ಮೈಸೂರು, ಮೇ 24(ಎಂಟಿವೈ)-ಲಾಕ್ ಡೌನ್ ಹಿನ್ನೆಲೆ ಚಾಮುಂಡಿಬೆಟ್ಟಕ್ಕೆ ಭಕ್ತರು ಹಾಗೂ ಪ್ರವಾಸಿಗರ ಪ್ರವೇಶವನ್ನು ನಿರ್ಬಂ ಧಿಸಿರುವ ಹಿನ್ನೆಲೆಯಲ್ಲಿ ಆಹಾರವಿಲ್ಲದೆ ಕಂಗೆಟ್ಟಿದ್ದ ಕೋತಿ ಹಾಗೂ ಪಕ್ಷಿಗಳಿಗೆ ಮೈಸೂರಿನ ನಾಲ್ವರು ಯುವಕರ ತಂಡ ಕಳೆದ 20 ದಿನಗಳಿಂದ ಆಹಾರ ಹಾಗೂ ಕುಡಿ ಯಲು ನೀರು ಪೂರೈಸುವ ಮಹತ್ತರ ಸೇವೆ ಯನ್ನು ಸದ್ದಿಲ್ಲದೇ ಸಲ್ಲಿಸುತ್ತಾ ಬಂದಿದ್ದಾರೆ.
ಮೈಸೂರಿನ ಸರಸ್ವತಿಪುರಂನಲ್ಲಿ ಎಚ್‍ಡಿ ಎಫ್‍ಸಿ ಬ್ಯಾಂಕ್ ಮ್ಯಾನೇಜರ್ ಆಗಿರುವ ಹರೀಶ್, ಡಿ.ಪಿ.ಧರಣಿ, ಸಾಫ್ಟ್‍ವೇರ್ ಇಂಜಿ ನಿಯರ್‍ಗಳಾದ ವೈ.ದೀಪಕ್, ನಂದೀಶ್ ಎಂಬ ಸಮಾನ ಮನಸ್ಕ ಯುವಕರ ತಂಡ ಚಾಮುಂಡಿಬೆಟ್ಟದ ರಸ್ತೆ ಹಾಗೂ ಮೆಟ್ಟಿಲು ಮಾರ್ಗದಲ್ಲಿ ಭಕ್ತರು ಹಾಗೂ ಪ್ರವಾಸಿ ಗರು ನೀಡುವ ಆಹಾರವನ್ನೇ ಅವಲಂಬಿ ಸಿದ್ದ ನೂರಾರು ಕೋತಿಗಳಿಗೆ ಆಹಾರ ನೀಡುವುದಲ್ಲದೇ, ಸಾವಿರಾರು ಪಕ್ಷಿ ಗಳಿಗೂ ದಿನಸಿ ಹಾಗೂ ನೀರನ್ನು ಸರಬರಾಜು ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸಂಕಷ್ಟದಲ್ಲಿದ್ದವು: ಈ ಕುರಿತಂತೆ `ಮೈಸೂರು ಮಿತ್ರ’ನೊಂದಿಗೆ ಹರೀಶ್ ಮಾತ ನಾಡಿ, ಲಾಕ್‍ಡೌನ್‍ನಿಂದಾಗಿ ಚಾಮುಂಡಿ ಬೆಟ್ಟಕ್ಕೆ ಭಕ್ತರು ಹಾಗೂ ಪ್ರವಾಸಿಗರ ಪ್ರವೇ ಶಕ್ಕೆ ನಿರ್ಬಂಧಿಸಲಾಗಿದೆ. ಇದರಿಂದ ಭಕ್ತರು ನೀಡುವ ಆಹಾರವನ್ನೇ ಅವಲಂಬಿಸಿದ್ದ ನೂರಾರು ಕೋತಿಗಳು ಸಂಕಷ್ಟಕ್ಕೆ ಈಡಾ ಗಿದ್ದವು. ಲಾಕ್‍ಡೌನ್ ಆರಂಭದಲ್ಲಿ ಕೆಲವರು ಕೋತಿಗಳಿಗೆ ಆಹಾರ ಪೂರೈಸಿದ್ದರು. ಆದರೆ ನಿರಂತರವಾಗಿ ಸೇವಾ ಕಾರ್ಯ ನಡೆಯದ ಹಿನ್ನೆಲೆಯಲ್ಲಿ ಕೋತಿ ಹಾಗೂ ಪಕ್ಷಿಗಳಿಗೆ ತೊಂದರೆಯಾಗಿತ್ತು. ಇದನ್ನು ಗಮನಿಸಿದ ನಾವು ನಾಲ್ವರು ಸ್ನೇಹಿತರೊಡಗೂಡಿ ಕಳೆದ 20 ದಿನದಿಂದ ಚಾಮುಂಡಿಬೆಟ್ಟದಲ್ಲಿರುವ ಕೋತಿಗಳಿಗೆ ಹಾಗೂ ನೂರಾರು ಪಕ್ಷಿ ಗಳಿಗೆ ಆಹಾರ ಸರಬರಾಜು ಮಾಡುವ ಸೇವೆ ಮಾಡುತ್ತಿದ್ದೇವೆ.
ಚಾಮುಂಡಿಬೆಟ್ಟದಲ್ಲಿ 25 ಸ್ಥಳವನ್ನು ಗುರುತಿಸಲಾಗಿದೆ. ಅಲ್ಲಿ ನೀರಿನ ಡಬ್ಬಿ ಇಡ ಲಾಗಿದೆ. ಪ್ರತೀ ದಿನ 20 ಲೀಟರ್‍ನ 10 ಕ್ಯಾನ್ ನೀರನ್ನು ತೆಗೆದುಕೊಂಡು ಹೋಗಿ ಪಕ್ಷಿ ಹಾಗೂ ಕೋತಿಗಳಿಗೆ ನೀರುಣಿಸಲಾಗುತ್ತದೆ. ಪ್ರತೀ ದಿನ 10 ಕೆ.ಜಿ. ಬಾಳೆಹಣ್ಣು, ಬಿಸೆÀ್ಕಟ್, ಬ್ರೆಡ್ ಕೋತಿಗಳಿಗೆ ನೀಡುತ್ತಿ ದ್ದೇವೆ. ಮುಂದಿನ ದಿನಗಳಲ್ಲಿ ವಿವಿಧ ಬಗೆಯ ಹಣ್ಣುಗಳನ್ನು ನೀಡಬೇಕೆಂಬ ಉದ್ದೇಶವಿದೆ. ಅಲ್ಲದೇ ಮಾರ್ಗದುದ್ದಕ್ಕೂ ಪಕ್ಷಿಗಳಿಗೆ ದವಸ, ಧಾನ್ಯ ನೀಡುತ್ತಿದ್ದೇವೆ. ಇದಕ್ಕೆ ಬೇಕಾಗುವ ಹಣವನ್ನು ನಾಲ್ವರು ಸ್ನೇಹಿತರು ಭರಿಸುತ್ತಿದ್ದೇವೆ ಎಂದರು.