಹಾಗೂ ಬಳಗದ 15ನೇ ವಾರ್ಷಿಕೋತ್ಸವ ಉದ್ಘಾಟಿಸಿ ವೀರ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ವೀರ ಸಾವರ್ಕರ್ ಅಪ್ರತಿಮ ದೇಶ ಭಕ್ತರು. ಅಂತಹ ಮಹನೀಯರ ಜಯಂತಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಸಾವರ್ಕರ್ ಮತ್ತು ಅವರ ಇಡೀ ಕುಟುಂಬದ ತ್ಯಾಗ ದೊಡ್ಡದಿದೆ. ಬಳಗದಿಂದ ಸತತ 15 ವರ್ಷಗಳಿಂದ ಸಾವರ್ಕರ್ ಜಯಂತಿ ಆಚರಿಸಿಕೊಂಡು ಬರುತ್ತಿರುವುದು ಪ್ರಶಂಸನೀಯ. ಸಾವರ್ಕರ್ ಅವರನ್ನು ಯುವ ಜನಾಂಗ ಸ್ಫೂರ್ತಿ ಯಾಗಿಸಿಕೊಳ್ಳುವ ಮೂಲಕ ಅವರ ಆದರ್ಶ ಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಉತ್ತೇಜಿಸಿದರು. ಸಂಸದ ಪ್ರತಾಪ್ ಸಿಂಹ ಮಾತನಾಡಿ, 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದಿತ್ತು. ಇದನ್ನು ಸಿಪಾಯಿ ದಂಗೆ ಎನ್ನುವ ಮೂಲಕ ಸ್ವಾತಂತ್ರ್ಯ ಹೋರಾಟದ ದಿಕ್ಕು ತಪ್ಪಿಸಿದ್ದರು. ಇಂತಹ ಸಂದರ್ಭದಲ್ಲಿ ಅಧ್ಯಯನ ಹಾಗೂ ಸಂಶೋಧನೆ ನಡೆಸಿ, ಅದು `ಸಿಪಾಯಿ ದಂಗೆ’ಯಲ್ಲ, `ಮೊದಲ ಸ್ವಾತಂತ್ರ್ಯ ಸಂಗ್ರಾಮ’ ಎಂಬ ಸತ್ಯಸಂಗತಿಯನ್ನು ಬೆಳಕಿಗೆ ತಂದ ವೀರಸಾವರ್ಕರ್, ಈ ಬಗ್ಗೆ ಪುಸ್ತಕ ವನ್ನೂ ಬರೆದು ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿಸಿದರು. ಆದರೆ ಕಾಂಗ್ರೆಸ್ ನವರು ಬ್ರಿಟಿಷರು ಹೇಳಿದಂತೆ `ಸಿಪಾಯಿ ದಂಗೆ’ ಎಂದು ಕೈಕಟ್ಟಿ ಕುಳಿತಿದ್ದರು ಎಂದು ಟೀಕಿಸಿದರು. ಅದೇ ಕಾಂಗ್ರೆಸ್‍ನವರು ಇಂದು ಬೆಂಗಳೂರಿನ ಯಲಹಂಕದ ಮೇಲ್ಸೇ ತುವೆಗೆ ವೀರ ಸಾವರ್ಕರ್ ಹೆಸರಿಡಲು ವಿರೋಧಿಸುತ್ತಿದ್ದಾರೆ. ಆ ಮೂಲಕ ಕಾಂಗ್ರೆಸ್ ನವರು ತಮ್ಮ ಬೌದ್ಧಿಕ ದಿವಾಳಿತನ ಪ್ರದರ್ಶಿ ಸುತ್ತಿದ್ದಾರೆ ಎಂದು ಕಿಡಿಕಾರಿದರು.

ಹಾದಿ-ಬೀದಿ, ಪಾರ್ಕ್, ವಿಮಾನ ನಿಲ್ದಾಣ ಸೇರಿದಂತೆ ಕೇಂದ್ರ ಸರ್ಕಾರದ 250ಕ್ಕೂ ಹೆಚ್ಚು ಯೋಜನೆಗಳಿಗೆ ನೆಹರು, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಹೆಸರನ್ನೇ ಇರಿಸಿದ್ದಾರೆ. ಆದರೆ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹೆಸರನ್ನು ಒಂದು ಮೇಲ್ಸೇತುವೆಗೆ ನಾಮಕರಣ ಮಾಡುವುದಕ್ಕೆ ವಿರೋಧಿಸುತ್ತಾರೆ ಎಂದು ಹರಿಹಾಯ್ದರು.

ಶ್ರೀ ತ್ರಿಪುರ ಭೈರವಿ ಮಠದ ಶ್ರೀ ಮಹಂತ ಕೆ.ಕೃಷ್ಣಮೋಹನಾನಂದ ಗಿರಿಗೋಸ್ವಾಮಿ ಸಾನಿಧ್ಯ ವಹಿಸಿದ್ದರು. ಶಾಸಕ ನಾಗೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದ ರಾಜು, ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಬಿಜೆಪಿ ಮುಖಂಡರಾದ ಅಪ್ಪಣ್ಣ, ಮೈ.ಕಾ. ಪ್ರೇಮ್‍ಕುಮಾರ್, ಬಿ.ಎಂ.ರಘು, ಲಕ್ಷ್ಮೀ ದೇವಿ, ಬಳಗದ ಅಧ್ಯಕ್ಷ ರಾಕೇಶ್ ಭಟ್, ಕಾರ್ಯದರ್ಶಿ ದೀಪಕ್, ಮುಖಂಡರಾದ ಸಂದೇಶ್ ಪವಾರ್, ಸಂಜಯ್, ವಿಕ್ರಮ್ ಅಯ್ಯಂಗಾರ್, ಟಿ.ಎಸ್.ಅರುಣ್, ಅಜಯ್ ಶಾಸ್ತ್ರಿ, ಗುರುರಾಜ್ ಶೆಟ್ಟಿ, ಸಚಿನ್, ಪ್ರಮೋದ್ ಗೌಡ, ಎಸ್.ಎನ್.ರಾಜೇಶ್, ರವಿ ಕುಂಚಿಟಿಗ, ಉಮಾಶಂಕರ್, ಗೈಡ್ ಚಂದ್ರು, ಅನೂಜ್ ಸಾರಸ್ವತ್, ರಾಜೇಂದ್ರ ಮತ್ತಿತರರಿದ್ದರು.

Translate »